ADVERTISEMENT

ಮೆಟ್ರೊದಲ್ಲಿ ಸಂಚರಿಸಲು ಶೇ 95 ಮಂದಿ ಆಸಕ್ತಿ: ಸಮೀಕ್ಷೆ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2023, 15:34 IST
Last Updated 4 ಸೆಪ್ಟೆಂಬರ್ 2023, 15:34 IST
<div class="paragraphs"><p> ಬೆಂಗಳೂರು ಅಪಾರ್ಟ್‌ಮೆಂಟ್‌ ಫೆಡರೇಶನ್ ಪ್ರಧಾನ ಕಾರ್ಯದರ್ಶಿ ವಿಕ್ರಮ್‌ ರೈ, ಎಆರ್‌ಡಿಯು ಪ್ರಧಾನ ಕಾರ್ಯದರ್ಶಿ ರುದ್ರಮೂರ್ತಿ, ಡಬ್ಲ್ಯುಆರ್‌ಐ ಫೆಲೊ ಶ್ರೀನಿವಾಸ್‌ ಅಲಿವಲ್ಲಿ, ಬಿ ಪ್ಯಾಕ್‌ ಸಿಇಒ ರೇವತಿ ಅಶೋಕ್‌, ಓರ್ಕಾ ಅಧ್ಯಕ್ಷ ಮಾನಸ್‌ದಾಸ್‌ ಇದ್ದರು. </p></div>

ಬೆಂಗಳೂರು ಅಪಾರ್ಟ್‌ಮೆಂಟ್‌ ಫೆಡರೇಶನ್ ಪ್ರಧಾನ ಕಾರ್ಯದರ್ಶಿ ವಿಕ್ರಮ್‌ ರೈ, ಎಆರ್‌ಡಿಯು ಪ್ರಧಾನ ಕಾರ್ಯದರ್ಶಿ ರುದ್ರಮೂರ್ತಿ, ಡಬ್ಲ್ಯುಆರ್‌ಐ ಫೆಲೊ ಶ್ರೀನಿವಾಸ್‌ ಅಲಿವಲ್ಲಿ, ಬಿ ಪ್ಯಾಕ್‌ ಸಿಇಒ ರೇವತಿ ಅಶೋಕ್‌, ಓರ್ಕಾ ಅಧ್ಯಕ್ಷ ಮಾನಸ್‌ದಾಸ್‌ ಇದ್ದರು.

   

ಬೆಂಗಳೂರು: ವೈಟ್‌ಫೀಲ್ಡ್‌, ಎಲೆಕ್ಟ್ರಾನಿಕ್‌ ಸಿಟಿಗೆ ಮೆಟ್ರೊ ರೈಲು ಈ ತಿಂಗಳಲ್ಲಿ ಸಂಚರಿಸಲಿದೆ. ಹೀಗಾಗಿ, ಈ ಬಗ್ಗೆ ನಡೆಸಿದ ಸಮೀಕ್ಷೆಯಲ್ಲಿ, ‘ಸ್ವಂತ ವಾಹನದ ಬದಲು ಮೆಟ್ರೊದಲ್ಲಿ ಸಂಚರಿಸಲು ಸಿದ್ಧ’ ಎಂದು ಶೇ 95ರಷ್ಟು ಜನರು ಸಮೀಕ್ಷೆಯಲ್ಲಿ ಹೇಳಿಕೊಂಡಿದ್ದಾರೆ. ‘ಮೆಟ್ರೊ ನಿಲ್ದಾಣಗಳಿಗೆ ಸರಿಯಾದ ಬಸ್‌ ಸಂಪರ್ಕ ಇರಬೇಕು’ ಎಂದೂ ತಿಳಿಸಿದ್ದಾರೆ.

ಜುಲೈಯಲ್ಲಿ ‘ಬಿ ಪ್ಯಾಕ್‌ ನಡೆಸಿದ್ದ ‘ಸ್ವಂತ 2 ಸಾರ್ವಜನಿಕ ಸಾರಿಗೆ’ ಸಮೀಕ್ಷೆಯನ್ನು ಸೋಮವಾರ ಬಿಡುಗಡೆ ಮಾಡಲಾಯಿತು.

ADVERTISEMENT

ವೈಟ್‌ಫೀಲ್ಡ್‌, ಮಹದೇವಪುರ, ಎಲೆಕ್ಟ್ರಾನಿಕ್‌ ಸಿಟಿ ಮತ್ತು ಹೊರ ವರ್ತುಲ ರಸ್ತೆ ಪ್ರದೇಶದ ಪ್ರಯಾಣಿಕರು ಮತ್ತು ನಿವಾಸಿಗಳು ಈ ಸಮೀಕ್ಷೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು ಎಂದು ‘ಬಿ ಪ್ಯಾಕ್‌’ ಸಿಇಒ ರೇವತಿ ಅಶೋಕ್‌ ಮಾಹಿತಿ ನೀಡಿದರು.

ವೈಟ್‌ಫೀಲ್ಡ್‌, ಎಲೆಕ್ಟ್ರಾನಿಕ್‌ ಸಿಟಿ ಸುತ್ತಮುತ್ತ 10 ಲಕ್ಷಕ್ಕೂ ಅಧಿಕ ಉದ್ಯೋಗಿಗಳು ನೆಲೆಸಿದ್ದಾರೆ. ಸಮೀಕ್ಷೆಯಲ್ಲಿ 3,855 ಜನರು ಪಾಲ್ಗೊಂಡಿದ್ದರು. ಅದರಲ್ಲಿ ಶೇ 60ರಷ್ಟು ಜನರು ನಿತ್ಯದ ಪ್ರಯಾಣಕ್ಕಾಗಿ ಕಾರು, ಬೈಕ್‌ ಬಳಸುತ್ತಿದ್ದಾರೆ. ಈಗಿನ ವಾಹನ ದಟ್ಟಣೆಯಲ್ಲಿ ನಿಗದಿತ ಸ್ಥಳ ತಲುಪಲು ಗಂಟೆಗಟ್ಟಲೆ ಹಿಡಿಯುತ್ತದೆ. ಮೆಟ್ರೊ ಮೂಲಕ ಬೇಗ ತಲುಪಲು ಸಾಧ್ಯ ಇರುವುದರಿಂದ ಮೆಟ್ರೊ ರೈಲು ಆರಂಭವಾದಾಗ ಖಾಸಗಿ ವಾಹನ ಬದಲು ಅದನ್ನು ಆಯ್ಕೆ ಮಾಡಿಕೊಳ್ಳುವುದಾಗಿ ಹೇಳಿದ್ದಾರೆ. ಮೆಟ್ರೊ, ಬಿಎಂಟಿಸಿ ಉತ್ತಮ ಸೇವೆ ನೀಡಬೇಕು ಎಂದು ನಿರೀಕ್ಷಿಸಿದ್ದಾರೆ ಎಂದರು.

‘ಸ್ವಂತ 2 ಸಾರ್ವಜನಿಕ ಸಾರಿಗೆ’ ಅಭಿಯಾನ ನಡೆಸಲು ಹಲವರು ಪಾಲುದಾರರಾಗಿದ್ದರು. ಐಟಿ ಕಂಪನಿಗಳು, ಹೊರ ವರ್ತುಲ ರಸ್ತೆ ಕಂಪನಿಗಳ ಸಂಘ (ಓರ್ಕಾ), ಎಲೆಕ್ಟ್ರಾನಿಕ್‌ ಸಿಟಿ ಪ್ರದೇಶದ ಕಂಪನಿಗಳು, ವೈಟ್‌ಫೀಲ್ಡ್‌ನ ಇಂಡಸ್ಟ್ರಿಯಲ್‌ ಅಸೋಸಿಯೇಶನ್‌, ಇಂಟರ್‌ನ್ಯಾಷನಲ್‌ ಟೆಕ್‌ಪಾರ್ಕ್‌, ಆಟೊ ರಿಕ್ಷಾ ಚಾಲಕರ ಯೂನಿಯನ್‌ (ಎಆರ್‌ಡಿಯು), ಆದರ್ಶ ಆಟೊ ಯೂನಿಯನ್‌ ಅಲ್ಲದೇ ಇತರ 27 ಸಂಘಟನೆಗಳು ಭಾಗಿಯಾಗಿದ್ದವು’ ಎಂದು ಡಬ್ಲ್ಯುಆರ್‌ಐ ಇಂಡಿಯಾದ ಫೆಲೊ ಶ್ರೀನಿವಾಸ್ ಅಲವಿಲ್ಲಿ ಮಾಹಿತಿ ನೀಡಿದರು.

‘ಸಾರ್ವಜನಿಕ ಸಾರಿಗೆ ಸಂಪರ್ಕವನ್ನು ಜನರು ಬಳಸಿದರೆ ಬೆಂಗಳೂರು ನಿಜವಾಗಿಯೂ ಬ್ರ್ಯಾಂಡ್ ಬೆಂಗಳೂರು ಆಗಲಿದೆ. ಶೇ 22ರಷ್ಟು ಜನರು ಸೈಕಲ್‌ ಬಳಸುತ್ತಿದ್ದಾರೆ. ಅವರಿಗೆ ಸೈಕಲ್‌ಪಾತ್‌ ಮತ್ತು ಮೆಟ್ರೊ ನಿಲ್ದಾಣಗಳ ಬಳಿ ಸೈಕಲ್‌ ನಿಲ್ದಾಣ ನಿರ್ಮಿಸಿಕೊಡಬೇಕು. ನಿಗದಿತ ದರಲ್ಲಿ ಆಟೊ ಸೇವೆ ಸಿಗಬೇಕು’ ಎಂದು ಹೇಳಿದರು.

‘ಜನರು ವಾರಕ್ಕೆ ಕನಿಷ್ಠ ಎರಡು ದಿನವಾದರೂ ಖಾಸಗಿ ವಾಹನ ಬಿಟ್ಟು ಮೆಟ್ರೊ, ಬಿಎಂಟಿಸಿಯಂಥ ಸಾರ್ವಜನಿಕ ಸಾರಿಗೆ ಬಳಸಬೇಕೆಂದು ಸರ್ಕಾರವೇ ಜಾಗೃತಿ ಮೂಡಿಸಬೇಕು’ ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.