ಬೆಂಗಳೂರು: ಬಿಹಾರದಿಂದ ಖೋಟಾನೋಟುಗಳನ್ನು ತಂದು ನಗರದಲ್ಲಿ ಚಲಾವಣೆ ಮಾಡುತ್ತಿದ್ದ ಆರೋಪದಡಿ ಮೂವರನ್ನು ಕಾಟನ್‌ಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
‘ತಮಿಳುನಾಡು ಕಲ್ಲಪಲ್ಲಿಯ ಸರವಣನ್ (34), ಕೇರಳದ ತಿರುವನಂತಪುರಂ ದೇವನ್ (20) ಹಾಗೂ ಎಸ್. ನಿತಿನ್ (19) ಬಂಧಿತರು. ಇವರಿಂದ ₹500 ಮುಖಬೆಲೆಯ 1,307 (₹6,53,500) ನೋಟುಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಪ್ರಮುಖ ಆರೋಪಿ ಸರವಣನ್, ಆಗಾಗ ಬಿಹಾರದ ಪಟ್ನಾಗೆ ಹೋಗುತ್ತಿದ್ದ. ಅಲ್ಲಿಯ ವ್ಯಕ್ತಿಯೊಬ್ಬರಿಗೆ ಅಸಲಿ ನೋಟುಗಳ
₹ 25 ಸಾವಿರ ನೀಡಿ, ₹ 1 ಲಕ್ಷ ಮೊತ್ತಕ್ಕೆ ಖೋಟಾ ನೋಟುಗಳನ್ನು ತರುತ್ತಿದ್ದ. ಅದೇ ಖೋಟಾನೋಟುಗಳನ್ನು ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣ, ರೈಲು ನಿಲ್ದಾಣ ಹಾಗೂ ಮಾರುಕಟ್ಟೆ ಪ್ರದೇಶಗಳಲ್ಲಿ ಸಹಚರರ ಜೊತೆ ಸೇರಿ ಚಲಾವಣೆ ಮಾಡುತ್ತಿದ್ದ’ ಎಂದು ತಿಳಿಸಿದರು.
ಇನ್‌ಸ್ಟಾಗ್ರಾಂ ಮೂಲಕ ನಿರ್ವಹಣೆ: ‘ಆರೋಪಿಗಳು ಇನ್‌ಸ್ಟಾಗ್ರಾಂ ಆ್ಯಪ್‌ನಲ್ಲಿ ಖಾತೆ ತೆರೆದಿದ್ದರು. ಅದರ ಮೂಲಕವೇ ಖೋಟಾ ನೋಟು ವ್ಯವಹಾರ ನಡೆಸುತ್ತಿದ್ದರು’ ಎಂದು ಪೊಲೀಸರು ಹೇಳಿದರು.
‘ಕಾಟನ್‌ಪೇಟೆ ಠಾಣೆ ವ್ಯಾಪ್ತಿಯ ಸ್ಥಳಗಳಲ್ಲಿ ಆರೋಪಿಗಳು ಖೋಟಾ ನೋಟು ಚಲಾವಣೆ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದಿತ್ತು. ಜುಲೈ 28ರಂದು ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಖೋಟಾನೋಟು ಮುದ್ರಣ ಮಾಡುತ್ತಿರುವ ಬಿಹಾರದ ವ್ಯಕ್ತ ಹಾಗೂ ಇತರರ ಪತ್ತೆಗೆ ತನಿಖೆ ಮುಂದುವರಿಸಲಾಗಿದೆ’ ಎಂದು ತಿಳಿಸಿದರು.
₹ 10 ಲಕ್ಷ ಮೊತ್ತಕ್ಕೆ ಖೋಟಾ ನೋಟು: ‘ಆರೋಪಿ ಸರವಣನ್ ಬಿಹಾರದಿಂದ ಇದುವರೆಗೂ ₹ 10 ಲಕ್ಷ ಮೊತ್ತಕ್ಕೆ ಖೋಟಾನೋಟು ಖರೀದಿಸಿ ತಂದಿದ್ದಾನೆ. ಕೇರಳ, ಕರ್ನಾಟಕ, ತಮಿಳುನಾಡಿನಲ್ಲಿ ₹ 4 ಲಕ್ಷ ಮೊತ್ತದ ಖೋಟಾನೋಟುಗಳನ್ನು ಚಲಾವಣೆ ಮಾಡಿರುವುದು ಗೊತ್ತಾಗಿದೆ’ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.