ಬೆಂಗಳೂರು: ಭಯೋತ್ಪಾದನಾ ಕೃತ್ಯಕ್ಕೆ ಸಂಚು ರೂಪಿಸಿದ್ದ ಪ್ರಕರಣದಲ್ಲಿ ಬಂಧಿಸಿರುವ ಶಂಕಿತರಿಂದ ಜಪ್ತಿ ಮಾಡಲಾಗಿರುವ ವಾಕಿಟಾಕಿಗಳು, ಬಾಂಬ್ ಸ್ಫೋಟಕ್ಕೆ ಬಳಸುವ ಟ್ರಿಗರ್‌ಗಳು (ರಿಮೋಟ್) ಎಂಬ ಮಾಹಿತಿ ಸಿಸಿಬಿ ತನಿಖೆಯಿಂದ ಹೊರಬಿದ್ದಿದೆ.
ವಾಕಿಟಾಕಿ ರೀತಿಯಲ್ಲಿ ಸಿದ್ಧಪಡಿಸಿದ್ದ ಟ್ರಿಗರ್‌ಗಳನ್ನು ಬಳಸಿಕೊಂಡು ನಗರದಲ್ಲಿ ದೊಡ್ಡ ಪ್ರಮಾಣದ ಬಾಂಬ್ ಇರಿಸಿ ಭಯೋತ್ಪಾದಕ ಕೃತ್ಯ ನಡೆಸಲು ಶಂಕಿತರು ಸಿದ್ಧತೆ ನಡೆಸುತ್ತಿದ್ದರೆಂಬ ಮಾಹಿತಿಯೂ ಸಿಸಿಬಿಗೆ ಸಿಕ್ಕಿದೆ.
ಹೆಬ್ಬಾಳ ಠಾಣೆ ವ್ಯಾಪ್ತಿಯ ಸುಲ್ತಾನ್‌ಪಾಳ್ಯದಲ್ಲಿ ಜುಲೈ 18ರಂದು ಕಾರ್ಯಾಚರಣೆ ನಡೆಸಿದ್ದ ಸಿಸಿಬಿ ಪೊಲೀಸರು, ಐವರು ಶಂಕಿತರನ್ನು ಬಂಧಿಸಿದ್ದರು. 7 ನಾಡ ಪಿಸ್ತೂಲ್, 45 ಗುಂಡುಗಳು, 12 ಮೊಬೈಲ್, ಡ್ಯಾಗರ್ ಹಾಗೂ 4 ವಾಕಿಟಾಕಿ ಮಾದರಿ ಉಪಕರಣ ಜಪ್ತಿ ಮಾಡಿದ್ದರು. ಈ ಎಲ್ಲ ವಸ್ತುಗಳನ್ನೂ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಈ ಸಾಧನಗಳ ಪರೀಕ್ಷೆ ನಡೆಸಿರುವ ತಜ್ಞರು ಪ್ರಾಥಮಿಕ ಮಾಹಿತಿ ಹಂಚಿಕೊಂಡಿದ್ದಾರೆ.
‘ಉಗ್ರ ಸಂಘಟನೆಗಳ ಸದಸ್ಯರ ಜೊತೆ ಮಾತುಕತೆ ನಡೆಸಲು ಶಂಕಿತರು ವಾಕಿಟಾಕಿ ಬಳಸುತ್ತಿದ್ದರು ಎಂಬ ಅನುಮಾನವಿತ್ತು. ಆದರೆ, ಜಪ್ತಿ ಮಾಡಿರುವ ವಾಕಿಟಾಕಿಗಳ ಮಾದರಿಯೇ ಬೇರೆ ಇದೆ. ಈ ವಾಕಿಟಾಕಿಗಳು, ಸ್ಫೋಟಕಗಳನ್ನು (ಐಇಡಿ) ಸ್ಫೋಟಿಸಲು ಬಳಸುವ ಟ್ರಿಗರ್ ಅಥವಾ ರಿಮೋಟ್ ಆಗಿರಬಹುದೆಂಬ ಅನುಮಾನ ಬಂದಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ವಾಕಿಟಾಕಿ ರೀತಿಯಲ್ಲಿ ಕಂಡಿದ್ದರಿಂದ, ಇದೊಂದು ಸಂವಹನ ಸಾಧನವೆಂದು ತಿಳಿಯಲಾಗಿತ್ತು. ಈ ಉಪಕರಣದಲ್ಲಿ ತಂತಿಗಳ ಜೋಡಣೆ ಇದೆ. ಅದು ಯಾವ ರೀತಿ ಕೆಲಸ ಮಾಡುತ್ತದೆ ಎಂಬುದನ್ನು ತಜ್ಞರು ಪರಿಶೀಲಿಸುತ್ತಿದ್ದಾರೆ. ಕೆಲವೇ ದಿನಗಳಲ್ಲಿ ಅದರ ನೈಜ ರೂಪದ ಬಗ್ಗೆ ವರದಿ ನೀಡಲಿದ್ದಾರೆ’ ಎಂದು ಮೂಲಗಳು ತಿಳಿಸಿವೆ.
ಮತ್ತಷ್ಟು ಸ್ಫೋಟಕ ಸಂಗ್ರಹಿಸಿದ ಅನುಮಾನ: ಶಂಕಿತ ಜಾಹೀದ್ ತಬ್ರೇಜ್ ವಾಸವಿದ್ದ ಕೊಡಿಗೇಹಳ್ಳಿಯ ಭದ್ರಪ್ಪ ಬಡಾವಣೆಯಲ್ಲಿರುವ ಮನೆಯಲ್ಲಿ 4 ಗ್ರೆನೇಡ್‌ಗಳು ಈಗಾಗಲೇ ಪತ್ತೆಯಾಗಿವೆ. ಟ್ರಿಗರ್ ಸಿಕ್ಕಿರುವುದರಿಂದಾಗಿ, ದುಷ್ಕೃತ್ಯ ನಡೆಸಲು ನಗರದ ಹಲವೆಡೆ ಹೆಚ್ಚಿನ ಪ್ರಮಾಣದಲ್ಲಿ ಸ್ಫೋಟಕಗಳನ್ನು ಸಂಗ್ರಹಿಸಿಟ್ಟಿರುವ ಅನುಮಾನ ವ್ಯಕ್ತವಾಗಿದೆ.
‘ಆರ್.ಟಿ.ನಗರದಲ್ಲಿ ನಡೆದಿದ್ದ ಕೊಲೆ ಪ್ರಕರಣದಲ್ಲಿ ಬಂಧಿತನಾಗಿದ್ದ ಜುನೈದ್ ಹಾಗೂ ಈತನ 20 ಮಂದಿ ಸಹಚರರು, ಬಾಂಬ್ ಸ್ಫೋಟದ ಪ್ರಮುಖ ಆರೋಪಿ ಟಿ. ನಾಸೀರ್ ಜೊತೆ ಸಂಪರ್ಕದಲ್ಲಿದ್ದರು. 21 ಮಂದಿ ಪೈಕಿ ಸೈಯದ್ ಸುಹೇಲ್ ಖಾನ್, ಜಾಹೀದ್ ತಬ್ರೇಜ್, ಸೈಯದ್ ಮುದಾಸೀರ್ ಪಾಷಾ, ಮಹಮ್ಮದ್ ಫೈಜಲ್ ರಬ್ಬಾನಿ ಹಾಗೂ ಮೊಹಮ್ಮದ್ ಉಮರ್‌ನನ್ನು ಬಂಧಿಸಲಾಗಿದೆ. ಜುನೈದ್, ಹೊರ ದೇಶದಲ್ಲಿದ್ದಾನೆ. ಉಳಿದಂತೆ 15 ಮಂದಿ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ’ ಎಂದು ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.