ಬೆಂಗಳೂರು: ಜ್ಞಾನ ಮತ್ತು ಸಂಶೋಧನೆಗಳ ಕಣಜವಾಗಬೇಕಿದ್ದ ವಿಶ್ವವಿದ್ಯಾಲಯಗಳು ಗ್ರಾಹಕರನ್ನು ಸೆಳೆಯುವ ಮಾಲ್‌ಗಳಾಗಿ ಬದಲಾಗುತ್ತಿವೆ ಎಂದು ಚಿಂತಕ ಆನಂದ್ ತೇಲ್‌ತುಂಬ್ಡೆ ಕಳವಳ ವ್ಯಕ್ತಪಡಿಸಿದರು.
ಸಂವಾದ ಸಂಸ್ಥೆಯ 25ನೇ ವರ್ಷಾಚರಣೆ ಅಂಗವಾಗಿ ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಸಮಕಾಲೀನ ಭಾರತದಲ್ಲಿ ಯುವತ್ವ ಮತ್ತು ಉನ್ನತ ಶಿಕ್ಷಣ -ಒಂದು ಮರುಚಿಂತನೆ’ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
‘ವಸ್ತುಗಳನ್ನು ಕೊಳ್ಳುವ ರೀತಿಯಲ್ಲಿ ಶಿಕ್ಷಣವನ್ನು ಖರೀದಿ ಮಾಡಲಾಗುತ್ತಿದೆ. ಇದರಿಂದಾಗಿ ಆರ್ಥಿಕ ಮತ್ತು ಸಾಮಾಜಿಕವಾಗಿ ಹಿಂದುಳಿದಿರುವ ಸಮುದಾಯಗಳ ಯುವಜನರು ಉನ್ನತ ಶಿಕ್ಷಣ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ’ ಎಂದರು.
ವಿಶ್ವವಿದ್ಯಾಲಯಗಳು ವಿಮರ್ಶೆ, ಆಲೋಚನೆ ಹಾಗೂ ಮುಕ್ತ ಸಂವಾದದೊಂದಿಗೆ ಚಿಂತನಾ ಮಾದರಿಗಳನ್ನು ಹುಟ್ಟುಹಾಕಬೇಕಿತ್ತು. ಆದರೆ, ಜ್ಞಾನ ಆಧಾರಿತ ಶಿಕ್ಷಣ ಇಲ್ಲವಾಗಿದ್ದು, ಬಂಡವಾಳಶಾಹಿಗಳ ಹಿಡಿತದಲ್ಲಿ ಸಿಲುಕಿ ಬಹುರಾಷ್ಟ್ರೀಯ ಕಂಪನಿಗಳಿಗೆ ಉದ್ಯೋಗಿಗಳನ್ನು ಒದಗಿಸುವ ಕಾರ್ಖಾನೆಗಳಾಗಿವೆ ಎಂದೂ ಹೇಳಿದರು.
ವಿಶ್ವವಿದ್ಯಾಲಯಗಳ ಈ ಸ್ಥಿತಿಗೂ ಹಿಂದುತ್ವದ ರಾಜಕಾರಣಕ್ಕೂ ಸಂಬಂಧ ಇದೆ. ಹೀಗಾಗಿಯೇ ದೇಶದ ಆಸ್ಮಿತೆಯನ್ನು ಕಾಪಾಡುವ ರಾಜಕೀಯ ಚಿಂತನೆಗಳು ಮುನ್ನೆಲೆಗೆ ಬರುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
ಪ್ರಾಧ್ಯಾಪಕ ಮುಜಾಫರ್ ಅಸ್ಸಾದಿ ಮಾತನಾಡಿ, ಜೆಎನ್‌ಯು ಮತ್ತು ಉಸ್ಮಾನಿಯಾ ವಿಶ್ವವಿದ್ಯಾಲಯಗಳಲ್ಲಿ ಹೊಸ ಚಿಂತನೆ ಮತ್ತು ಮಂಥನಗಳಿಗೆ ಅವಕಾಶ ಇತ್ತು. ಈಗ ಅವಕಾಶ ಇದೆಯೇ ಎಂಬುದನ್ನು ಪ್ರಶ್ನಿಸಿಕೊಳ್ಳಬೇಕಾಗಿದೆ ಎಂದರು.
ಸಮಾಜಶಾಸ್ತ್ರಜ್ಞ ಸಿ.ಜಿ. ಲಕ್ಷ್ಮೀಪತಿ, ‘ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಒಂದು ಪುಟ ಕನ್ನಡವನ್ನು ಸ್ಪಷ್ಟವಾಗಿ ಬರೆಯಲು ಶಕ್ತರಾಗಿಲ್ಲ. ಇದು ನಮ್ಮ ಶಿಕ್ಷಣ ವ್ಯವಸ್ಥೆ ದಿಕ್ಕು ತಪ್ಪಿರುವುದಕ್ಕೆ ಉದಾಹರಣೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.