ಬೆಂಗಳೂರು: ನಗರದಲ್ಲಿ ಮೂಲಸೌಕರ್ಯದ ಕೊರತೆಯನ್ನು ನೀಗಿಸಲು ₹ 59 ಸಾವಿರ ಕೋಟಿ ಅಂದಾಜು ವೆಚ್ಚದ ಯೋಜನೆಯನ್ನು ತಯಾರಿಸಿರುವ ಬಿಬಿಎಂಪಿ, ಇದಕ್ಕಾಗಿ ₹ 39,000 ಕೋಟಿ ಸಾಲ ಪಡೆಯಲು ಅನುಮತಿಗಾಗಿ ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆದಿದೆ.
‘ಮುಂದಿನ ಹತ್ತು ವರ್ಷಗಳಲ್ಲಿ ಬೆಂಗಳೂರು ಜನಸಂಖ್ಯೆಗೆ ಅನುಗುಣವಾಗಿ ಮೂಲಸೌಕರ್ಯ ಅಭಿವೃದ್ಧಿ ಪಡಿಸಲು ₹ 1 ಲಕ್ಷ ಕೋಟಿ ಹೂಡಿಕೆ ಮಾಡಬೇಕಿದೆ. ಸಂಚಾರ ದಟ್ಟಣೆಯನ್ನು ನಿವಾರಿಸಲು ನಾವು ಒಟ್ಟು ₹ 59 ಸಾವಿರ ಕೋಟಿ ವೆಚ್ಚದಲ್ಲಿ ಪ್ರಾಥಮಿಕವಾಗಿ ಕೆಲವು ದೊಡ್ಡ ಯೋಜನೆಗಳ ಪ್ರಸ್ತಾವ ಮಾಡಿದ್ದೇವೆ’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಸುರಂಗ ರಸ್ತೆಗಳು, 17 ಎತ್ತರಿಸಿದ ಕಾರಿಡಾರ್‌ಗಳು, ಡಬಲ್ ಡೆಕರ್ ಮೇಲ್ಸೇತುವೆಗಳು, ಸ್ಕೈಡೆಕ್‌ನಂತಹ ದೊಡ್ಡ ಯೋಜನೆಗಳಿಗೆ ಬಾಹ್ಯ ಮೂಲಗಳಿಂದ ₹ 39 ಸಾವಿರ ಕೋಟಿ ಸಂಗ್ರಹಿಸಲಾಗುವುದು. ಸರ್ಕಾರದ ಭದ್ರತೆಯ ಆಧಾರದಲ್ಲಿ ದೇಶೀಯ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯಲು ಒಪ್ಪಿಗೆ ಪಡೆಯಬೇಕಿದೆ. ‘ನಮ್ಮ ಮೆಟ್ರೊ’ ವಿಸ್ತರಣೆಗೆ ಹಣಕಾಸು ಹೊಂದಾಣಿಕೆ ಮಾಡಿಕೊಂಡ ರೀತಿಯಲ್ಲಿಯೇ ಉಳಿದ ಯೋಜನೆಗಳಿಗೂ ನಿಧಿ ಕ್ರೋಡೀಕರಿಸಲಾಗುವುದು ಎಂದು ವಿವರಿಸಿದ್ದಾರೆ.
ಈಗ ಪ್ರಸ್ತಾವಿಸಿರುವ ನಾಲ್ಕು ಯೋಜನೆಗಳಲ್ಲಿ 45 ಕಿ.ಮೀ. ಉದ್ದದ ಸುರಂಗ ರಸ್ತೆಗಳ ನಿರ್ಮಾಣಕ್ಕೆ ₹ 36 ಸಾವಿರ ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಬಿಬಿಎಂಪಿ ಸುಮಾರು ₹ 16 ಸಾವಿರ ಕೋಟಿ ಸಂಗ್ರಹಿಸಲಿದೆ. ಉಳಿದ ಹಣವನ್ನು ಬೇರೆ ಹೊಸ ಹಣಕಾಸು ಮೂಲಗಳಿಂದ ಸಂಗ್ರಹಿಸಲು ಉದ್ದೇಶಿಸಲಾಗಿದೆ. ವಾಹನಗಳಿಗೆ ಸುಂಕ ವಿಧಿಸುವ ಯೋಜನೆಯೂ ಇದೆ ಎಂದು ಹೇಳಿದ್ದಾರೆ.
100 ಕಿಮೀ ಉದ್ದದ 17 ಎತ್ತರಿಸಿದ ಕಾರಿಡಾರ್‌ಗಳನ್ನು ನಿರ್ಮಿಸುವುದು ಮತ್ತು ಮೆಟ್ರೊ ಮಾರ್ಗಗಳಲ್ಲಿ ಡಬಲ್ ಡೆಕರ್ ಮೇಲ್ಸೇತುವೆ ನಿರ್ಮಿಸುವ ಯೋಜನೆಗಳನ್ನೂ ಪ್ರಸ್ತಾವಿಸಲಾಗಿದೆ. ಸ್ಕೈಡೆಕ್ ನಿರ್ಮಾಣ ನಾಲ್ಕನೇ ಯೋಜನೆಯಾಗಿದೆ. ಪ್ರಮುಖ ಕಾಮಗಾರಿಗಳಿಗಾಗಿ ರಾಜ್ಯ ಸರ್ಕಾರವು ಬಿಬಿಎಂಪಿಗೆ ವಾರ್ಷಿಕ ಅಂದಾಜು ₹ 3,000 ಕೋಟಿ ಮಂಜೂರು ಮಾಡುತ್ತಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದರು.
ನಾಲ್ಕು ಯೋಜನೆಗಳಿಗಾಗಿ ಮುಂದಿನ ನಾಲ್ಕು ವರ್ಷಗಳಲ್ಲಿ ₹ 2,000 ಕೋಟಿಯನ್ನು ಹೆಚ್ಚುವರಿಯಾಗಿ ಸರ್ಕಾರವು ಹಂಚಿಕೆ ಮಾಡಬೇಕು ಎಂದು ಮನವಿ ಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಪ್ರೀಮಿಯಂ ಫ್ಲೋರ್ ಏರಿಯಾ ಅನುಪಾತ (ಎಫ್‌ಎಆರ್) ನೀತಿ ಮತ್ತು ಹೊಸ ಜಾಹೀರಾತು ನೀತಿಯನ್ನು ಜಾರಿಗೊಳಿಸುವ ಮೂಲಕ ವಾರ್ಷಿಕ ₹ 3,000 ಕೋಟಿ ಸಾಲ ಮರುಪಾವತಿ ಹೊರೆಯನ್ನು ಹಂಚಿಕೊಳ್ಳುವುದಾಗಿ ಬಿಬಿಎಂಪಿ ಭರವಸೆ ನೀಡಿದೆ.
ಮುಂದಿನ ನಾಲ್ಕು ವರ್ಷಗಳಲ್ಲಿ ಸರ್ಕಾರ ಮತ್ತು ಬಿಬಿಎಂಪಿ ₹ 20,000 ಕೋಟಿಯನ್ನು ಭರಿಸಲಿದ್ದು, ಉಳಿದ ₹ 39 ಸಾವಿರ ಕೋಟಿಗೆ ಬಾಹ್ಯ ಮೂಲಗಳನ್ನು ಅವಲಂಬಿಸಬೇಕಾಗಿದೆ.
ಇದೇ ಮೊದಲು: ‘ಬಿಬಿಎಂಪಿ ಬಹುತೇಕ ಸಂದರ್ಭಗಳಲ್ಲಿ ತನ್ನ ಯೋಜನೆಗೆ ಸರ್ಕಾರದ ಬೆಂಬಲ ಮತ್ತು ತನ್ನದೇ ಆಂತರಿಕ ಸಂಪನ್ಮೂಲಗಳನ್ನು ಅವಲಂಬಿಸುತ್ತಿತ್ತು. ಇದೇ ಮೊದಲನೇ ಬಾರಿಗೆ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯಲು ಮುಂದಾಗಿದೆ. 1999-2000ರಲ್ಲಿ ಬಾಂಡ್‌ಗಳ ಮೂಲಕ ₹ 250 ಕೋಟಿ ಸಂಗ್ರಹಿಸಿದ್ದನ್ನು ಹೊರತುಪಡಿಸಿ ಇಲ್ಲಿವರೆಗೆ ಬಾಹ್ಯ ಮೂಲವನ್ನು ಅವಲಂಬಿಸಿರಲಿಲ್ಲ’ ಎಂದು ಬಿಬಿಎಂಪಿಯ ಹಿರಿಯ ಅಧಿಕಾರಿಯೊಬ್ಬರು ನೆನಪಿಸಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.