ADVERTISEMENT

6 ಬೋಗಿ ಅಳವಡಿಕೆ: ಇನ್ನೂ ಸಿಗದ ರೈಲ್ವೆ ಇಲಾಖೆ ಸಮ್ಮತಿ

​ಪ್ರಜಾವಾಣಿ ವಾರ್ತೆ
Published 19 ಜೂನ್ 2018, 11:40 IST
Last Updated 19 ಜೂನ್ 2018, 11:40 IST
ಮೆಟ್ರೊ ರೈಲಿನ ದಟ್ಟಣೆಯ ನೋಟ
ಮೆಟ್ರೊ ರೈಲಿನ ದಟ್ಟಣೆಯ ನೋಟ   

ಬೆಂಗಳೂರು: ಮೆಟ್ರೊ ರೈಲಿಗೆ 6 ಬೋಗಿಗಳನ್ನು ಜೋಡಿಸುವ ಕಾರ್ಯಕ್ಕೆ ರೈಲ್ವೆ ಇಲಾಖೆ ಇನ್ನೂ ಸಮ್ಮತಿಸಿಲ್ಲ. ಮೆಟ್ರೊ ನಿಗಮದ ಅಧಿಕಾರಿಗಳು ಈಗಾಗಲೇ ಪತ್ರ ವ್ಯವಹಾರ ನಡೆಸಿದ್ದು, ರೈಲ್ವೆ ಇಲಾಖೆ ಅದನ್ನು ಪರಿಶೀಲಿಸುತ್ತಿದೆ ಎಂದು ನಿಗಮದ ಸಾರ್ವಜನಿಕ ಸಂಪರ್ಕಾಧಿಕಾರಿ ವಸಂತರಾವ್‌ ತಿಳಿಸಿದರು.

ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಜೂನ್‌ 19, 20ರ ಒಳಗೆ 6 ಬೋಗಿಗಳ ರೈಲು ಎರಡೂ ಹಂತದ (ನೇರಳೆ ಮತ್ತು ಹಸಿರು) ಮಾರ್ಗಗಳಲ್ಲಿ ಓಡಾಡಬೇಕಿತ್ತು. ಹೆಚ್ಚುವರಿ ಬೋಗಿಗಳು ಸಿದ್ಧವಾಗಿವೆ. ಎರಡನೇ ಹಂತದ ಮೆಟ್ರೊ ಯೋಜನೆ ಜಾರಿಯಾಗಿ ಒಂದು ವರ್ಷವಾದ ಜೂನ್‌ 17ರಂದು ಈ ಬೋಗಿಗಳನ್ನು ಜೋಡಿಸಿ ಪರೀಕ್ಷಾರ್ಥ ಚಾಲನೆ ನಡೆಸಲು ಉದ್ದೇಶಿಸಿದ್ದೆವು. ಆದರೆ, ತಾಂತ್ರಿಕ ಕಾರಣದಿಂದ ಒಂದು ವಾರ ಕಾಲ ಕಾರ್ಯಕ್ರಮ ಮುಂದೂಡಲಾಗಿದೆ ಎಂದು ಅವರು ತಿಳಿಸಿದರು.

ಜೂನ್‌ 22ರಂದು ರೈಲುಗಳಿಗೆ 6 ಬೋಗಿಗಳನ್ನು ಜೋಡಿಸಲಾಗುವುದು ಎಂಬ ಸುದ್ದಿ ಹಬ್ಬಿದೆ. ಈ ಬಗ್ಗೆ ಸ್ಪಷ್ಟನೆಗೆ ಮೆಟ್ರೊ ವ್ಯವಸ್ಥಾಪಕ ನಿರ್ದೇಶಕ ಮಹೇಂದ್ರ ಜೈನ್‌ ಅವರನ್ನು ಹಲವು ಬಾರಿ ಸಂಪರ್ಕಿಸಿದರೂ ಅವರು ಕರೆ ಸ್ವೀಕರಿಸಲಿಲ್ಲ.

ADVERTISEMENT

ಪ್ರತಿದಿನ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಲೇ ಇದೆ. ಪ್ರತಿದಿನ ಸರಾಸರಿ 3.50 ಲಕ್ಷ ಪ್ರಯಾಣಿಕರು ಮೆಟ್ರೊ ಬಳಸುತ್ತಿದ್ದಾರೆ. ಆ ದಟ್ಟಣೆ ನಿಭಾಯಿಸಲು ಬೋಗಿಗಳ ಸಂಖ್ಯೆ ಹೆಚ್ಚಿಸಲೇಬೇಕು. ಮಾತ್ರವಲ್ಲ ನಿಗಮವು ಕಳೆದ ವರ್ಷ ₹ 538 ಕೋಟಿ ನಷ್ಟ ಅನುಭವಿಸಿತ್ತು. ಇದನ್ನೂ ಸರಿದೂಗಿಸುವ ಜವಾಬ್ದಾರಿ ಇದೆ. ಮಾರ್ಗ ವಿಸ್ತರಣೆಯೂ ತ್ವರಿತವಾಗಿ ಆಗಬೇಕಿದೆ. ಎಲ್ಲ ಜವಾಬ್ದಾರಿಗಳನ್ನು ನಿಭಾಯಿಸುವ ಒತ್ತಡ ನಿಗಮದ ಮೇಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಖಾಲಿ ಜಾಗ ಬಾಡಿಗೆಗೆ: ಮೆಟ್ರೊ ನಿಲ್ದಾಣಗಳ ಖಾಲಿ ಜಾಗಗಳನ್ನು ವಾಣಿಜ್ಯ ಉದ್ದೇಶಗಳಿಗೆ ಬಳಕೆ ಮಾಡಲು ನಿಗಮ ಈಗಾಗಲೇ ಅರ್ಜಿ ಕರೆದಿದೆ. ಕಿಯೋಸ್ಕ್‌ ಯಂತ್ರಗಳ (ಎಟಿಎಂ, ರಿಚಾರ್ಜ್‌ ಕೇಂದ್ರ, ಮೊಬೈಲ್‌ ಅಂಗಡಿಗಳು, ಮಾರಾಟ ಮಳಿಗೆಗಳು ಇತ್ಯಾದಿ) ಸ್ಥಾಪನೆಗೆ ಆಸಕ್ತರು ಭಾಗವಹಿಸಬಹುದು. ಜನದಟ್ಟಣೆ ಮತ್ತು ಸೌಲಭ್ಯ ಆಧರಿಸಿ ನಿಲ್ದಾಣಗಳನ್ನು ಎ, ಬಿ ಮತ್ತು ಸಿ ಆಗಿ ವಿಂಗಡಿಸಲಾಗಿದೆ. ತಾತ್ಕಾಲಿಕ ಸ್ಟಾಲ್‌ ನಿರ್ಮಿಸಿ ವ್ಯಾಪಾರ ಮಾಡಬಹುದು. ‘ಎ’ ನಿಲ್ದಾಣಗಳಲ್ಲಿ ಇಂಥ ಸ್ಟಾಲ್‌ಗಳ ಮಾಸಿಕ ಬಾಡಿಗೆ (ಜಿಎಸ್‌ಟಿ ಹೊರತುಪಡಿಸಿ) ₹5 ಸಾವಿರ ಇದೆ. ‘ಬಿ’ ಕೇಂದ್ರಗಳಲ್ಲಿ ₹4 ಸಾವಿರ, ಸಿ ನಿಲ್ದಾಣಗಳಿಗೆ ₹ 3 ಸಾವಿರ ಬಾಡಿಗೆ ನಿಗದಿಪಡಿಸಲಾಗಿದೆ. ಮಾತ್ರವಲ್ಲ, ಆದಾಯ ಸರಿದೂಗಿಸಲು ನಿಗಮವು ನಿಲ್ದಾಣ ಮತ್ತು ಮಾರ್ಗಗಳಲ್ಲಿ ಜಾಹೀರಾತು ಫಲಕ ಅಳವಡಿಸುವವರಿಗೆ ಗುತ್ತಿಗೆ ನೀಡಲು ಟೆಂಡರು ಕರೆಯಲು ಸಿದ್ಧತೆ ನಡೆಸಿದೆ ಎಂದು ಮೆಟ್ರೊ ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.