ಬೆಂಗಳೂರು: ‘ನಮ್ಮ ಸಂಸ್ಕೃತಿ, ಪರಂಪರೆಯನ್ನು ವಿಕೃತಿಗೊಳಿಸುವವರ ಕಾಲ ಇದಾಗಿದೆ’ ಎಂದು ಲೇಖಕ ಎಲ್. ಹನುಮಂತಯ್ಯ ಬೇಸರ ವ್ಯಕ್ತಪಡಿಸಿದರು.
ರಾಷ್ಟ್ರಕವಿ ಕುವೆಂಪು ಅವರ 114ನೇ ಜನ್ಮದಿನದ ಪ್ರಯುಕ್ತ ಕನ್ನಡ ಸಂಘರ್ಷ ಸಮಿತಿ ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ಸಮಾರಂಭದಲ್ಲಿ ‘ಅನಿಕೇತನ’ ಹಾಗೂ ‘ಕುವೆಂಪು ಯುವಕವಿ’ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.
‘ಮೂಲಭೂತವಾದದಿಂದಾಗಿ ಸಮಾಜವು ಸಾಂಸ್ಕೃತಿಕ ಅಧಃಪತನದ ದಾರಿ ಹಿಡಿಯುತ್ತಿದೆ. ಅವೈಚಾರಿಕತೆಯನ್ನೇ ಪರಂಪರೆ ಎಂದು ಬಿಂಬಿಸಲಾಗುತ್ತಿದೆ. ಇಂಥವರಿಗೆ ಕುವೆಂಪು ಅವರು ನಂಬಿದ ಹಿಂದೂ ಧರ್ಮದ ಕುರಿತು ತಿಳಿಸುವ ಕೆಲಸ ಆಗಬೇಕಿದೆ’ ಎಂದರು.
‘ನೂರು ದೇವರನ್ನು ನೂಕಾಚೆ ದೂರ ಎಂದು ಕುವೆಂಪು ಹೇಳಿದ್ದರು. ಆದರೆ, ಇಂದಿಗೂ ಗುಡಿ, ಚರ್ಚು, ಮಸೀದಿಗಳ ಹೆಸರಿನಲ್ಲಿ ಕಚ್ಚಾಟ ನಿಂತಿಲ್ಲ. ಮತಾಂಧರಿಗೆ ಕುವೆಂಪು ವಿಚಾರಧಾರೆಗಳನ್ನು ತಲುಪಿಸುವಲ್ಲಿ ನಾವು ಸೋತಿದ್ದೇವೆ’ ಎಂದು ಅಭಿಪ್ರಾಯಪಟ್ಟರು.
‘ಹಿಂದೂ ಪರಂಪರೆಯಲ್ಲಿರುವ ಅವಿವೇಕವನ್ನು ತಿದ್ದುವುದು ಎಲ್ಲಾ ಕಾಲದ ವಿವೇಕಿಗಳ ಕರ್ತವ್ಯ ಎಂದು ಕುವೆಂಪು ಪ್ರತಿಪಾದಿಸಿದ್ದರು. ಈಗ ನಾವೇನಾದರೂ ಪರಂಪರೆಯ ತಪ್ಪನ್ನು ಎತ್ತಿ ತೋರಿಸಿದರೆ, ಹೆಣವಾಗಿರುತ್ತೇವೆ’ ಎಂದು ಕಳವಳ ವ್ಯಕ್ತಪಡಿಸಿದರು.
ಕನ್ನಡ ಸಂಘರ್ಷ ಸಮಿತಿಯ ಅಧ್ಯಕ್ಷ ಕೋ.ವೆಂ. ರಾಮಕೃಷ್ಣೇಗೌಡ, ‘ಕುವೆಂಪು ಹೆಸರಿನಲ್ಲಿ ರಾಜ್ಯದೆಲ್ಲೆಡೆ ನವೋದಯ ಶಾಲೆ ಆರಂಭಿಸಲಾಗುವುದು ಎಂದು ಸರ್ಕಾರ ಹೇಳಿತ್ತು. ಅದು ಜಾರಿಗೆ ಬರಲೇ ಇಲ್ಲ. ಕನಿಷ್ಠ ಪಕ್ಷ ರಾಜಧಾನಿಯಲ್ಲಾದರೂ ಕುವೆಂಪು ಸ್ಮಾರಕ ಭವನ ಸ್ಥಾಪಿಸಬೇಕು. ಕನ್ನಡದ ಕೆಲಸಕ್ಕಾಗಿ ಅದನ್ನು ಮೀಸಲಿರಿಸಬೇಕು’ ಎಂದು ಒತ್ತಾಯಿಸಿದರು.
ಹಿರಿಯ ಸಾಹಿತಿ ಸಿ.ಎಚ್.ಜಾಕೋಬ್ ಲೋಬೊ ಅವರಿಗೆ ‘ಅನಿಕೇತನ’ ಹಾಗೂ ಯುವ ಕವಿ ಎಚ್. ಲಕ್ಷ್ಮಿನಾರಾಯಣಸ್ವಾಮಿ ಅವರಿಗೆ ‘ಕುವೆಂಪು ಯುವಕವಿ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿಯು ಕ್ರಮವಾಗಿ ₹ 5,000 ಹಾಗೂ ₹1,000 ನಗದು ಹಾಗೂ ಫಲಕವನ್ನು ಒಳಗೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.