ಬೆಂಗಳೂರು: ಬಿಜೆಪಿ ಸರ್ಕಾರದ ಅವಧಿಯಲ್ಲಿ ವಿವಿಧ ಇಲಾಖೆಗಳ ಕಾಮಗಾರಿಗಳಲ್ಲಿ ಶೇಕಡ 40ರಷ್ಟು ಕಮಿಷನ್ ಪಡೆಯಲಾಗುತ್ತಿತ್ತು ಎಂಬ ಆರೋಪಕ್ಕೆ ಸಂಬಂಧಿಸಿದಂತೆ ರಾಜ್ಯ ಗುತ್ತಿಗೆದಾರರ ಸಂಘವು ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ನೇತೃತ್ವದ ಆಯೋಗಕ್ಕೆ ಮಂಗಳವಾರ ದೂರು ದಾಖಲಿಸಿದೆ.
ಇತರ ಪದಾಧಿಕಾರಿಗಳೊಂದಿಗೆ ನಿಯೋಗದಲ್ಲಿ ತೆರಳಿ ನಾಗಮೋಹನ್ ದಾಸ್ ಅವರನ್ನು ಭೇಟಿ ಮಾಡಿದ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ, ದೂರು ಮತ್ತು 600ಕ್ಕೂ ಹೆಚ್ಚು ಪುಟಗಳಷ್ಟು ದಾಖಲೆಗಳನ್ನು ಸಲ್ಲಿಸಿದರು.
‘ಬಿಜೆಪಿ ನೇತೃತ್ವದ ಹಿಂದಿನ ಸರ್ಕಾರದ ಅವಧಿಯಲ್ಲಿ ಕಾಮಗಾರಿಗಳಲ್ಲಿ ಶೇ 40ರಷ್ಟು ಕಮಿಷನ್ ಪಡೆಯಲಾಗುತ್ತಿದೆ’ ಎಂದು ಕೆಂಪಣ್ಣ ಅವರು ಪ್ರಧಾನಿ ನರೇಂದ್ರ ಮೋದಿ, ರಾಜ್ಯಪಾಲರು ಹಾಗೂ ಅಂದಿನ ಮುಖ್ಯಮಂತ್ರಿಯವರಿಗೆ ದೂರು ಸಲ್ಲಿಸಿದ್ದರು. ಅವರ ದೂರೂ ಸೇರಿದಂತೆ ಹಲವು ಅಂಶಗಳ ಕುರಿತು ತನಿಖೆಗಾಗಿ ಆಯೋಗವನ್ನು ನೇಮಿಸಲಾಗಿದೆ.
ದೂರು ಸಲ್ಲಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಕೆಂಪಣ್ಣ, ‘ವಿವಿಧ ಇಲಾಖೆಗಳ ಕಾಮಗಾರಿಗಳಲ್ಲಿನ ಭ್ರಷ್ಟಾಚಾರದ ಕುರಿತು ದಾಖಲೆ ಸಹಿತ ದೂರು ಸಲ್ಲಿಸಿದ್ದೇವೆ. ನಮ್ಮ ಬಳಿ ಲಭ್ಯವಿರುವ ದಾಖಲೆಗಳನ್ನು ಆಯೋಗಕ್ಕೆ ಹಸ್ತಾಂತರಿಸಿದ್ದೇವೆ’ ಎಂದರು.
ಇನ್ನಷ್ಟು ದಾಖಲೆಗಳನ್ನು ಸಂಗ್ರಹಿಸಲು ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿಗಳನ್ನು ಸಲ್ಲಿಸಲಾಗಿದೆ. ಆ ಮಾಹಿತಿಗಳು ಕೈಸೇರಿದ ಬಳಿಕ ಆಯೋಗಕ್ಕೆ ಸಲ್ಲಿಸಲಾಗುವುದು. ಆಯೋಗದ ವಿಚಾರಣೆ ವೇಳೆಯೂ ಸಾಕ್ಷ್ಯಗಳನ್ನು ಒದಗಿಸಲಾಗುವುದು ಎಂದು ತಿಳಿಸಿದರು.
‘ಬಿಜೆಪಿ ನೇತೃತ್ವದ ಹಿಂದಿನ ಸರ್ಕಾರದಲ್ಲಿ ಇದ್ದಂತೆ ಕಾಂಗ್ರೆಸ್ ನೇತೃತ್ವದ ಈಗಿನ ಸರ್ಕಾರದಲ್ಲೂ ಭ್ರಷ್ಟಾಚಾರವಿದೆ. ಈಗ ಕೆಲವು ಇಲಾಖೆಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಕುರಿತೂ ಆಯೋಗಕ್ಕೆ ದಾಖಲೆ ಸಲ್ಲಿಸಿದ್ದೇವೆ’ ಎಂದು ಕೆಂಪಣ್ಣ ಹೇಳಿದರು.
ರಾಜ್ಯ ಗುತ್ತಿಗೆದಾರರ ಸಂಘದ ಕಾರ್ಯಾಧ್ಯಕ್ಷರಾದ ಮಂಜುನಾಥ್, ಸಂಕಾಗೌಡಶಾನಿ, ಉಪಾಧ್ಯಕ್ಷ ಬಿ.ಸಿ. ದಿನೇಶ್, ಪ್ರಧಾನ ಕಾರ್ಯದರ್ಶಿ ಜಿ.ಎಂ. ರವೀಂದ್ರ ನಿಯೋಗದಲ್ಲಿದ್ದರು.
ತನಿಖೆಗೆ ಸಜ್ಜು: ದೂರುಗಳ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ನಾಗಮೋಹನ್ ದಾಸ್, ‘ಆನ್‌ಲೈನ್ ಮೂಲಕ ಹಾಗೂ ನೇರವಾಗಿ ನೂರಾರು ದೂರುಗಳು ಬಂದಿವೆ. ಆರೋಪಗಳಲ್ಲಿ ಮೇಲ್ನೋಟಕ್ಕೆ ಸತ್ಯಾಂಶವಿದೆಯೇ ಎಂಬುದನ್ನು ಪರಿಶೀಲಿಸಲಾಗುವುದು. ಆ ಬಳಿಕ ವಿಚಾರಣೆ ಆರಂಭಿಸಲಾಗುವುದು’ ಎಂದರು.
ಆಯೋಗವು ಆನ್‌ಲೈನ್ ಮೂಲಕ ಹಾಗೂ ನೇರವಾಗಿ ದೂರು ಸಲ್ಲಿಸಲು ಅವಕಾಶ ನೀಡಿದೆ. ದೂರು ಸಲ್ಲಿಸಲು ನೀಡಿರುವ ಗಡುವು ಬುಧವಾರ ಮುಕ್ತಾಯವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.