ಬೆಂಗಳೂರು: ಗೃಹರಕ್ಷಕ ದಳ, ಪೌರ ರಕ್ಷಣೆ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಲ್ಲಿ ಅತ್ಯುತ್ತಮ ಕೆಲಸ ಮಾಡಿದ 61 ಮಂದಿಗೆ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ರಾಷ್ಟ್ರಪತಿ ಪದಕ ಪ್ರದಾನ ಮಾಡಿದರು.
ರಾಜಭವನ ಗಾಜಿನ ಮನೆಯಲ್ಲಿ ಸೋಮವಾರ ಆಯೋಜಿಸಿದ್ದ ಸಮಾರಂಭದಲ್ಲಿ 2022ನೇ ಸಾಲಿನ ಪದಕ ಪ್ರದಾನ ಮಾಡಿ ಪುರಸ್ಕೃತರನ್ನು ಅಭಿನಂದಿಸಲಾಯಿತು.
ರಾಜ್ಯಪಾಲ ಥಾವರಚಂದ್ ಗೆಹಲೋತ್, ‘ದೇಶದ ಭದ್ರತೆ, ಏಕತೆ ಮತ್ತು ಸಮಗ್ರತೆಯನ್ನು ಕಾಪಾಡಲು ಕೆಲಸವನ್ನು ಗೃಹರಕ್ಷಕ ದಳ, ಪೌರ ರಕ್ಷಣೆ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಮಾಡುತ್ತಿದೆ. ಇಲಾಖೆಯ ಅಧಿಕಾರಿ– ಸಿಬ್ಬಂದಿ ಇಂದಿನ ಯುವಜನತೆಗೆ ಸ್ಫೂರ್ತಿ’ ಎಂದರು.
‘ಕೋವಿಡ್, ಪ್ರವಾಹ, ಬೆಂಕಿ ಅವಘಡ, ರಸ್ತೆ, ರೈಲು ಮತ್ತು ವಾಯು ಅವಘಡ ಹಾಗೂ ನೈಸರ್ಗಿಕ ವಿಕೋಪಗಳು ಸಂಭವಿಸಿದಾಗ ಇಲಾಖೆಯ ಸಿಬ್ಬಂದಿ ಅತ್ಯುತ್ತಮ ಕೆಲಸ ಮಾಡಿದ್ದಾರೆ. ಮುಂದಿನ ದಿನಗಳಲ್ಲೂ ಅತ್ಯುತ್ತಮ ಕೆಲಸ ಮಾಡುವಂತಾಗಲಿ’ ಎಂದು ಅವರು ಹೇಳಿದರು.
ಗೃಹ ಸಚಿವ ಆರಗ ಜ್ಞಾನೇಂದ್ರ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯೆಲ್, ಡಿಜಿಪಿ ಅಮರ್ ಕುಮಾರ್ ಪಾಂಡೆ ಸಮಾರಂಭದಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.