ಬೆಂಗಳೂರು: ರಾಜಧಾನಿಯಲ್ಲಿ ₹694 ಕೋಟಿ ವೆಚ್ಚದಲ್ಲಿ 389.68 ಕಿಲೋ ಮೀಟರ್ ಉದ್ದದ ರಸ್ತೆಗಳ ಮರು ಡಾಂಬರೀಕರಣ ಮಾಡುವ ಕ್ರಿಯಾ ಯೋಜನೆಗೆ ನಗರಾಭಿವೃದ್ಧಿ ಇಲಾಖೆ ಒಪ್ಪಿಗೆ ನೀಡಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಎರಡು ಆರ್ಥಿಕ ವರ್ಷಗಳ ಅವಧಿಯಲ್ಲಿ ಈ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಿದೆ.
ರಾಜಧಾನಿಯ ಹೃದಯ ಭಾಗಕ್ಕಿಂತಲೂ ಹೊರ ವಲಯದಲ್ಲಿ ರಸ್ತೆಗಳು ತೀರಾ ಹದಗೆಟ್ಟಿವೆ. ಹೀಗಾಗಿ ಆ ಭಾಗದಲ್ಲಿನ ರಸ್ತೆ ಕಾಮಗಾರಿಗಳಿಗೆ ಹೆಚ್ಚಿನ ಅನುದಾನ ಒದಗಿಸಲಾಗಿದೆ. ಯಲಹಂಕ, ಬೊಮ್ಮನಹಳ್ಳಿ, ರಾಜರಾಜೇಶ್ವರಿನಗರ ಸೇರಿದಂತೆ ಬಿಬಿಎಂಪಿ ಹೊರವಲಯದ ಒಂಬತ್ತು ವಿಧಾನಸಭಾ ಕ್ಷೇತ್ರಗಳಲ್ಲಿನ ರಸ್ತೆಗಳ ಮರು ಡಾಂಬರೀಕರಣಕ್ಕೆ ಒಟ್ಟು ₹ 429.5 ಕೋಟಿ ಅನುದಾನ ಒದಗಿಸಲಾಗಿದೆ.
ಬೃಹತ್ ಸಂಖ್ಯೆಯ ಐ.ಟಿ ಕಂಪನಿಗಳು ಕಾರ್ಯನಿರ್ವಹಿಸುತ್ತಿರುವ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಮೂಲಸೌಕರ್ಯದ ಕೊರತೆ ತೀವ್ರವಾಗಿದೆ. ಅಲ್ಲಿನ ರಸ್ತೆಗಳ ಸ್ಥಿತಿ ಶೋಚನೀಯವಾಗಿದೆ. ಈ ಕ್ಷೇತ್ರದ ರಸ್ತೆಗಳ ಸುಧಾರಣೆಗೆ ಬರೋಬ್ಬರಿ ₹ 140 ಕೋಟಿ ಅನುದಾನ ಮೀಸಲಿಡಲಾಗಿದೆ. ಆದರೆ, ದಾಸರಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಸಿಕ್ಕಿರುವ ಪಾಲು ₹ 20 ಕೋಟಿ ಮಾತ್ರ.
ನಗರದ ಒಳ ಭಾಗದಲ್ಲಿರುವ 18 ವಿಧಾನಸಭಾ ಕ್ಷೇತ್ರಗಳಲ್ಲಿನ ರಸ್ತೆಗಳ ಮರು ಡಾಂಬರೀಕರಣಕ್ಕೆ ಒಟ್ಟು ₹264.5 ಕೋಟಿ ಒದಗಿಸಲಾಗಿದೆ. ಬಿಬಿಎಂಪಿಯ ಪೂರ್ವ, ಪಶ್ಚಿಮ ಮತ್ತು ದಕ್ಷಿಣ ವಲಯಗಳಲ್ಲಿರುವ ಈ ಕ್ಷೇತ್ರಗಳಲ್ಲಿ ರಸ್ತೆಗಳ ಸ್ಥಿತಿ ತುಸು ಉತ್ತಮವಾಗಿದೆ.
₹659.71 ಕೋಟಿ ವೆಚ್ಚದಲ್ಲಿ 197 ರಸ್ತೆಗಳ ದುರಸ್ತಿಗೆ ಸೆಪ್ಟೆಂಬರ್‌ನಲ್ಲಿ ಬಿಬಿಎಂಪಿ ಪ್ರಸ್ತಾವ ಸಿದ್ಧಪಡಿಸಿತ್ತು. ಆದರೆ, ಶಾಸಕರ ಒತ್ತಡ ಹೆಚ್ಚಾಗಿದ್ದರಿಂದ ತುರ್ತು ದುರಸ್ತಿ ಅಗತ್ಯವಿರುವ ಮತ್ತಷ್ಟು ರಸ್ತೆಗಳನ್ನು ಪಟ್ಟಿಗೆ ಸೇರಿಸಲು ತೀರ್ಮಾನಿಸಲಾಗಿತ್ತು. ಒಟ್ಟು 218 ರಸ್ತೆಗಳ ದುರಸ್ತಿಗೆ ನವೆಂಬರ್‌ನಲ್ಲಿ ಬಿಬಿಎಂಪಿ ಪರಿಷ್ಕೃತ ಪ್ರಸ್ತಾವ ಸಲ್ಲಿಸಿತ್ತು.
ನಗರಾಭಿವೃದ್ಧಿ ಇಲಾಖೆಯು ಕ್ರಿಯಾಯೋಜನೆಗೆ ಅನುಮೋದನೆ ನೀಡಿರುವುದರಿಂದ 2025ರ ಜನವರಿಯಲ್ಲಿ ರಸ್ತೆಗಳ ಮರು ಡಾಂಬರೀಕರಣ ಆರಂಭಿಸಲು ಬಿಬಿಎಂಪಿ ಸಿದ್ಧತೆ ನಡೆಸಿದೆ. ರಸ್ತೆ ಮತ್ತು ಪಾದಚಾರಿ ಮಾರ್ಗಗಳ ಕಾಮಗಾರಿಗಳಿಗೆ ‘ಸಮಗ್ರ ನಿರ್ಧಾರಿತ ಕಾರ್ಯಾಚರಣೆ ವಿಧಾನ (ಎಸ್ಒಪಿ)’ ರೂಪಿಸಲು ಬಿಬಿಎಂಪಿಯು 15 ಸದಸ್ಯರ ತಜ್ಞರ ಸಮಿತಿ ರಚಿಸಿದೆ. ಈ ಸಮಿತಿ ಡಿಸೆಂಬರ್ ಮಧ್ಯ ಭಾಗದಲ್ಲಿ ಶಿಫಾರಸುಗಳನ್ನು ಸಲ್ಲಿಸುವ ಸಾಧ್ಯತೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.