ADVERTISEMENT

55 ಮೀಟರ್‌ ಕ್ಯಾನ್ವಾಸ್‌ ಮೇಲೆ ‘ರಾಮಾಯಣ ದರ್ಶನ’

ಗುಜರಾತ್‌ನ ದುದ್ಹತ್‌ ಕುಟುಂಬ ಸದಸ್ಯರ ಕೈಚಳಕ: ಮೆಟ್ರೊ ಕಲಾ ಕೇಂದ್ರದಲ್ಲಿ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2015, 20:05 IST
Last Updated 12 ಅಕ್ಟೋಬರ್ 2015, 20:05 IST

ಬೆಂಗಳೂರು: ರಾಮಾಯಣ ಮಹಾಗ್ರಂಥ ಓದಲು ನಿಮಗೆ ಸಮಯವಿರದಿದ್ದರೆ ಒಂದು ಬಾರಿ ನಗರದ ಎಂ.ಜಿ ರಸ್ತೆಯ ಹೂದೋಟದಲ್ಲಿರುವ ಮೆಟ್ರೊ ಕಲಾ ಕೇಂದ್ರದ ವಿಸ್ಮಯ ಕಲಾ ಗ್ಯಾಲರಿಗೆ ಭೇಟಿ ನೀಡಿದರೆ ಆಯಿತು.

ಇಲ್ಲಿ ರಾಮಾಯಣದ ಪ್ರಮುಖ ಘಟನಾವಳಿಗಳ ಮೇಲೆ ಬೆಳಕು ಚೆಲ್ಲುವ ಚಿತ್ರಕಲಾ ಪ್ರದರ್ಶನ ಆಯೋಜಿಸಿದ್ದು, 55 ಮೀಟರ್‌ ಉದ್ದ, ಸುಮಾರು 1 ಮೀಟರ್‌ ಅಗಲವಿರುವ ಕಾಟನ್‌ ಬಟ್ಟೆಗೆ ಕ್ಯಾನ್ವಾಸ್‌ (ಸ್ಕ್ರಾಲ್‌ ಪೇಟಿಂಗ್‌) ರೂಪ ನೀಡಲಾಗಿದೆ. ಅದರ ಮುಂದೆ ಕೆಲ ಹೆಜ್ಜೆ ಹಾಕಿ ಕಣ್ಣಾಡಿಸಿದರೆ ಸಾಕು.

ರಾವಣ–ರಾಮನ ಜನನ, ಸೀತೆಯ ಸ್ವಯಂವರ, ರಾಮನ ವನವಾಸ, ಪಂಚವಟಿ, ಸೀತೆ ಅಪಹರಣ, ಶಬರಿ -ರಾಮನ ಭೇಟಿ, ರಾಮನಿಂದ ವಾಲಿ ಹತ್ಯೆ, ಲಂಕೆಗೆ ಹನುಮನ ಪಯಣ, ಅಶೋಕ ವಾಟಿಕಾದಲ್ಲಿರುವ ಸೀತೆ, ಲಂಕಾ ದಹನ, ರಾಮಸೇತು ನಿರ್ಮಾಣ, ರಾವಣನ ಹತ್ಯೆಯ ಘಟನೆಗಳನ್ನು ಕ್ಯಾನ್ವಾಸ್‌ನಲ್ಲಿ ಚಿತ್ರಿಸಲಾ ಗಿದೆ. ಮೂಲತಃ ಗುಜರಾತ್‌ನ ಆನಂದ್‌ ನಗರದ ದುದ್ಹತ್‌ ಕುಟುಂಬ ಸದಸ್ಯರು ಇದರ ರೂವಾರಿಗಳು.

ಭಾನು ದುದ್ಹತ್‌, ಅವರ ಪತ್ನಿ ಪ್ರಭಾ ದುದ್ಹತ್‌, ಅವರ ಪುತ್ರ ಕೈಲಾಶ್‌ ದುದ್ಹತ್‌ ಮತ್ತು ಅವರ ಪತ್ನಿ ಅನಾಮಿಕ ದುದ್ಹತ್‌ ಅವರು ಸೇರಿಕೊಂಡು ಇದನ್ನು ತಯಾರಿಸಿದ್ದಾರೆ. ಹಳದಿ, ನೀಲಿ, ಕೆಂಪು, ಕಪ್ಪು ಮತ್ತು ಹಸಿರು ಬಣ್ಣಗಳಿಂದ ಈ ಕಲಾಕೃತಿ ನಿರ್ಮಿಸಲಾಗಿದೆ. ಬಿಸಿಲಿನ ತಾಪ, ಮಳೆ ನೀರು ಬಿದ್ದರೂ ಈ ಕಲಾಕೃತಿಗೆ ಯಾವುದೇ ಹಾನಿ ಆಗುವುದಿಲ್ಲ. ಇದು ಕಲಾಕೃತಿಯ ವಿಶೇಷ.

ಹಲವು ತಿಂಗಳು ಶ್ರಮ ವಹಿಸಿ ದುದ್ಹತ್‌ ಕುಟುಂಬವು ಇದಕ್ಕೆ ಮೂರ್ತ ರೂಪ ನೀಡಿದೆ. ಈ ಕುಟುಂಬಕ್ಕೆ ಈ ಕೆಲಸ ಹೊಸತೇನಲ್ಲ. ಇದಕ್ಕೂ ಮುಂಚೆ ಇಂತಹ ಹಲವು ಕಲಾಕೃತಿಗಳನ್ನು ನಿರ್ಮಿಸಿದೆ.

ಹಲವರ ಜೀವನ ದರ್ಶನ: 1983ರಲ್ಲಿ ಮಹಾಭಾರತ, 1985ರಲ್ಲಿ ರಾಮಾಯಣ, 1989ರಲ್ಲಿ ಮಹಾಭಾರತದ ಪರ್ವಗಳು, 1993ರಲ್ಲಿ ಮಹಾತ್ಮ ಗಾಂಧಿ ದರ್ಶನ, 1994ರಲ್ಲಿ ಇಂದಿರಾ ಗಾಂಧಿ, 1996ರಲ್ಲಿ ಶಿರಡಿ ಸಾಯಿ ಬಾಬಾ ಅವರ ಕುರಿತ ಕಲಾಕೃತಿಗಳು ಇದರಲ್ಲಿ ಸೇರಿವೆ. ಇದರಲ್ಲಿ  ಮಹಾಭಾರತಕ್ಕೆ ಸಂಬಂಧಿಸಿದ ಕಲಾಕೃತಿ 1,200 ಮೀಟರ್‌, ಸಾಯಿ ಬಾಬಾ ಅವರ ಕಲಾಕೃತಿ 200 ಮೀಟರ್‌ ಉದ್ದ ಇದೆ.

ಇವರ ಕಲಾಕೃತಿಗಳು ದೇಶ ವಿದೇಶದ ವಸ್ತು ಸಂಗ್ರಹಾಲಯಗಳಲ್ಲಿ ಇಡಲಾಗಿದೆ. ಜರ್ಮನಿ, ಸ್ಪೇನ್‌, ಆಸ್ಟ್ರೇಲಿಯಾ,  ಲಂಡನ್‌, ಮುಂಬೈ, ನವದೆಹಲಿ, ಅಹಮದಾಬಾದ್‌ ಪ್ರಮುಖವಾದವು. ಯಾವುದೇ ಕಲಾಕೃತಿ ತಯಾರಿಸುವುದಕ್ಕೂ ಮುನ್ನ ಭಾನು ದುದ್ಹತ್‌ ಅವರು ಅದರ ಬಗ್ಗೆ ಆಳವಾಗಿ ಅಧ್ಯಯನ ಮಾಡುತ್ತಾರೆ. ಬಳಿಕ ಕುಟುಂಬ ಸದಸ್ಯರೊಂದಿಗೆ ಚರ್ಚಿಸಿ ಅದನ್ನು ನಿರ್ಮಿಸಲು ಕಾರ್ಯಪ್ರವೃತ್ತರಾಗುತ್ತಾರೆ.

ಮಹಾರಾಷ್ಟ್ರದ ಅಜಂತಾದಲ್ಲಿರುವ  ಕಲೆಯೇ ಭಾನು ದುದ್ಹತ್‌ ಅವರಿಗೆ ಈ ಕಲೆಯಲ್ಲಿ ತೊಡಗಿಸಿಕೊಳ್ಳಲು ಮೂಲ ಪ್ರೇರಣೆ. ಬಾಲ್ಯದಿಂದಲೂ ಭಾನು ದುದ್ಹತ್‌ ಅವರಿಗೆ ಕಲೆಯ ಬಗ್ಗೆ ವಿಶೇಷ ಆಸಕ್ತಿ. ಅದರ ಫಲವೇ ಅವರು ದೊಡ್ಡ ಕಲಾವಿದರಾಗಿ ಬೆಳೆದಿದ್ದಾರೆ.

‘ನನಗೆ ಬಾಲ್ಯದಿಂದಲೂ ಚಿತ್ರಕಲೆ ಬಗ್ಗೆ ವಿಶೇಷ ಆಸಕ್ತಿ. ಚಿಕ್ಕವನಿದ್ದಾಗ ಸಗಣಿಯಿಂದ ಗೋಡೆಯಲ್ಲಿ ಕಲಾಕೃತಿ ನಿರ್ಮಿಸುತ್ತಿದ್ದೆ. ಸ್ವಲ್ಪ ದೊಡ್ಡವನಾದ ನಂತರ ಕಾಗದದ ಮೇಲೆ ಬಿಡಿಸುತ್ತಿದ್ದೆ. ಮುಂದೆ ಚಿತ್ರಕಲೆಯಲ್ಲಿ ಶಿಕ್ಷಣ ಪಡೆದೆ’ ಎಂದು 66 ವರ್ಷದ ಭಾನು ದುದ್ಹತ್‌ ಸೋಮವಾರ ತಿಳಿಸಿದರು.

‘ಆರಂಭದಲ್ಲಿ ಸಣ್ಣ ಕಲಾಕೃತಿಗಳನ್ನು ನಿರ್ಮಿಸುತ್ತಿದ್ದೆ. ಭಾರತೀಯ ಸಂಸ್ಕೃತಿ ಹಾಗೂ ಕಲೆಯ ಬಗ್ಗೆ ವಿಶೇಷ ಆಸಕ್ತಿ ನನ್ನಗಿತ್ತು. ಅದರ ಪರಿಣಾಮ ಉದ್ದನೆಯ ಕಲಾಕೃತಿ ಬಿಡಿಸಲು ಆರಂಭಿಸಿದೆ. ಜೊತೆಗೇ ಅಜಂತಾದಲ್ಲಿರುವ ಕಲೆ ಕೂಡ ನನ್ನ ಮೇಲೆ ಪ್ರಭಾವ ಬೀರಿತು’ ಎಂದು ನೆನಸಿಕೊಂಡರು.

ಈ ಕಲೆಯಲ್ಲಿ ಅವರ ಕುಟುಂಬ ಸದಸ್ಯರು ತೊಡಗಿಸಿಕೊಳ್ಳುವುದರ ಹಿಂದೆಯೂ ಆಸಕ್ತಿದಾಯಕ ವಿಷಯ ಇದೆ. ಅದನ್ನು ಭಾನು ದುದ್ಹತ್‌ ಅವರ ಮಾತುಗಳಲ್ಲೆ ಕೇಳೋಣ. ‘ನಾನು ಕಾಲೇಜಿನಲ್ಲಿ ಅಧ್ಯಾಪಕನಾಗಿ ಕಾರ್ಯನಿರ್ವಹಿಸುತ್ತಿದ್ದಾಗ ಪ್ರಭಾ ಜೊತೆ ವಿವಾಹವಾದೆ.

ಆಕೆಗೂ ಕಲೆಯ ಬಗ್ಗೆ ಸ್ವಲ್ಪ ಆಸಕ್ತಿ ಇತ್ತು. ಹಾಗಾಗಿ ನಾನು ಕಲಿಸುತ್ತಿದ್ದ ಕಾಲೇಜಿನಲ್ಲೆ ಆಕೆಗೆ ಸೇರಿಸಿದೆ. ಬಳಿಕ ನನ್ನ ಮಗ ಕೈಲಾಶ್‌ ಕೂಡ ಅಲ್ಲೆ ಪ್ರವೇಶ ಪಡೆದ. ಅವನಿಂದ ಆತನ ಹೆಂಡತಿ ಇದರ ಬಗ್ಗೆ ಆಸಕ್ತಿ ಬೆಳೆಸಿಕೊಂಡಳು. 28 ವರ್ಷ ಒಂದೇ ಕಾಲೇಜಿನಲ್ಲಿ ಕೆಲಸ ನಿರ್ವಹಿಸಲು ಅವಕಾಶ ಸಿಕ್ಕಿದ್ದು ನನ್ನ ಪುಣ್ಯ’ ಎಂದು ಸ್ಮರಿಸಿಕೊಂಡರು. ರಾಮಾಯಣ, ಕಾಶ್ಮೀರದ ಇತಿ ಹಾಸ, ಗಾಂಧಿ ಜೀವನ ದರ್ಶನ(55 ಮೀಟರ್‌ ಉದ್ದ) ಹಾಗೂ ಬೈಬಲ್‌ಗೆ (120 ಮೀಟರ್‌) ಸಂಬಂಧಿಸಿದ ಕಲಾ ಕೃತಿ ಈ ಕುಟುಂಬದ ಬಳಿಯೇ ಇವೆ.

*
ಪ್ರದರ್ಶನಕ್ಕೆ ಚಾಲನೆ
ಸೋಮವಾರ ಕಲಾಕೃತಿಯ ಪ್ರದರ್ಶನಕ್ಕೆ ಚಾಲನೆ ದೊರೆತಿದ್ದು, ಅಕ್ಟೋಬರ್‌ 18ರ ವರೆಗೆ ಸಾರ್ವ ಜನಿಕರ ವೀಕ್ಷಣೆಗೆ ಇರಲಿದೆ. ಸಮಯ ಬೆಳಿಗ್ಗೆ 11ರಿಂದ ಸಂಜೆ 7.30.

 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.