ADVERTISEMENT

ಬೆಂಗಳೂರು | ₹50 ಸಾವಿರ ಲಂಚ; ಹೆಡ್‌ ಕಾನ್‌ಸ್ಟೆಬಲ್‌ ಬಂಧನ

​ಪ್ರಜಾವಾಣಿ ವಾರ್ತೆ
Published 16 ಜುಲೈ 2023, 12:57 IST
Last Updated 16 ಜುಲೈ 2023, 12:57 IST
ಹೆಡ್‌ ಕಾನ್‌ಸ್ಟೆಬಲ್‌ ಮಹೇಶ್‌
ಹೆಡ್‌ ಕಾನ್‌ಸ್ಟೆಬಲ್‌ ಮಹೇಶ್‌   

ಬೆಂಗಳೂರು: ವಂಚನೆ ಪ್ರಕರಣದಲ್ಲಿ ಆರೋಪಿಯಾಗಿರುವ ವ್ಯಕ್ತಿಯೊಬ್ಬರ ಪರ ಅನುಕೂಲಕರ ವರದಿ ನೀಡಲು ₹2.5 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟು ₹50 ಸಾವಿರ ಮುಂಗಡೆ ಪಡೆಯುತ್ತಿದ್ದ ರಾಮನಗರ ಜಿಲ್ಲಾ ಸೈಬರ್‌ ಅಪರಾಧ ನಿಯಂತ್ರಣ (ಸೆನ್‌) ಪೊಲೀಸ್‌ ಠಾಣೆಯ ಹೆಡ್‌ ಕಾನ್‌ಸ್ಟೆಬಲ್‌ ಮಹೇಶ್‌ ಮತ್ತು ಅವರ ಪರವಾಗಿ ಹಣ ಪಡೆದ ಮಧ್ಯವರ್ತಿ ರಮೇಶ್‌ ಡಿ. ಎಂಬುವವರನ್ನು ಲೋಕಾಯುಕ್ತ ಪೊಲೀಸರು ಭಾನುವಾರ ಬಂಧಿಸಿದ್ದಾರೆ.

ನಗರದ ಉತ್ತರಹಳ್ಳಿಯ ವೈಷ್ಣವಿ ಪಾರ್ಟಿ ಹಾಲ್‌ನಲ್ಲಿ ನಡೆಯುತ್ತಿದ್ದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಆರೋಪಿ, ಅಲ್ಲಿಯೇ ದೂರುದಾರ ಮಂಜೇಗೌಡ ಅವರನ್ನು ಭೇಟಿ ಮಾಡಿದರು. ಆರೋಪಿಯು ಸ್ನೇಹಿತ ರಮೇಶ್‌ ಮೂಲಕ ಲಂಚದ ಹಣ ಪಡೆದರು. ತಕ್ಷಣ ದಾಳಿ ಮಾಡಿದ ಲೋಕಾಯುಕ್ತ ಪೊಲೀಸರು ಇಬ್ಬರನ್ನೂ ಬಂಧಿಸಿದರು.

ಬೆಂಗಳೂರಿನ ಮಾಗಡಿ ರಸ್ತೆಯ ಮಂಜುನಾಥನಗರದ ನಿವಾಸಿ ಮಂಜೇಗೌಡ ವಿರುದ್ಧ ರಾಮನಗರ ಸೆನ್‌ ಠಾಣೆಯಲ್ಲಿ 2020ರಲ್ಲಿ ವಂಚನೆ ಪ್ರಕರಣ ದಾಖಲಾಗಿತ್ತು. ಆಗ ಬಂಧಿತರಾಗಿದ್ದ ಮಂಜೇಗೌಡ ಅವರಿಗೆ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು. ಅದರಂತೆ ಆರೋಪಿಗಳು ನಿಯಮಿತವಾಗಿ ಠಾಣೆಗೆ ಹಾಜರಾಗಿ ಸಹಿ ಮಾಡಬೇಕಿತ್ತು. ಪ್ರತಿ ಬಾರಿ ಸಹಿ ಹಾಕಲು ಹೋದಾಗ ಆರೋಪಿ ಹೆಡ್‌ ಕಾನ್‌ಸ್ಟೆಬಲ್‌ ಲಂಚಕ್ಕೆ ಬೇಡಿಕೆ ಇಡುತ್ತಿದ್ದರು. ಈವರೆಗೆ ಸುಮಾರು ₹ 75,000 ಲಂಚವನ್ನು ಪಡೆದಿದ್ದರು ಎಂಬ ಮಾಹಿತಿ ದೂರಿನಲ್ಲಿದೆ ಎಂದು ತನಿಖಾ ತಂಡದ ಮೂಲಗಳು ತಿಳಿಸಿವೆ.

ADVERTISEMENT

‘ನಿರಂತರ ಕಿರುಕುಳದಿಂದ ಬೇಸತ್ತಿದ್ದ ಮಂಜೇಗೌಡ ಇತ್ತೀಚೆಗೆ ಮಹೇಶ್‌ ಅವರನ್ನು ಭೇಟಿ ಮಾಡಿ ತನ್ನ ವಿರುದ್ಧದ ಪ್ರಕರಣವನ್ನು ಮುಕ್ತಾಯಗೊಳಿಸುವಂತೆ ಮನವಿ ಮಾಡಿದ್ದರು. ತನಗೆ ₹ 50 ಸಾವಿರ ಮತ್ತು ಮೇಲಧಿಕಾರಿಗಳಿಗೆ ₹ 2 ಲಕ್ಷ ಸೇರಿ ಒಟ್ಟು ₹ 2.5 ಲಕ್ಷ ಲಂಚ ನೀಡಿದರೆ ಪ್ರಕರಣ ಮುಕ್ತಾಯಗೊಳಿಸುವುದಾಗಿ ಮಹೇಶ್‌ ತಿಳಿಸಿದ್ದರು. ಆರ್ಥಿಕ ಸಂಕಷ್ಟದಲ್ಲಿರುವ ದೂರುದಾರ ಲೋಕಾಯುಕ್ತದ ಕೇಂದ್ರ ಕಚೇರಿಗೆ ಬಂದು ದೂರು ಸಲ್ಲಿಸಿದ್ದರು’ ಎಂದು ಮೂಲಗಳು ಹೇಳಿವೆ.

ಲೋಕಾಯುಕ್ತದ ಬೆಂಗಳೂರು ಗ್ರಾಮಾಂತರ ಎಸ್‌ಪಿ ಶ್ರೀನಾಥ್‌ ಜೋಶಿ ನೇತೃತ್ವದಲ್ಲಿ ಜಂಟಿ ಕಾರ್ಯಾಚರಣೆ ಆರಂಭಿಸಲಾಗಿತ್ತು. ಲೋಕಾಯುಕ್ತದ ರಾಮನಗರ ಪೊಲೀಸ್‌ ಇನ್‌ಸ್ಪೆಕ್ಟರ್‌ ಸತೀಶ್‌ ಸಿ. ನೇತೃತ್ವದ ತಂಡ ಆರೋಪಿಯನ್ನು ಬಂಧಿಸಿದೆ.

ಮೂರು ಬಾರಿ ಸ್ಥಳ ಬದಲಾವಣೆ

ಮಂಜೇಗೌಡ ಅವರು ಭಾನುವಾರ ಬೆಳಿಗ್ಗೆ ಮಹೇಶ್‌ ಅವರನ್ನು ಭೇಟಿ ಮಾಡಿ ಲಂಚದ ಹಣ ತಲುಪಿಸಲು ಪ್ರಯತ್ನಿಸಿದರು. ಆಗ ಮೂರು ಬಾರಿ ಸ್ಥಳ ಬದಲಾವಣೆ ಮಾಡಿದ್ದ ಆರೋಪಿ, ನಂತರ ವೈಷ್ಣವಿ ಪಾರ್ಟಿ ಹಾಲ್ ಬಳಿ ಭೇಟಿ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.