ರಾಜರಾಜೇಶ್ವರಿನಗರ: ‘ದೊಡ್ಡ ಬಿದರಕಲ್ಲು ವಾರ್ಡ್ ವ್ಯಾಪ್ತಿಯಲ್ಲಿ ಮೂಲ ಸೌಲಭ್ಯಗಳನ್ನು ಕಲ್ಪಿಸಿ, ಹಂತ ಹಂತವಾಗಿ ಅಭಿವೃದ್ಧಿಪಡಿಸಲಾಗಿದೆ’ ಎಂದು ಶಾಸಕ ಎಸ್.ಟಿ. ಸೋಮಶೇಖರ್ ಅವರು ತಿಳಿಸಿದರು.
ಬಿಬಿಎಂಪಿ ನಗರ ಯೋಜನೆ(ಪ್ರಾಜೆಕ್ಟ್) ವತಿಯಿಂದ ₹9.99 ಕೋಟಿ ವೆಚ್ಚದಲ್ಲಿ ಶ್ರೀಚಕ್ರನಗರ, ಅಂದ್ರಹಳ್ಳಿ ವ್ಯಾಪ್ತಿಯಲ್ಲಿ ಕೈಗೊಳ್ಳುತ್ತಿರುವ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ದೊಡ್ಡಬಿದರಕಲ್ಲು, ಅಂದ್ರಹಳ್ಳಿ, ಹೊಸಹಳ್ಳಿ ವ್ಯಾಪ್ತಿಯ ಎಲ್ಲ ಬಡಾವಣೆಗಳಲ್ಲೂ ಒಳಚರಂಡಿ ಕಾಮಗಾರಿ ಪೂರ್ಣಗೊಂಡಿದೆ. ಕಾವೇರಿ ಕುಡಿಯುವ ನೀರಿನ ಸಂಪರ್ಕ ಕಾರ್ಯವೂ ಮುಗಿದಿದೆ. ಶೇ 25 ರಷ್ಟು ಭಾಗದಲ್ಲಿ ರಸ್ತೆಗೆ ಡಾಂಬರ್ ಹಾಕುವ ಕೆಲಸ ಮಾಡಬೇಕಾಗಿದೆ’ ಎಂದರು.
ಪ್ರವಾಸೋದ್ಯಮ ನಿಗಮದ ಮಾಜಿ ನಿರ್ದೇಶಕ ಹೊಸಹಳ್ಳಿ ಸತೀಶ್, ‘ಮೊದಲು ಮಳೆ ಬಂದಾಗ ಈ ಭಾಗದ ಎಲ್ಲಾ ಬಡಾವಣೆಗಳಲ್ಲೂ ರಾಜಕಾಲುವೆ ನೀರು ತಗ್ಗು ಪ್ರದೇಶಗಳಿಗೆ ಹರಿದು ಅನಾಹುತವಾಗುತ್ತಿತ್ತು. ರಾಜಕಾಲುವೆ ಕಾಮಗಾರಿ ಪೂರ್ಣಗೊಂಡಿದ್ದು, ಈಗ ಆ ಸಮಸ್ಯೆ ಇಲ್ಲ’ ಎಂದರು.
ಬಿಬಿಎಂಪಿ ಯೋಜನೆ (ಪ್ರಾಜೆಕ್ಟ್) ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಟಿ.ಎಂ. ಶಶಿಕುಮಾರ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಬಿ.ಎಸ್. ಸಿದ್ದರಾಜೇಗೌಡ, ಕಾಮಗಾರಿ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ವಿ.ತಿಮ್ಮಯ್ಯ ಈ ಸಂದರ್ಭದಲ್ಲಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.