ADVERTISEMENT

ಬೆಂಗಳೂರು: ಆರ್‌ಟಿಐ ಕಾರ್ಯಕರ್ತ ಕೆ. ನಾಗರಾಜ್ ಕೊಲೆಗೆ ₹5 ಲಕ್ಷ ಸುಪಾರಿ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2024, 14:50 IST
Last Updated 10 ಮಾರ್ಚ್ 2024, 14:50 IST
ಕೆ. ನಾಗರಾಜ್
ಕೆ. ನಾಗರಾಜ್   

ಬೆಂಗಳೂರು: ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದ ಕಾರಣಕ್ಕೆ ಆರ್‌ಟಿಐ ಕಾರ್ಯಕರ್ತ ಕೆ. ನಾಗರಾಜ್ ಕೊಲೆಗೆ ಯತ್ನಿಸಿದ್ದ ಆರೋಪದಡಿ ಆರು ಮಂದಿಯನ್ನು ಕೆಂಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕುಂಬಳಗೋಡು ಕಣಿಮಿಣಿಕೆಯ ಕೆ.ಜಿ. ಗೋವಿಂದರಾಜು, ಗ್ರಾಮ ಪಂಚಾಯಿತಿ ಬಿಲ್ ಕಲೆಕ್ಟರ್ ಸತೀಶ್ (44), ನಾಗರಬಾವಿ ಭೈರವೇಶ್ವರನಗರದ ರೌಡಿ ಕೃಷ್ಣ (30), ಮನೀಶ್ ಪೂಜಾರಿ (28), ವಿ. ಶಶಿಕುಮಾರ್ ರೆಡ್ಡಿ (20) ಹಾಗೂ ಎ. ವೇಣುಗೋಪಾಲ್ ಅಲಿಯಾಸ್ ಕುಮಾರಸ್ವಾಮಿ (51) ಬಂಧಿತರು.

‘ಕುಂಬಳಗೋಡಿನ ಕೆ. ನಾಗರಾಜ್ ಅವರ ಮೇಲೆ ಫೆ.29ರಂದು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆಗೆ ಯತ್ನಿಸಲಾಗಿತ್ತು. ಈ ಬಗ್ಗೆ ನಾಗರಾಜ್ ದೂರು ನೀಡಿದ್ದರು. ಅಪರಾಧ ಸಂಚು, ಕೊಲೆಗೆ ಯತ್ನ ಹಾಗೂ ಜೀವ ಬೆದರಿಕೆ ಆರೋಪದಡಿ ಪ್ರಕರಣ ದಾಖಲಿಸಿಕೊಂಡು ಆರು ಮಂದಿಯನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

ADVERTISEMENT

ಆಸ್ತಿಗಳ ಮಾಹಿತಿ ಕೋರಿ ಅರ್ಜಿ:

‘ಕುಂಬಳಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಆಸ್ತಿಗಳ ಅಕ್ರಮ ನೋಂದಣಿ ಬಗ್ಗೆ ಮಾಹಿತಿ ಕೋರಿ ನಾಗರಾಜ್ ಅರ್ಜಿ ಸಲ್ಲಿಸಿದ್ದರು. ಅಂಥ ಆಸ್ತಿಗಳ ಪೈಕಿ ಕೆಲ ಆಸ್ತಿಗಳನ್ನು ಗೋವಿಂದರಾಜು ಕಬಳಿಸಿದ್ದರೆಂಬ ಮಾಹಿತಿ ಇದೆ. ಅರ್ಜಿ ಸಲ್ಲಿಕೆ ವಿಷಯ ತಿಳಿದುಕೊಂಡಿದ್ದ ಗೋವಿಂದರಾಜು, ತನ್ನ ಅಕ್ರಮ ಆಸ್ತಿ ಸಂಗತಿ ಬಹಿರಂಗವಾಗುತ್ತದೆಂದು ಹೆದರಿದ್ದ’ ಎಂದು ಪೊಲೀಸರು ತಿಳಿಸಿದರು.

‘ಅಕ್ರಮ ಆಸ್ತಿ ನೋಂದಣಿಯಲ್ಲಿ ಗ್ರಾ.ಪಂ ಬಿಲ್‌ ಕಲೆಕ್ಟರ್ ಸತೀಶ್ ಪಾತ್ರವೂ ಇತ್ತು ಎಂಬುದು ತಿಳಿದುಬಂದಿದೆ. ಹೀಗಾಗಿ, ಗೋವಿಂದರಾಜು ಹಾಗೂ ಸತೀಶ್, ಆರ್‌ಟಿಐ ಕಾರ್ಯಕರ್ತ ನಾಗರಾಜ್ ಅವರನ್ನು ಕೊಲೆ ಮಾಡಲು ಸಂಚು ರೂಪಿಸಿದ್ದರು. ಚಂದ್ರಾಲೇಔಟ್ ಠಾಣೆಯ ರೌಡಿ ಪಟ್ಟಿಯಲ್ಲಿ ಹೆಸರಿರುವ ಕೃಷ್ಣ ಹಾಗೂ ಅಪರಾಧ ಹಿನ್ನೆಲೆಯುಳ್ಳ ಮನೀಶ್ ಪೂಜಾರಿಯನ್ನು ಸಂಪರ್ಕಿಸಿದ್ದರು’ ಎಂದು ಹೇಳಿದರು.

ದ್ವಿಚಕ್ರ ವಾಹನ ಅಡ್ಡಗಟ್ಟಿ ಕೃತ್ಯ:

‘ನಾಗರಾಜ್ ಅವರನ್ನು ಕೊಲೆ ಮಾಡಿದರೆ ₹ 5 ಲಕ್ಷ ನೀಡುವುದಾಗಿ ಗೋವಿಂದರಾಜು ಹಾಗೂ ಸತೀಶ್, ಸುಪಾರಿ ನೀಡಿದ್ದರು. ಅದಕ್ಕೆ ಒಪ್ಪಿದ್ದ ಕೃಷ್ಣ, ಮನೀಶ್ ಹಾಗೂ ಸಹಚರರು, ಕೆಂಗೇರಿ ರೈಲ್ವೆ ಕೆಳ ಸೇತುವೆ ಬಳಿ ನಾಗರಾಜ್ ಅವರ ದ್ವಿಚಕ್ರ ವಾಹನ ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಹೊಡೆದಿದ್ದರು’ ಎಂದು ಪೊಲೀಸರು ತಿಳಿಸಿದರು.

‘ಆರೋಪಿಗಳಿಂದ ತಪ್ಪಿಸಿಕೊಂಡು ಸ್ಥಳದಿಂದ ಹೋಗಿದ್ದ ನಾಗರಾಜ್, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ನಂತರ, ಠಾಣೆಗೆ ಬಂದು ದೂರು ನೀಡಿದ್ದರು’ ಎಂದರು.

ಗೋವಿಂದರಾಜು
ಕೃಷ್ಣ
ಶಶಿಕುಮಾರ್
ಮನೀಶ್ ಪೂಜಾರಿ
ಸತೀಶ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.