ಬೆಂಗಳೂರು: ಪ್ರೊ.ಎಂ.ಎಸ್.ರಘುನಾಥ್ ಅವರು ಕನ್ನಡಕ್ಕೆ ಅನುವಾದಿಸಿರುವ ‘ಕರ್ನಲ್‌ಗೆ ಯಾರೂ ಬರೆಯುವುದಿಲ್ಲ’ ಕಥಾಸಂಕಲನವನ್ನು ಲೇಖಕ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಭಾನುವಾರ ಬಿಡುಗಡೆ ಮಾಡಿದರು.
ನೊಬೆಲ್ ಪ್ರಶಸ್ತಿ ಪುರಸ್ಕೃತ ಸ್ಪ್ಯಾನಿಶ್ ಕಾದಂಬರಿಕಾರ ಗಾಬ್ರಿಯೇಲ್ ಗಾರ್ಸಿಯಾ ಮಾರ್ಕ್ವೇಜ್ ಅವರ ‘ನೋ ಒನ್ ರೈಟ್ಸ್ ಟು ಕರ್ನಲ್’ ಇದರ ಮೂಲ ಕೃತಿ. ಇದರ ಕನ್ನಡ ಅನುವಾದವನ್ನು ಆಕೃತಿ ಪ್ರಕಾಶನವು ಪ್ರಕಟಿಸಿದೆ. ಕರ್ನಲ್‌ಗೆ ಯಾರೂ ಬರೆಯುವುದಿಲ್ಲ, ಕನ್ನಡಿಯೊಂದಿಗೆ ಮಾತುಕತೆ, ಸಾವು: ಮತ್ತೊಂದು ಮಜಲು, ಈ ಗುಲಾಬಿಗಳನ್ನು ಚೆಲ್ಲಾಡುತ್ತಿರುವವರು ಯಾರು? ಎಂಬ ನಾಲ್ಕು ಕಥೆಗಳನ್ನು ಇದು ಒಳಗೊಂಡಿದೆ.
ಕೃತಿಯ ಕುರಿತು ವಿವರಿಸಿದ ನರಹಳ್ಳಿ, ‘ಪಿಂಚಣಿ ಹಣಕ್ಕಾಗಿ ಪ್ರತಿ ದಿನ ಎದುರು ನೋಡುವ ಒಬ್ಬ ಬಡ ಕರ್ನಲ್ ಹಾಗೂ ಅವನ ಅನಾರೋಗ್ಯ ಪೀಡಿತ ಹೆಂಡತಿಯ ಪರಿಸ್ಥಿತಿಯನ್ನು ಇದು ಚಿತ್ರಿಸುತ್ತದೆ. 14ನೇ ವಯಸ್ಸಿಗೇ ಕರ್ನಲ್‌ನ ಮಗ ಕೊಲೆಯಾಗುತ್ತಾನೆ. ಹಣದ ಅಗತ್ಯ ಬಿದ್ದಾಗ ಪ್ರೀತಿಯಿಂದ ಸಾಕಿದ ಹುಂಜವನ್ನು ಮಾರಲು ಇವನು ಒಪ್ಪುವುದಿಲ್ಲ. ಈ ಎಲ್ಲ ಸಮಸ್ಯೆಗಳ ನಡುವೆ ಕರ್ನಲ್ ಘನತೆಯಿಂದ ಬದುಕು ನಡೆಸುವುದನ್ನು ಇಲ್ಲಿ ಸೊಗಸಾಗಿ ವಿಶ್ಲೇಷಿಸಲಾಗಿದೆ’ ಎಂದರು.
ವ್ಯಕ್ತಿಯ ಮೇಲೆ ಧರ್ಮ ಮತ್ತು ರಾಜಕೀಯಗಳೆರಡೂ ಪ್ರಭಾವ ಬೀರುತ್ತವೆ. ಇವೆರಡಕ್ಕೂ ಬದುಕನ್ನು ಚಂದ ಮಾಡುವ ಶಕ್ತಿ ಇದೆ ಎಂದು ಮಾರ್ಕ್ವೇಜ್ ಹೇಳುತ್ತಾನೆ. ಆದರೆ ಇಂದು ಧರ್ಮ ಮತ್ತು ರಾಜಕೀಯಗಳೆರಡೂ ಭ್ರಷ್ಟವಾಗಿವೆ. ಭರವಸೆಯ ಬೆಳಕಿನಂತೆ ಇದ್ದ ಸಾಹಿತ್ಯವೂ ಶಕ್ತಿ ಕಳೆದುಕೊಂಡಿದೆ ಎಂದು ಬೇಸರ ವ್ಯಕ್ತಪಡಿಸಿದರು.
**
ಮೂಲ ಕೃತಿ: ನೋ ಒನ್ ರೈಟ್ಸ್ ಟು ಕರ್ನಲ್
ಮೂಲ ಲೇಖಕ: ಗಾಬ್ರಿಯೇಲ್ ಗಾರ್ಸಿಯಾ ಮಾರ್ಕ್ವೇಜ್
ಪ್ರಕಾಶನ: ಆಕೃತಿ
ಬೆಲೆ: ₹80: ಪುಟಗಳು: 70
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.