ADVERTISEMENT

6 ಲಕ್ಷ ಆಸ್ತಿಗಳಿಂದ ₹500 ಕೋಟಿ ತೆರಿಗೆ ಬಾಕಿ: ಮಾಲೀಕರಿಗೆ ‘ಎಸ್‌ಎಂಎಸ್‌ ನೋಟಿಸ್’

ಮಾಲೀಕರಿಗೆ ‘ಎಸ್‌ಎಂಎಸ್‌ ನೋಟಿಸ್’; ಸ್ತಿರಾಸ್ಥಿ, ಚರಾಸ್ಥಿಗಳ ಜಪ್ತಿಯ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 2 ಜನವರಿ 2024, 0:30 IST
Last Updated 2 ಜನವರಿ 2024, 0:30 IST
<div class="paragraphs"><p>ಸಾಂದರ್ಭಿಕ ಚಿತ್ರ&nbsp;</p></div>

ಸಾಂದರ್ಭಿಕ ಚಿತ್ರ 

   

ಬೆಂಗಳೂರು: ನಗರ ವ್ಯಾಪ್ತಿಯಲ್ಲಿ 6 ಲಕ್ಷ ಆಸ್ತಿ ಮಾಲೀಕರು ತೆರಿಗೆಯನ್ನು ಉಳಿಸಿಕೊಂಡಿದ್ದಾರೆ. ಇವರಿಗೆಲ್ಲ ಬಿಬಿಎಂಪಿ ‘ಎಸ್‌ಎಂಎಸ್‌ ನೋಟಿಸ್’ ಕಳುಹಿಸುತ್ತಿದ್ದು, ಸುಮಾರು ₹500 ಕೋಟಿ ಸಂಗ್ರಹಿಸುವ ಗುರಿ ಹೊಂದಿದೆ.

‘ನೀವು ಆಸ್ತಿ ತೆರಿಗೆಯನ್ನು ಈವರೆಗೂ ಪಾವತಿಸಿಲ್ಲ. ಬಾಕಿ ಉಳಿಸಿಕೊಂಡರೆ ಬಿಬಿಎಂಪಿ ಕಾಯ್ದೆ–2020ರಂತೆ ಕ್ರಮ ಕೈಗೊಳ್ಳಲಾಗುತ್ತದೆ. ಈ ಕಾಯ್ದೆಯಂತೆ ಚರಾಸ್ತಿಗಳನ್ನು ಜಪ್ತಿ ಮತ್ತು ಮಾರಾಟ ಮಾಡಬಹುದು, ಸ್ಥಿರಾಸ್ತಿಗಳನ್ನು ವಶಕ್ಕೆ ಪಡೆದುಕೊಳ್ಳಬಹುದು. ಸ್ಥಿರಾಸ್ತಿ ವಶಕ್ಕೆ ಪಡೆದುಕೊಂಡಿರುವುದನ್ನು ಉಪ ನೋಂದಣಾಧಿಕಾರಿ ವಿತರಿಸುವ ಋಣಭಾರ ಪ್ರಮಾಣಪತ್ರದಲ್ಲಿ (ಎನ್‌ಕಂಬ್ರನ್ಸ್‌ ಸರ್ಟಿಫಿಕೇಟ್‌) ನಮೂದಿಸಬಹುದು. ಬ್ಯಾಂಕ್‌ ಖಾತೆಗಳನ್ನು ವಶಪಡಿಸಿಕೊಂಡು, ಪಾವತಿ ಮಾಡಿಕೊಳ್ಳಬಹುದು ಮತ್ತು ಕ್ರಿಮಿನಲ್‌ ಪ್ರಕರಣ ದಾಖಲಿಸಬಹುದು’ ಎಂದು ‘ಎಸ್‌ಎಂಎಸ್‌ ನೋಟಿಸ್’ನಲ್ಲಿ ತಿಳಿಸಲಾಗಿದೆ.

ADVERTISEMENT

ಆನ್‌ಲೈನ್‌ನ ಲಿಂಕ್‌ ನೀಡಲಾಗಿದ್ದು, ಆ ಮೂಲಕ ಆಸ್ತಿ ತೆರಿಗೆಯನ್ನು ಪಾವತಿಸಿ ಎಂದು ಹೇಳಲಾಗಿದೆ. 

‘ನಗರದಲ್ಲಿ ಒಂದು ಅಥವಾ ಅದಕ್ಕಿಂತ ಹೆಚ್ಚು ವರ್ಷಗಳಿಂದ ಆಸ್ತಿ ತೆರಿಗೆಯನ್ನು ಪಾವತಿಸಿಲ್ಲದವರಿಗೆ ಎಸ್‌ಎಂಎಸ್ ಸಂದೇಶಗಳನ್ನು ಮೂರು ತಿಂಗಳಿಂದ ಕಳುಹಿಸಲಾಗುತ್ತಿದೆ. ಆದರೂ 6 ಲಕ್ಷಕ್ಕೂ ಹೆಚ್ಚು ಮಂದಿ ಇನ್ನೂ ಪಾವತಿಸಿಲ್ಲ. ಹೀಗಾಗಿ, ಬಿಬಿಎಂಪಿ ಕಾಯ್ದೆ 2020 ಪ್ರಕಾರ ಯಾವ ರೀತಿ ಕ್ರಮ ಕೈಗೊಳ್ಳಬಹುದು ಎಂಬುದನ್ನು ಇದೀಗ ಕಳುಹಿಸಲಾಗುತ್ತಿರುವ ಎಸ್‌ಎಂಎಸ್‌ನಲ್ಲಿ ಆಸ್ತಿ ಮಾಲೀಕರಿಗೆ ವಿವರಿಸಲಾಗಿದೆ’ ಎಂದು ಬಿಬಿಎಂಪಿ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್‌ ಮೌದ್ಗಿಲ್‌ ತಿಳಿಸಿದರು.

‘ಬಿಬಿಎಂಪಿ ವ್ಯಾಪ‍್ತಿಯಲ್ಲಿ ವಾಣಿಜ್ಯ ಕಟ್ಟಡಗಳ ತೆರಿಗೆ ಬಾಕಿಯಿರುವ ಕಟ್ಟಡಗಳಿಗೆ ಬೀಗ ಹಾಕುವ ಬಗ್ಗೆ ಕೆಲವು ಅಧಿಕಾರಿಗಳು ತಪ್ಪು ಮಾಹಿತಿ ನೀಡುತ್ತಿರುವ ಅರಿವಿಗೆ ಬಂದಿದೆ. ಇಂತಹ ಅಧಿಕಾರಿ ಅಥವಾ ಸಿಬ್ಬಂದಿ ಮೇಲೆ ಇಲಾಖಾ ವಿಚಾರಣೆ ನಡೆಸಿ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಹೇಳಿದರು.

‘ರಾಜ್ಯ ಹಾಗೂ ಕೇಂದ್ರ ಸರ್ಕಾರದ ಕಟ್ಟಡಗಳ ಆಸ್ತಿ ತೆರಿಗೆ ಬಾಕಿ ಇದ್ದು, ಅದರ ಪ್ರಮಾಣವನ್ನು ಪಟ್ಟಿ ಮಾಡಲಾಗುತ್ತಿದೆ. ಈ ತೆರಿಗೆಯನ್ನೂ ಪಾವತಿಸಿಕೊಳ್ಳಲು ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.