ಬೆಂಗಳೂರು: ಎಲ್ಲ ವಿಧದ ಮದ್ಯ ಬಾಟಲಿಗಳ ಬಿರಡೆ ಮೇಲೆ ಅಂಟಿಸುವ ‘ಅಬಕಾರಿ ಲೇಬಲ್’ಗಳನ್ನು ಪಾಲಿಯೆಸ್ಟರ್ ಆಧಾರಿತ ಉತ್ಪನ್ನಗಳಿಂದ ತಯಾರಿಸಿ ಅಂಟಿಸುವ ಟೆಂಡರ್ ಪ್ರಕ್ರಿಯೆ ಪ್ರಶ್ನಿಸಿದ ಅರ್ಜಿಯನ್ನು ಗುರುವಾರಕ್ಕೆ (ಫೆ.22) ಮುಂದೂಡಲಾಗಿದೆ.
ಈ ಸಂಬಂಧ ನಗರದ ವಿದ್ಯಾರಣ್ಯಪುರ ನಿವಾಸಿ ರಾಮ್‌ಪ್ರಸಾದ್ ಹಾಗೂ ‘ಸ್ವಚ್ಛ’ ಹೆಸರಿನ ಸ್ವಯಂ ಸೇವಾ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಜಿ.ಎಂ.ರಾಜೇಶ್ ಬಾಬು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಹಾಗೂ ನ್ಯಾಯಮೂರ್ತಿ ಎಸ್.ಸುನಿಲ್ ದತ್ ಯಾದವ್ ಅವರಿದ್ದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು, ‘ಇವತ್ತೇ ಟೆಂಡರ್ ಪ್ರಕ್ರಿಯೆಯ ಬಿಡ್ ಮುಗಿದು ಹೋಗಿದೆ’ ಎಂದರು. ಇದಕ್ಕೆ ಪ್ರತಿಯಾಗಿ ನ್ಯಾಯಮೂರ್ತಿ ಎಸ್.ಸುನಿಲ್ ದತ್ ಯಾದವ್, ‘ನಾನು ವಕೀಲನಾಗಿದ್ದಾಗ ಈ ಅರ್ಜಿಯ ಕರಡು ತಯಾರಿಸಿದ್ದೆ. ಆದ್ದರಿಂದ ಇದರ ವಿಚಾರಣೆ ನನ್ನ ಮುಂದೆ ಬೇಡ’ ಎಂದರು.
‘ರಾಜ್ಯದಾದ್ಯಂತ ಮಾರಾಟವಾಗುವ ಎಲ್ಲ ಬಗೆಯ ಮದ್ಯದ ಬಾಟಲಿಗಳ ಮೇಲೆ ಪೇಪರ್ ಲೇಬಲ್ ಅಂಟಿಸಲಾಗುತ್ತಿದೆ. ಆದರೆ, ಈ ಪೇಪರ್ ಲೇಬಲ್‌ಗಳ ಬದಲಿಗೆ ಇನ್ನು ಮುಂದೆ ಪಾಲಿಯೆಸ್ಟರ್ ಲೇಬಲ್ ಬಳಸಲು ರಾಜ್ಯ ಅಬಕಾರಿ ಇಲಾಖೆ ಟೆಂಡರ್ ಕರೆದಿದೆ. ಇದು ಪರಿಸರಕ್ಕೆ ಹಾನಿಕರ. ಆದ್ದರಿಂದ ಟೆಂಡರ್ ಪ್ರಕ್ರಿಯೆಗೆ ತಡೆ ನೀಡಬೇಕು’ ಎಂಬುದು ಅರ್ಜಿದಾರ ಕೋರಿಕೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.