ADVERTISEMENT

NEPಯಿಂದ ಒಳಿತೆಷ್ಟು–ಕೆಡುಕೆಷ್ಟು: ಬೆಂ.ವಿ.ವಿ ಘಟಿಕೋತ್ಸವದಲ್ಲಿ ವಾದ–ಪ್ರತಿವಾದ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2024, 21:52 IST
Last Updated 10 ಸೆಪ್ಟೆಂಬರ್ 2024, 21:52 IST
<div class="paragraphs"><p>ಸಂಗೀತ ನಿರ್ದೇಶಕ ಗುರುಕಿರಣ್‌ ಮತ್ತು ರಾಜ್ಯ ಅಂಗವಿಕಲ ವ್ಯಕ್ತಿಗಳ ಅಧಿನಿಯಮದ ಮಾಜಿ ಆಯುಕ್ತ ಕೆ.ಎಸ್‌.ರಾಜಣ್ಣ ಅವರಿಗೆ ಬೆಂಗಳೂರು ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್‌ ಪ್ರದಾನ ಮಾಡಲಾಯಿತು. ಕುಲಪತಿ ಎಸ್‌.ಎಂ.ಜಯಕರ, ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್,&nbsp;ಯುಜಿಸಿ ಉಪಾಧ್ಯಕ್ಷ ಪ್ರೊ.ದೀಪಕ್‌ ಕುಮಾರ್ ಶ್ರೀವಾಸ್ತವ ಪಾಲ್ಗೊಂಡಿದ್ದರು </p></div>

ಸಂಗೀತ ನಿರ್ದೇಶಕ ಗುರುಕಿರಣ್‌ ಮತ್ತು ರಾಜ್ಯ ಅಂಗವಿಕಲ ವ್ಯಕ್ತಿಗಳ ಅಧಿನಿಯಮದ ಮಾಜಿ ಆಯುಕ್ತ ಕೆ.ಎಸ್‌.ರಾಜಣ್ಣ ಅವರಿಗೆ ಬೆಂಗಳೂರು ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್‌ ಪ್ರದಾನ ಮಾಡಲಾಯಿತು. ಕುಲಪತಿ ಎಸ್‌.ಎಂ.ಜಯಕರ, ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್, ಯುಜಿಸಿ ಉಪಾಧ್ಯಕ್ಷ ಪ್ರೊ.ದೀಪಕ್‌ ಕುಮಾರ್ ಶ್ರೀವಾಸ್ತವ ಪಾಲ್ಗೊಂಡಿದ್ದರು

   

 –ಪ್ರಜಾವಾಣಿ ಚಿತ್ರ

ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿಯ (ಎನ್‌ಇಪಿ) ಒಳಿತು–ಕೆಡಕುಗಳ ಕುರಿತ ವಾದ–ಪ್ರತಿವಾದಕ್ಕೆ ಬೆಂಗಳೂರು ವಿಶ್ವವಿದ್ಯಾಲಯದ 59ನೇ ಘಟಿಕೋತ್ಸವ ಸಾಕ್ಷಿಯಾಯಿತು. ಯುಜಿಸಿ ಉಪಾಧ್ಯಕ್ಷ ದಿಲೀಪ್‌ ಕುಮಾರ್ ಶ್ರೀವಾಸ್ತವ ಅವರು ಎನ್‌ಇಪಿಯನ್ನು ಹೊಗಳಿ ಮಾತನಾಡಿದರು. ಅವರ ಹೊಗಳಿಕೆಯನ್ನು ಅಲ್ಲಗಳೆಯುತ್ತಲೇ, ರಾಜ್ಯ ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್ ಅವರು ಎನ್‌ಇಪಿಯನ್ನು ಕೇಂದ್ರ ಸರ್ಕಾರವು ರದ್ದುಪಡಿಸಬೇಕು ಎಂದು ಆಗ್ರಹಿಸಿದರು.

ADVERTISEMENT
‘ಶಿಕ್ಷಣದ ಗುಣಮಟ್ಟ ಸುಧಾರಣೆ’

ಕೇಂದ್ರ ಸರ್ಕಾರದ ನೂತನ ಶಿಕ್ಷಣ ನೀತಿ–2020 (ಎನ್‌ಇಪಿ–2020) ದೇಶದ ಶಿಕ್ಷಣ ಕ್ಷೇತ್ರದಲ್ಲಿ ಅಭೂತಪೂರ್ವ ಬದಲಾವಣೆಗಳನ್ನು ತಂದಿದೆ. ಬಹು ಪ್ರವೇಶ ಮತ್ತು ಬಹು ನಿರ್ಗಮನ (ಮಲ್ಟಿಪಲ್‌ ಎಂಟ್ರಿ–ಮಲ್ಟಿಪಲ್‌ ಎಕ್ಸಿಟ್‌) ವ್ಯವಸ್ಥೆಯು ವಿದ್ಯಾರ್ಥಿಗಳ ಶಿಕ್ಷಣದ ಆಯ್ಕೆಗಳನ್ನು ಹೆಚ್ಚಿಸಿವೆ. ವಿದ್ಯಾರ್ಥಿಗಳು ಯಾವುದೇ ವಿಷಯವನ್ನು ಅಧ್ಯಯನ ಮಾಡಬಹುದಾಗಿದೆ. ಒಂದೇ ಅವಧಿಯಲ್ಲಿ ಹಲವು ವಿಷಯಗಳಲ್ಲಿ ಪದವಿ ಪಡೆಯಬಹುದಾಗಿದೆ.

ಸಾಮಾಜಿಕ ಮತ್ತು ಆರ್ಥಿಕ ಕಾರಣಗಳು ಹಾಗೂ ಒತ್ತಡಗಳ ಕಾರಣದಿಂದ ಉನ್ನತ ಶಿಕ್ಷಣವನ್ನು ವಿದ್ಯಾರ್ಥಿಗಳು ಅರ್ಧದಲ್ಲೇ ಬಿಡುವವರ ಸಂಖ್ಯೆ ಭಾರತದಲ್ಲಿ ಅತ್ಯಧಿಕ ಪ್ರಮಾಣದಲ್ಲಿದೆ. ಶೈಕ್ಷಣಿಕ ವರ್ಷದಲ್ಲೇ ಕೋರ್ಸ್‌ಗಳನ್ನು, ವಿಷಯಗಳನ್ನು ಬದಲಿಸಲು ಅವಕಾಶವಿರುವ ಕಾರಣ ಹೀಗೆ ಶಿಕ್ಷಣವನ್ನು ಅರ್ಧದಲ್ಲೇ ಬಿಡುವುದನ್ನು ತಡೆಯುವಲ್ಲಿ ಎನ್‌ಇಪಿ ಮಹತ್ವದ ಪಾತ್ರ ವಹಿಸುತ್ತಿದೆ.

 –ಪ್ರೊ.ದೀಪಕ್ ಕುಮಾರ್ ಶ್ರೀವಾಸ್ತವ, ಉಪಾಧ್ಯಕ್ಷ, ಯುಜಿಸಿ

‘ಲಾಭವಾಗಿದ್ದು ಖಾಸಗಿ ವಿಶ್ವವಿದ್ಯಾಲಯಗಳಿಗಷ್ಟೇ’

ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ವಿಜ್ಞಾನ, ಎಂಜಿನಿಯರಿಂಗ್‌, ವೈದ್ಯಕೀಯ, ಕಾನೂನು, ಮಾನವಿಕ ಅಧ್ಯಯನಗಳು ಒಂದೇ ಕ್ಯಾಂಪಸ್‌ನಲ್ಲಿ ಲಭ್ಯವಿವೆ. ನೂತನ ಶಿಕ್ಷಣ ನೀತಿಯಿಂದ ನಿಜಕ್ಕೂ ಲಾಭವಾಗಿದ್ದು ಖಾಸಗಿ ವಿ.ವಿಗಳಿಗೆ ಮಾತ್ರ. ರಾಜ್ಯದ  ಸರ್ಕಾರಿ ವಿದ್ಯಾಲಯಗಳಲ್ಲಿ ಈ ರೀತಿಯ ಸ್ಥಿತಿ ಇಲ್ಲ. ವೈದ್ಯಕೀಯ, ಕೃಷಿ, ವಿಜ್ಞಾನಕ್ಕೆ ಪ್ರತ್ಯೇಕ ವಿಶ್ವವಿದ್ಯಾಲಯಗಳಿವೆ. ಹೀಗಾಗಿ ರಾಜ್ಯದಲ್ಲಿ ಎನ್‌ಇಪಿಯ ಬಹುಶಿಸ್ತೀಯ ಕೋರ್ಸ್‌ಗಳು ಯಶಸ್ವಿಯಾಗಲಿಲ್ಲ. 

ಲಕ್ಷಾಂತರ ಡೊನೇಷನ್ ನೀಡಿ ಖಾಸಗಿ ವಿ.ವಿ.ಗಳಿಗೆ ಹೋಗಲು ಸಾಧ್ಯವಿಲ್ಲದೇ ಇದ್ದ ಬಡ ಕುಟುಂಬದ ವಿದ್ಯಾರ್ಥಿಗಳಿಗೆ ಇದರಿಂದ ಅನುಕೂಲವಾಗಲಿಲ್ಲ. ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ನಮ್ಮ ಸರ್ಕಾರವು, ಕೇಂದ್ರ ಸರ್ಕಾರದ ನೂತನ ಶಿಕ್ಷಣ ನೀತಿಯನ್ನು ರಾಜ್ಯದಲ್ಲಿ ರದ್ದುಪಡಿಸಿತು. ಅಸಮಾನತೆಗೆ ಅವಕಾಶ ಮಾಡಿಕೊಡುವ ಎನ್‌ಇಪಿಯನ್ನು ದೇಶದಾದ್ಯಂತ ಕೇಂದ್ರ ಸರ್ಕಾರವೇ ರದ್ದುಪಡಿಸಬೇಕು.

ಡಾ.ಎಂ.ಸಿ.ಸುಧಾಕರ್, ರಾಜ್ಯ ಉನ್ನತ ಶಿಕ್ಷಣ ಸಚಿವ

ಮೊದಲ ತಲೆಮಾರಿನ ಓದುಗಳಿಗೆ ಆರು ಚಿನ್ನದ

ಒಂದೆಕರೆ ಜಮೀನಿದ್ದರೂ ನೀರಿಲ್ಲದ ಕಾರಣ, ಗೇಣಿ ಪದ್ಧತಿಯಲ್ಲಿ ಮತ್ತೊಬ್ಬರ ಹೊಲದಲ್ಲಿ ಬೆವರಿಳಿಸುವ ಅಪ್ಪ. ಆ ಹೊಲದಿಂದ ತಂದ ಮೇವು ಹಾಕಿ ಹಸುಗಳನ್ನು ಸಲಹುವ ತಾಯಿ. ಹಸುಗಳ ಕೊಡುವ ಹಾಲೇ ಜೀವನಾಧಾರ. ತಮ್ಮ ಹೆಸರನ್ನೂ ಬರೆಯಲು ಬರದ ಅಪ್ಪ–ಅಮ್ಮನ ಹೆಮ್ಮೆಯ ಮಗಳಿಗೆ ಆರು ಚಿನ್ನದ ಪದಕ ಮತ್ತು ಒಂದು ನಗದು ಬಹುಮಾನದ ಗೌರವ.

ಕನ್ನಡ ಸ್ನಾತಕೋತ್ತರ ಪದವಿಯಲ್ಲಿ ಅತಿಹೆಚ್ಚು ಅಂಕಗಳನ್ನು ಪಡೆದ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ವಿಶಾಲಾಕ್ಷಿ ವೈ.ಬಿ. ಅವರದ್ದು ರಾಮನಗರದ ಕೂಟುಗಲ್ಲು ಹೋಬಳಿಯ ಎರೇಹಳ್ಳಿ. ಅಕ್ಷರವೇ ಗೊತ್ತಿಲ್ಲದ ಕುಟುಂಬದಲ್ಲಿ ಶಾಲೆ, ಕಾಲೇಜು, ವಿಶ್ವವಿದ್ಯಾಲಯದ ಮೆಟ್ಟಿಲು ಏರಿದ, ಚಿನ್ನದ ಪದಕವನ್ನೂ ಪಡೆದ ಮೊದಲ ತಲೆಮಾರು ವಿಶಾಲಾಕ್ಷಿಯದ್ದೇ.

ಸಂಭ್ರಮದ ಕ್ಷಣ: ಇಬ್ಬರಿಗೆ ಒಂಬತ್ತು, ಇನ್ನಿಬ್ಬರಿಗೆ ಆರು, ಮತ್ತೂ ಹಲವರಿಗೆ ನಾಲ್ಕು– ಮೂರು–ಎರಡು–ಒಂದು ಚಿನ್ನದ ಪದಕಗಳು. ತಮ್ಮ ಹೆಸರು ಕೂಗಿದೊಡನೆ ವೇದಿಕೆ ಏರಿ ಚಿನ್ನದ ಪದಕಗಳಿದ್ದ ಫಲಕಗಳನ್ನು ಪಡೆದು ವಿದ್ಯಾರ್ಥಿಗಳು ಪುಳಕಿತರಾದರೆ, ವೇದಿಕೆ ಕೆಳಗಿದ್ದ ಪೋಷಕರ ಕಣ್ಣಾಲಿಗಳು ತುಂಬಿದ್ದವು. 

ಇಂತಹ ನೂರಾರು ಸಂಭ್ರಮದ ಕ್ಷಣಗಳಿಗೆ ಬೆಂಗಳೂರು ವಿಶ್ವವಿದ್ಯಾಲಯದ 59ನೇ ಘಟಿಕೋತ್ಸವ ಸಾಕ್ಷಿಯಾಯಿತು. ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಘಟಿಕೋತ್ಸವದಲ್ಲಿ ಪದವಿ, ಸ್ನಾತಕ ಪದವಿ ಸೇರಿ ವಿವಿಧ ವಿಭಾಗಗಳ 158 ವಿದ್ಯಾರ್ಥಿಗಳಿಗೆ ಒಟ್ಟು 308 ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.