ADVERTISEMENT

50 ಅಂಡರ್ ಪಾಸ್‌ಗಳ ಸ್ಥಿತಿಗತಿ ಮೌಲ್ಯಮಾಪನ: ತುಷಾರ್ ಗಿರಿನಾಥ್

​ಪ್ರಜಾವಾಣಿ ವಾರ್ತೆ
Published 25 ಮೇ 2023, 7:05 IST
Last Updated 25 ಮೇ 2023, 7:05 IST
ತುಷಾರ್ ಗಿರಿನಾಥ್
ತುಷಾರ್ ಗಿರಿನಾಥ್   

ಬೆಂಗಳೂರು: ನಗರದಲ್ಲಿರುವ ಬಹುತೇಕ ಎಲ್ಲಾ ಅಂಡರ್‌ಪಾಸ್‌ಗಳ ಸ್ಥಿತಿಗತಿಗಳ ಮೌಲ್ಯಮಾಪನಕ್ಕೆ ಸೂಚನೆ ನೀಡಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು.

ಒಟ್ಟು 53 ಕೆಳ ಸೇತುವೆಗಳಿದ್ದು, ಅವುಗಳ ಪೈಕಿ 18 ರೈಲ್ವೆ ಕೆಳ ಸೇತುವೆಗಳಿವೆ. ಸದ್ಯ 50 ಕೆಳ ಸೇತುವೆಗಳ ಸ್ಥಿತಿಗತಿ ಪರಿಶೀಲಿಸಲಾಗುತ್ತಿದೆ. ಹಂತ –ಹಂತವಾಗಿ ಎರಡು–ಮೂರು ದಿನಗಳಲ್ಲಿ ಸ್ಥಿತಿಗತಿ ವರದಿ ಬರಲಿದ್ದು, ವಾಹನಗಳ ಸಂಚಾರಕ್ಕೆ ಯೋಗ್ಯವಲ್ಲ ಎನಿಸಿದರೆ ಸಂಚಾರ ಸ್ಥಗಿತಗೊಳಿಸಲಾಗುವುದು ಎಂದು ಸುದ್ದಿಗಾರರಿಗೆ ಹೇಳಿದರು.

ಸದ್ಯ ಯಾವುದೇ ಅಂಡರ್ ಪಾಸ್‌ನಲ್ಲೂ ವಾಹನ ಸಂಚಾರ ನಿರ್ಬಂಧ ಮಾಡಿಲ್ಲ. ನಿರ್ಲಕ್ಷ್ಯ ವಹಿಸುವುದು ಬೇಡ ಎಂಬ ಕಾರಣಕ್ಕೆ ಎಲ್ಲಾ ಅಂಡರ್‌ಪಾಸ್‌ಗಳನ್ನು ಪರಿಶೀಲಿಸಲಾಗುತ್ತಿದೆ ಎಂದರು.

ADVERTISEMENT

ಕೆ.ಆರ್.ವೃತ್ತದಲ್ಲಿ ಸಂಭವಿಸಿದ ದುರಂತದ ಬಗ್ಗೆ ಎಫ್‌ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಯಾರಿಂದ ನಿರ್ಲಕ್ಷ್ಯವಾಗಿದ್ದರೂ ಕ್ರಮ ಕೈಗೊಳ್ಳುತ್ತಾರೆ. ದುರಸ್ತಿ ಕಾಮಗಾರಿಯನ್ನು ಪಾಲಿಕೆಯಿಂದ ಆರಂಭಿಸಲಾಗಿದೆ ಎಂದು ತುಷಾರ್ ಗಿರಿನಾಥ್ ಹೇಳಿದರು.

ಮಳೆಗಾಲ ಆರಂಭವಾಗುವುದರಿಂದ ರಾಜಕಾಲುವೆ ಹೂಳೆತ್ತಿ ನೀರು ಸರಾಗವಾಗಿ ಹರಿದು ಹೋಗುವಂತೆ ನೋಡಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ. 550 ಕಿಲೋ ಮೀಟರ್‌ನಲ್ಲಿ ರಾಜಕಾಲುವೆ ಸ್ವಚ್ಛಗೊಳಿಸುವ ಕಾಮಗಾರಿ ನಡೆಯುತ್ತಿದೆ ಎಂದು ವಿವರಿಸಿದರು.

ಮೂರು ದಿನಗಳಿಂದ ಒಟ್ಟು 350ಕ್ಕೂ ಹೆಚ್ಚು ಮರಗಳು ಮಳೆ ಮತ್ತು ಬಿರುಗಾಳಿಯಿಂದ ಬಿದ್ದಿವೆ. ತೆರವು ಕಾರ್ಯಾಚರಣೆ ಬಹುತೇಕ ಬುಧವಾರ ಪೂರ್ಣಗೊಂಡಿದೆ ಎಂದು ಹೇಳಿದರು.

ಮೂರು ದಿನಗಳಿಂದ 23 ಮನೆಗಳಿಗೆ ಹಾನಿಯಾಗಿತ್ತು. ಮಂಗಳವಾರ ರಾತ್ರಿ 15 ಮನೆಗಳಿಗೆ ನೀರು ತುಂಬಿಕೊಂಡಿತ್ತು. ನೀರು ಹೊರ ಹಾಕಲಾಗಿದೆ. ನಿಯಮಗಳ ಪ್ರಕಾರ ಮನೆಯಲ್ಲಿ ಮೂರು ದಿನ ನೀರು ನಿಂತರೆ ಪರಿಹಾರ ನೀಡಬಹುದು. ಆದರೆ, ಆ ರೀತಿ ಮಾಡದೆ ಎಲ್ಲರಿಗೂ ಪರಿಹಾರ ನೀಡಲಾಗುತ್ತಿದೆ ಎಂದು ತಿಳಿಸಿದರು.

ಕನ್ನಿಂಗ್ ಹ್ಯಾಮ್ ರಸ್ತೆಯಿಂದ ಸ್ಯಾಂಕಿ ರಸ್ತೆಗೆ ಸೇರುವ ರಸ್ತೆಗೆ ನಿರ್ಮಿಸಿರುವ ಅಂಡರ್ ಪಾಸ್‌ನಲ್ಲಿ(ಲೀ ಮೆರಿಡಿಯನ್ ಹೋಟೆಲ್ ಬಳಿ) ಮರಗಳ ಎಲೆ ಮತ್ತು ಕಸ–ಕಡ್ಡಿಗಳಿಂದ ತುಂಬಿಕೊಂಡಿರುವುದು –ಪ್ರಜಾವಾಣಿ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.