ಬೆಂಗಳೂರು: ಈ ಬಾರಿಯ ವಿಪರೀತ ಬಿಸಿಲು, ಸೆಕೆ ವಿದ್ಯುತ್ ಬಳಕೆಯನ್ನು ಹೆಚ್ಚಿಸಿದೆ. ಹೀಗಾಗಿ, ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ವ್ಯಾಪ್ತಿಯಲ್ಲಿ ಗೃಹ ಬಳಕೆಗೆ ತಿಂಗಳಿಗೆ ಸರಾಸರಿ 4.3 ಕೋಟಿ ಯೂನಿಟ್ ಹೆಚ್ಚುವರಿಯಾಗಿ ಬಳಕೆಯಾಗಿದೆ.
ರಾಜ್ಯ ಸರ್ಕಾರದ ‘ಗೃಹಜ್ಯೋತಿ’ ಯೋಜನೆಯಿಂದಾಗಿ ಗ್ರಾಹಕರು ವಿದ್ಯುತ್ ಬಿಲ್ಲಿನ ದೊಡ್ಡ ಹೊರೆಯಿಂದ ತಪ್ಪಿಸಿಕೊಂಡಿದ್ದಾರೆ. ಆದರೂ ನಿಗದಿಗಿಂತ ಹೆಚ್ಚಿನ ಬಳಕೆಗೆ ಹಣ ಪಾವತಿ ಮಾಡಬೇಕಿದೆ. ಇದರಿಂದ ಮಾರ್ಚ್ ತಿಂಗಳು ಒಂದರಲ್ಲಿಯೇ ಬೆಸ್ಕಾಂಗೆ ₹ 47.18 ಕೋಟಿ ಪಾವತಿಯಾಗಿದೆ.
‘ನಮಗೆ ತಿಂಗಳಿಗೆ ₹600 ಬಿಲ್ ಬರುತ್ತಿತ್ತು. ಗೃಹಜ್ಯೋತಿಯಿಂದಾಗಿ ₹60 ಮಾತ್ರ ಪಾವತಿಸಬೇಕಿತ್ತು. ಸೆಕೆ ವಿಪರೀತವಾಗಿರುವುದರಿಂದ ಫ್ಯಾನ್ ಮತ್ತು ಕೂಲರ್ ಹೆಚ್ಚು ಬಳಕೆಯಾಯಿತು. ಇದರಿಂದ ಏಪ್ರಿಲ್‌ನಲ್ಲಿ ₹850 ಬಿಲ್ ಬಂದಿದೆ. ₹255 ಮಾತ್ರ ಪಾವತಿ ಮಾಡಬೇಕಿದೆ. ಗೃಹಜ್ಯೋತಿ ಯೋಜನೆಯಲ್ಲದೇ ಇದ್ದಿದ್ದರೆ ಅಷ್ಟೂ ಮೊತ್ತ ಕಟ್ಟಬೇಕಿತ್ತು’ ಎಂದು ಸುಬ್ರಹ್ಮಣ್ಯನಗರ ನಿವಾಸಿ ಎಚ್.ಸಿ. ರಮೇಶ್ ತಿಳಿಸಿದರು.
‘200 ಯೂನಿಟ್‌ವರೆಗೆ ಉಚಿತವಿದ್ದರೂ ಪ್ರತಿಯೊಬ್ಬರಿಗೂ 200 ಯುನಿಟ್ ಎಂದರ್ಥವಲ್ಲ. ಅದು ಗರಿಷ್ಠ ಮಿತಿ. ತಿಂಗಳಿಗೆ ಬಳಕೆ ಮಾಡುತ್ತಿದ್ದ ಸರಾಸರಿ ಯೂನಿಟ್‌ಗಿಂತ 10 ಯುನಿಟ್ ಹೆಚ್ಚುವರಿಯಾಗಿ ಬಳಸಿದರೂ ಉಚಿತವಾಗಿರುತ್ತದೆ. ಅದಕ್ಕಿಂತ ಅಧಿಕ ಎಷ್ಟು ಬಳಕೆ ಮಾಡಿರುತ್ತಾರೋ ಅದಕ್ಕೆ ಬಿಲ್ ಪಾವತಿ ಮಾಡಬೇಕು. ಒಟ್ಟು ಯೂನಿಟ್ 200 ದಾಟಿದ್ದರೆ ಎಲ್ಲ ಯೂನಿಟ್‌ಗೂ ಪಾವತಿ ಮಾಡಬೇಕಾಗುತ್ತದೆ. ಗೃಹಜ್ಯೋತಿಯ ಶೇ 90ಕ್ಕೂ ಅಧಿಕ ಗ್ರಾಹಕರು ಸರಾಸರಿ 10 ಯೂನಿಟ್ ಮೀರಿದ್ದರೂ ಗರಿಷ್ಠ ಮಿತಿ ದಾಟಿಲ್ಲ. ಹಾಗಾಗಿ ಅವರಿಗೆ ಹೆಚ್ಚುವರಿ ಬಳಕೆಗಷ್ಟೇ ಬಿಲ್ ಕಳುಹಿಸಲಾಗಿದೆ’ ಎಂದು ಬೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿದರು.
ಗೃಹಜ್ಯೋತಿಯಿಂದಲೂ ಬಳಕೆ ಹೆಚ್ಚಳ: ಗೃಹಜ್ಯೋತಿ ಯೋಜನೆ ಜಾರಿಯಾಗುವವರೆಗೆ ಬೆಸ್ಕಾಂ ವ್ಯಾಪ್ತಿಯಲ್ಲಿ ತಿಂಗಳಿಗೆ ಸರಾಸರಿ 75 ಕೋಟಿ ಯೂನಿಟ್ ವಿದ್ಯುತ್ ಮನೆ ಬಳಕೆಗೆ ಬೇಕಾಗುತ್ತಿತ್ತು. ಯೋಜನೆ ಜಾರಿಯಾದ ಮೇಲೆ ಜನರು ನಿರಾಳವಾಗಿ ಬಳಸತೊಡಗಿದ್ದರು. 2023ರ ಆಗಸ್ಟ್‌ನಿಂದ 2024ರ ಜನವರಿವರೆಗೆ ತಿಂಗಳಿಗೆ ಸರಾಸರಿ 2 ಕೋಟಿ ಯೂನಿಟ್ ಬಳಕೆ ಅಧಿಕವಾಗಿತ್ತು.
‘ಉಚಿತ ವಿದ್ಯುತ್ ಯೋಜನೆ ಜಾರಿಯಾದ ಮೇಲೆ ಜನರು ಜಾಗರೂಕವಾಗಿ ವಿದ್ಯುತ್ ಬಳಕೆ ಮಾಡುವುದು ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದ್ದು ನಿಜ. ಇದರಿಂದಾಗಿ ಬಹುತೇಕ ಗ್ರಾಹಕರಿಗೆ ‘ಶೂನ್ಯ’ ಬಿಲ್ ಬದಲು ಸಣ್ಣ ಮೊತ್ತ ಪಾವತಿಗೆ ಬರುತ್ತಿತ್ತು’ ಎಂದು ಬೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿದರು.
Cut-off box - ‘ಕಡಿಮೆಯಾಗಲಿದೆ ಬಿಲ್’ ಫೆಬ್ರುವರಿಯಿಂದ ವಿದ್ಯುತ್ ಬಳಕೆ ಹೆಚ್ಚಾಗತೊಡಗಿದ್ದು ಏಪ್ರಿಲ್‌ನಲ್ಲಿ ಅತಿ ಹೆಚ್ಚು ಬಳಕೆಯಾಗಿತ್ತು. ಬಿಸಿಲಿನಿಂದ ಪಾರಾಗಲು ಮನೆಗಳಲ್ಲಿ ಫ್ಯಾನ್ ಕೂಲರ್ ಎ.ಸಿ ಬಳಕೆ ಹೆಚ್ಚು ಮಾಡಿರುವುದು ಅದಕ್ಕೆ ಕಾರಣ. ಈಗ ಮಳೆ ಬರುತ್ತಿದೆ. ಮುಂದಿನ ತಿಂಗಳಿನಿಂದ ಮತ್ತೆ ವಿದ್ಯುತ್ ಬಳಕೆ ಕಡಿಮೆಯಾಗಲಿದೆ. ಅದಕ್ಕೆ ಸರಿಯಾಗಿ ಬಿಲ್ ಕೂಡ ಕಡಿಮೆಯಾಗಲಿದೆ ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ‘ಪ್ರಜಾವಾಣಿ’ಗೆ ತಿಳಿಸಿದರು.
Cut-off box - ಬೆಸ್ಕಾಂ ವ್ಯಾಪ್ತಿಯ ಅಂಕಿ ಅಂಶ 74.9 ಕೋಟಿ ಯೂನಿಟ್ ಗೃಹಜ್ಯೋತಿಗೆ ಮೊದಲು ತಿಂಗಳಿಗೆ ಬಳಕೆಯಾಗುತ್ತಿದ್ದ ಸರಾಸರಿ ವಿದ್ಯುತ್ 76.9 ಕೋಟಿ ಯೂನಿಟ್ ಗೃಹಜ್ಯೋತಿ ನಂತರ ತಿಂಗಳಿಗೆ ಬಳಕೆಯಾಗುತ್ತಿದ್ದ ಸರಾಸರಿ ವಿದ್ಯುತ್ 81.3 ಕೋಟಿ ಯೂನಿಟ್ ಈ ಬೇಸಿಗೆಯಲ್ಲಿ ತಿಂಗಳಿಗೆ ಬಳಕೆಯಾದ ಸರಾಸರಿ ವಿದ್ಯುತ್
Cut-off box - ಮೂರು ತಿಂಗಳ ವಿದ್ಯುತ್ ಪ್ರಮಾಣ 77.94 ಕೋಟಿ ಯೂನಿಟ್ ಫೆಬ್ರುವರಿಯಲ್ಲಿ ಬಳಕೆಯಾದ ವಿದ್ಯುತ್ 75.98 ಕೋಟಿ ಯೂನಿಟ್ ಮಾರ್ಚ್‌ನಲ್ಲಿ ಬಳಕೆಯಾದ ವಿದ್ಯುತ್ 90 ಕೋಟಿ ಯೂನಿಟ್ ಏಪ್ರಿಲ್‌ನಲ್ಲಿ ಬಳಕೆಯಾದ ವಿದ್ಯುತ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.