ಬೆಂಗಳೂರು: ರಾಜ್ಯದಲ್ಲಿ ಕಳೆದ ವರ್ಷ 86,563 ಕ್ಯಾನ್ಸರ್ ಪ್ರಕರಣಗಳು ಹೊಸದಾಗಿ ವರದಿಯಾಗಿವೆ ಎಂದು ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ತಿಳಿಸಿದೆ.
ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನದ ಪ್ರಯುಕ್ತ ಸಂಸ್ಥೆಯು ಗುರುವಾರ ಬೆಳಿಗ್ಗೆ 10.45ಕ್ಕೆ ಜಾಗೃತಿ ಕಾರ್ಯಕ್ರಮ ಹಾಗೂ ಕಾರ್ಯಾಗಾರ ಹಮ್ಮಿಕೊಂಡಿದೆ.
2023ರಲ್ಲಿ ದೃಢಪಟ್ಟ ಪ್ರಕರಣಗಳಲ್ಲಿ ಮಹಿಳೆಯರೇ (47,959) ಅಧಿಕ ಸಂಖ್ಯೆಯಲ್ಲಿ ಕ್ಯಾನ್ಸರ್ ಪೀಡಿತರಾಗಿದ್ದಾರೆ. ಬೆಂಗಳೂರಿನಲ್ಲಿ ಗರಿಷ್ಠ (18,125) ಪ್ರಕರಣಗಳು ದೃಢಪಟ್ಟಿವೆ. ಬೆಳಗಾವಿ (6,601), ಮೈಸೂರು (4,166), ಬಳ್ಳಾರಿ (3,941) ಹಾಗೂ ಕಲಬುರಗಿಯಲ್ಲಿ (3,709) ಅಧಿಕ ಪ್ರಕರಣಗಳು ವರದಿಯಾಗಿವೆ ಎಂದು ಸಂಸ್ಥೆ ತಿಳಿಸಿದೆ.
ರಾಜ್ಯದಲ್ಲಿ ಪ್ರತಿ ವರ್ಷ ಸರಾಸರಿ 975 ಮಕ್ಕಳಲ್ಲಿ ಕ್ಯಾನ್ಸರ್ ಪ್ರಕರಣಗಳು ದೃಢಪಡುತ್ತಿವೆ. ಬೆಂಗಳೂರಿನಲ್ಲಿ ಸರಾಸರಿ 280ರಿಂದ 300 ಪ್ರಕರಣಗಳು ವರದಿಯಾಗುತ್ತಿವೆ ಎಂದಿದೆ.
‘ರೋಗ ಬಂದ ನಂತರ ಚಿಕಿತ್ಸೆ ಪಡೆಯುವುದಕ್ಕಿಂತ ರೋಗ ಬರದಂತೆ ಮುನ್ನೆಚ್ಚರಿಕೆ ವಹಿಸುವುದು ಮುಖ್ಯ. ತಂಬಾಕು ಉತ್ಪನ್ನಗಳ ಸೇವನೆ, ಮದ್ಯಪಾನ, ಧೂಮಪಾನದಂತಹ ವ್ಯಸನಗಳಿಂದ ಅಂತರ ಕಾಯ್ದುಕೊಳ್ಳಬೇಕು. ಆರಂಭಿಕ ಹಂತದಲ್ಲಿಯೇ ಕ್ಯಾನ್ಸರ್ ಪತ್ತೆ ಮಾಡಿದಲ್ಲಿ ಚಿಕಿತ್ಸೆ ಸುಲಭವಾಗಲಿದೆ’ ಎಂದು ಸಂಸ್ಥೆಯ ಆಡಳಿತಾಧಿಕಾರಿ ಡಾ. ನವೀನ್ ಭಟ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.