ADVERTISEMENT

ನಾಡಪ್ರಭು ಕೆಂಪೇಗೌಡ ಬಡಾವಣೆ: ವರ್ಷಗಳು ಕಳೆದರೂ ಈಡೇರದ ಬಿಡಿಎ ಭರವಸೆ

ಆರ್. ಮಂಜುನಾಥ್
Published 20 ಸೆಪ್ಟೆಂಬರ್ 2024, 22:48 IST
Last Updated 20 ಸೆಪ್ಟೆಂಬರ್ 2024, 22:48 IST
ನಾಡಪ್ರಭು ಕೆಂಪೇಗೌಡ ಬಡಾವಣೆಯ 6ನೇ ಬ್ಲಾಕ್‌ ರಸ್ತೆಯ ಸ್ಥಿತಿ
ನಾಡಪ್ರಭು ಕೆಂಪೇಗೌಡ ಬಡಾವಣೆಯ 6ನೇ ಬ್ಲಾಕ್‌ ರಸ್ತೆಯ ಸ್ಥಿತಿ   

ಬೆಂಗಳೂರು: ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ (ಎನ್‌ಪಿಕೆಎಲ್‌) ಮನೆ ನಿರ್ಮಾಣಕ್ಕೆ ಅನುಕೂಲವಾಗುವಂತಹ ವಾಹನ ಸಂಚಾರಯೋಗ್ಯ ರಸ್ತೆ ನಿರ್ಮಿಸಿಕೊಡುವುದಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನೀಡುತ್ತಿರುವ ಆಶ್ವಾಸನೆಗಳು ವರ್ಷಗಳು ಕಳೆದರೂ ಈಡೇರುತ್ತಿಲ್ಲ.

ಎನ್‌ಪಿಕೆಎಲ್‌ನಲ್ಲಿ ನಿವೇಶನ ಪಡೆದಿರುವವರು ಮನೆ ನಿರ್ಮಿಸಲು ಸಾಧ್ಯವಾಗುತ್ತಿಲ್ಲ. ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನು ಸಾಗಿಸಲು ಅಗತ್ಯವಾದ ‘ಮೋಟರಬಲ್ ರಸ್ತೆ’ ಇಲ್ಲ. ವಸ್ತುಗಳನ್ನು ಸಾಗಿಸಲು ಹರಸಾಹಸ ಪಡುತ್ತಿರುವ ನಿವೇಶನದಾರರು, ಕಷ್ಟಪಟ್ಟು ಮನೆ ನಿರ್ಮಿಸಿದರೂ ನೀರು, ವಿದ್ಯುತ್‌, ಒಳಚರಂಡಿ ವ್ಯವಸ್ಥೆ ಇಲ್ಲದೆ ಪರದಾಡುವಂತಾಗಿದೆ.

ಉಪಮುಖ್ಯಮಂತ್ರಿ, ಬಿಡಿಎ ಅಧ್ಯಕ್ಷ, ಆಯುಕ್ತರು ಸೇರಿದಂತೆ ಎಲ್ಲ ಹಂತಗಳ ಎಂಜಿನಿಯರ್‌ಗಳಿಗೆ ನಿವೇಶನದಾರರು ಹಾಗೂ ಬಡಾವಣೆಯ ಸಂಘದ ಪದಾಧಿಕಾರಿಗಳು ವರ್ಷಗಳಿಂದ ಹಲವು ಪತ್ರ ಬರೆದಿದ್ದಾರೆ, ಖುದ್ದು ಮನವಿಯನ್ನೂ ಸಲ್ಲಿಸಿದ್ದಾರೆ. ‘ಇನ್ನೊಂದು ತಿಂಗಳು, ಇನ್ನು ಹತ್ತು ದಿನಗಳಲ್ಲಿ ರಸ್ತೆಯಾಗುತ್ತದೆ’ ಎಂಬ ಭರವಸೆಗಳು ದೊರೆತು ಮೂರು ತಿಂಗಳು, ಆರು ತಿಂಗಳು, ವರ್ಷಗಳಾದರೂ ವಾಸ್ತವದಲ್ಲಿ ಯಾವ ಪ್ರಗತಿಯೂ ಆಗುತ್ತಿಲ್ಲ.

ADVERTISEMENT

ಬಿಡಿಎ ಬಡಾವಣೆಗಳಲ್ಲಿ ಪ್ರಥಮ ಬಾರಿಗೆ ಸಾಯಿಲ್ ಸ್ಟೆಬಿಲೈಸೇಷನ್ ಟೆಕ್ನಾಲಜಿಯಿಂದ (ಎಸ್‌ಎಸ್‌ಟಿ– ಮಣ್ಣು ಸ್ಥಿರೀಕರಣ ತಂತ್ರಜ್ಞಾನ) ರಸ್ತೆಗಳನ್ನು ಅಭಿವೃದ್ಧಿಪಡಿಸುತ್ತಿದೆ. ಆದರೂ ನಿವೇಶನದಾರರಿಗೆ ಅಗತ್ಯವಾದ ರಸ್ತೆಗಳು ಇನ್ನೂ ನಿರ್ಮಾಣವಾಗಿಲ್ಲ.

‘ಎನ್‌ಪಿಕೆಎಲ್‌ನಲ್ಲಿ ಶೇ 80ರಷ್ಟು ಕಾಮಗಾರಿಗಳು ಪೂರ್ಣಗೊಂಡಿವೆ ಎಂದು ಬಿಡಿಎ ಅಧಿಕಾರಿಗಳು ಹೇಳುತ್ತಾರೆ. ಆದರೆ, ವಾಸ್ತವವಾಗಿ ಇಲ್ಲಿ ಮನೆ ಕಟ್ಟಲು ಸವಲತ್ತುಗಳೇ ಇಲ್ಲ’ ಎಂದು ನಿವೇಶನದಾರರು ದೂರಿದರು.

‘5ನೇ ಬ್ಲಾಕ್‌ನಲ್ಲಿ ಕೆಲವು ಮನೆಗಳು ನಿರ್ಮಾಣವಾಗಿವೆ. ಆ ಮನೆಯವರು ಸಂಚರಿಸಲು, ಹೊಸಬರು ಕಟ್ಟಡ ನಿರ್ಮಿಸಲು ವಾಹನ ಸಂಚಾರ ಯೋಗ್ಯ ರಸ್ತೆಗಳನ್ನು ನಿರ್ಮಿಸುವಂತೆ ಹಲವು ಬಾರಿ ಮನವಿ ಮಾಡಲಾಗಿದೆ. 6ನೇ ಬ್ಲಾಕ್‌ನಲ್ಲೂ ರಸ್ತೆ ಪ್ರಗತಿಯಾಗಿಲ್ಲ. 7ನೇ ಬ್ಲಾಕ್‌ನಲ್ಲಿ ಒಂದಷ್ಟು ಕಡೆ ಡಾಂಬರೀಕರಣ ನಡೆದಿದೆ. ಕೆಲವು ಪ್ರದೇಶಗಳಲ್ಲಿ ಮಣ್ಣಿನ ಸ್ಥಿರೀಕರಣ ಕಾಮಗಾರಿಯಾಗಿ ವೆಟ್ ಮಿಕ್ಸ್ ಹಾಕಬೇಕಾಗಿದೆ’ ಎಂದು ನಾಡಪ್ರಭು ಕೆಂಪೇಗೌಡ ಬಡಾವಣೆ ಮುಕ್ತ ವೇದಿಕೆಯ ಅಧ್ಯಕ್ಷ ಇ. ಚನ್ನಬಸವರಾಜ ತಿಳಿಸಿದರು.

‘ಎನ್‌ಪಿಕೆಎಲ್‌ನ 5, 6, 7ನೇ ಬ್ಲಾಕ್‌ನಲ್ಲಿ ಎಸ್‌ಎಸ್‌ಟಿ ರಸ್ತೆಗಳನ್ನು ನಿರ್ಮಿಸಲು ಪ್ರತ್ಯೇಕ ಗುತ್ತಿಗೆದಾರರಿಗೆ ಮಾರ್ಚ್‌ನಲ್ಲಿ ಕಾರ್ಯಾದೇಶ ನೀಡಲಾಗಿದೆ. 7ನೇ ಬ್ಲಾಕ್‌ನಲ್ಲಿ ಕಾಮಗಾರಿ ನಡೆಯುತ್ತಿದೆ. 5 ಮತ್ತು 6ನೇ ಬ್ಲಾಕ್‌ನಲ್ಲಿ ಇನ್ನೂ ಕಾಮಗಾರಿ ಪ್ರಾರಂಭದ ಹಂತದಲ್ಲೇ ಇದೆ. ಬಡಾವಣೆಯ 1,2,3,4,8,9ನೇ ಬ್ಲಾಕ್‌ನಲ್ಲಿ ರಸ್ತೆಗಳನ್ನು ನಿರ್ಮಿಸಲು ಇನ್ನೂ ಟೆಂಡರ್‌ ಕರೆದಿಲ್ಲ’ ಎಂದು ವೇದಿಕೆಯ ಜಂಟಿ ಕಾರ್ಯದರ್ಶಿ ಸೂರ್ಯಕಿರಣ್‌ ದೂರಿದರು.

ನಾಡಪ್ರಭು ಕೆಂಪೇಗೌಡ ಬಡಾವಣೆಯ 5ನೇ ಬ್ಲಾಕ್‌ನಲ್ಲಿ ರಸ್ತೆಯನ್ನು ಹುಡುಕಬೇಕಿದೆ
ನಾಡಪ್ರಭು ಕೆಂಪೇಗೌಡ ಬಡಾವಣೆಯ 7ನೇ ಬ್ಲಾಕ್‌ನಲ್ಲಿ ರಸ್ತೆ ಡಾಂಬರೀಕರಣವಾಗುತ್ತಿದೆ
ನಾಡಪ್ರಭು ಕೆಂಪೇಗೌಡ ಬಡಾವಣೆಯ 5 6 ಮತ್ತು 7ನೇ ಬ್ಲಾಕ್‌ನಲ್ಲಿ ಒಳಚರಂಡಿಯ ಸಂಪರ್ಕ ವ್ಯವಸ್ಥೆ ಪೂರ್ಣಗೊಳ್ಳದೆ ನೀರು ಹರಿಯುತ್ತಿಲ್ಲ

‘ವಿದ್ಯುತ್‌ ಸಂಪರ್ಕವಿಲ್ಲ ಒಳಚರಂಡಿ ವ್ಯವಸ್ಥೆ ಇಲ್ಲ’

‘ಎನ್‌ಪಿಕೆಎಲ್‌ 5ನೇ ಬ್ಲಾಕ್‌ನಲ್ಲಿ ಮನೆ ನಿರ್ಮಿಸಿಕೊಂಡವರಿಗೆ ಶಾಶ್ವತ ವಿದ್ಯುತ್‌ ಸಂಪರ್ಕ ನೀಡಲಾಗಿಲ್ಲ. ಪಕ್ಕದಲ್ಲಿರುವ ಹಳ್ಳಿಗಳಿಂದ ತಾತ್ಕಾಲಿಕ ಸಂಪರ್ಕ ನೀಡಲಾಗುತ್ತಿದೆ. ಒಳಚರಂಡಿ ವ್ಯವಸ್ಥೆ ಇದೆ ಎಂದು ಹೇಳಲಾಗುತ್ತಿದ್ದರೂ ರಸ್ತೆಗಳು ಸೇರಿರುವ ಪ್ರದೇಶದಲ್ಲಿ ಒಳಚರಂಡಿ ನೀರು ಹೊರಭಾಗದಲ್ಲೇ ನಿವೇಶನಗಳಿಗೆ ಹರಿಯುತ್ತಿದೆ.

ಒಳಚರಂಡಿ ನೀರು ನೇರವಾಗಿ ತ್ಯಾಜ್ಯ ಸಂಸ್ಕರಣೆ ಘಟಕಕ್ಕೆ (ಎಸ್‌ಟಿಪಿ) ಹೋಗುತ್ತದೆ ಎಂದು ಹೇಳಲಾಗುತ್ತದೆ. ಆದರೆ ವಾಸ್ತವ ಚಿತ್ರಣವೇ ಬೇರೆ ಇದೆ. ಬೀದಿದೀಪಗಳಂತೂ ಇಲ್ಲವೇ ಇಲ್ಲ. ವಿದ್ಯುತ್‌ ಕಂಬಗಳಿಗೆ ಬಳ್ಳಿಗಳು ಸುತ್ತಿಕೊಂಡಿವೆ’ ಎಂದು 5ನೇ ಬ್ಲಾಕ್‌ ನಿವಾಸಿ ಮಧುಸೂಧನ್‌ ಹೇಳಿದರು.

‘ಬಿಡಿಎ ಅಧ್ಯಕ್ಷರು ಆಗಸ್ಟ್‌ 14ರಂದು ಪರಿಶೀಲನೆಗೆ ಬಂದಾಗ 10 ದಿನಗಳಲ್ಲಿ ಎಲ್ಲ ರಸ್ತೆಗಳಿಗೂ ವೆಟ್‌ಮಿಕ್ಸ್‌ ಹಾಕಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದಿದ್ದರು. ಆದರೆ ಈವರೆಗೆ ಒಂದು ರಸ್ತೆಯೂ ಸುಧಾರಿಸಿಲ್ಲ’ ಎಂದು ಸೂರ್ಯಕಿರಣ್‌ ದೂರಿದರು.

ಕೆಲಸ ಮಾಡುತ್ತಾರೆ: ಹ್ಯಾರಿಸ್‌

‘ಎನ್‌ಪಿಕೆಎಲ್‌ ನಿವೇಶನದಾರರು ದೂರು ಕೊಟ್ಟಿದ್ದಾರೆ ಕೆಲಸ ಮಾಡಲಾಗುತ್ತದೆ. ಒಂದೇ ಬಾರಿಗೆ ಎಲ್ಲವನ್ನೂ ಮಾಡಲು ಸಾಧ್ಯವಿಲ್ಲ. ಮಳೆ ಕಾರಣದಿಂದ ಕಾಮಗಾರಿ ನಿಂತಿದ್ದು ಈಗ ಮುಂದುವರಿಸಲಾಗುತ್ತದೆ’ ಎಂದು ಬಿಡಿಎ ಅಧ್ಯಕ್ಷ ಎನ್‌.ಎ.ಹ್ಯಾರಿಸ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಂತ್ರಿಕ ಸಮಸ್ಯೆ: ‘ಎನ್‌ಪಿಕೆಎಲ್‌ನ 7ನೇ ಬ್ಲಾಕ್‌ನಲ್ಲಿ ಎಸ್‌ಎಸ್‌ಟಿ ರಸ್ತೆಗಳ ನಿರ್ಮಾಣ ಬಹುತೇಕ ಪೂರ್ಣಗೊಳ್ಳುತ್ತಿದೆ. 5 ಮತ್ತು 6ನೇ ಬ್ಲಾಕ್‌ನಲ್ಲಿ ಕೆಲವು ಭಾಗದಲ್ಲಿ ಕೆಲಸ ನಡೆಯುತ್ತಿದೆ. ಹಲವು ಭಾಗದಲ್ಲಿ ತಾಂತ್ರಿಕ ಸಮಸ್ಯೆಗಳಿದ್ದು ಅವುಗಳನ್ನು ನಿವಾರಿಸಿಕೊಂಡು ರಸ್ತೆ ಕಾಮಗಾರಿ ಆರಂಭಿಸಲಾಗುತ್ತದೆ’ ಎಂದು ಬಿಡಿಎ ಎಂಜಿನಿಯರ್‌ಗಳು ತಿಳಿಸಿದರು.

‘ಬಿಲ್‌ ಪಾವತಿಸಿಲ್ಲ’

‘ಎನ್‌ಪಿಕೆಎಲ್‌ನ 5ನೇ ಬ್ಲಾಕ್‌ನಲ್ಲಿ ಒಳಚರಂಡಿ ನೀರಿನ ವ್ಯವಸ್ಥೆ ಕಲ್ಪಿಸುವ ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರರಿಗೆ ಒಂದು ವರ್ಷದಿಂದ ಬಿಲ್‌ ಪಾವತಿಸಿಲ್ಲ. ಹೀಗಾಗಿ ಅವರು ಕಾಮಗಾರಿಯನ್ನು ಸ್ಥಗಿತಗೊಳಿಸಿದ್ದಾರೆ. ಆದ್ದರಿಂದ ಎಸ್‌ಎಸ್‌ಟಿ ರಸ್ತೆಗಳನ್ನು ನಿರ್ಮಿಸಲು ಸಾಧ್ಯವಾಗುತ್ತಿಲ್ಲ ಎಂದು ಸ್ಥಳೀಯ ಎಂಜಿನಿಯರ್‌ಗಳು ತಿಳಿಸಿದ್ದಾರೆ’ ಎಂದು ಸೂರ್ಯಕಿರಣ್‌ ಹೇಳಿದರು.

ಎಸ್‌ಎಸ್‌ಟಿ: ₹121 ಕೋಟಿ ವೆಚ್ಚ

ಎನ್‌ಪಿಕೆಎಲ್‌ನ 5 6 ಮತ್ತು 7ನೇ ಬ್ಲಾಕ್‌ಗಳಲ್ಲಿ ಸುಮಾರು 15 ಸಾವಿರ ನಿವೇಶನಗಳಿದ್ದು 30 ಅಡಿ 40 ಅಡಿ ಹಾಗೂ 50 ಅಡಿ ರಸ್ತೆಗಳನ್ನು ಎಸ್‌ಎಸ್‌ಟಿಯಲ್ಲಿ ನಿರ್ಮಿಸಲಾಗುತ್ತಿದೆ. ಸಾಮಾನ್ಯ ಡಾಂಬರು ರಸ್ತೆಗಳಿಗಿಂತ ಹೆಚ್ಚು ಸದೃಢ ಹಾಗೂ ಬಾಳಿಕೆ ಬರುವ ತಂತ್ರಜ್ಞಾನ ಇದಾಗಿದ್ದು ಕಾಂಕ್ರೀಟ್‌ ರಸ್ತೆಗಿಂತ ಶೇ 10ರಷ್ಟು ವೆಚ್ಚವೂ ಕಡಿತವಾಗಲಿದೆ ಎಂದು ಹೇಳಲಾಗಿತ್ತು.

ಬಿಡಿಎ ಜನವರಿಯಲ್ಲಿ ನೀಡಿದ್ದ ಭರವಸೆಯಂತೆ ಒಂಬತ್ತು ತಿಂಗಳಲ್ಲಿ ಈ ರಸ್ತೆಗಳು ನಿರ್ಮಾಣವಾಗಬೇಕಿತ್ತು. 7ನೇ ಬ್ಲಾಕ್‌ನಲ್ಲಿ ಶೇ 50ರಷ್ಟು ರಸ್ತೆಗಳು ನಿರ್ಮಾಣವಾಗಿದೆ ಅಷ್ಟೇ. 5 ಮತ್ತು 6ನೇ ಬ್ಲಾಕ್‌ನಲ್ಲಿ ಕಾಮಗಾರಿ ಆರಂಭವಾಗಿಲ್ಲ. 5ನೇ ಬ್ಲಾಕ್‌ನಲ್ಲಿ 29 ಕಿ.ಮೀ ಎಸ್‌ಎಸ್‌ಟಿ ರಸ್ತೆಗೆ ₹40.35 ಕೋಟಿ 6ನೇ ಬ್ಲಾಕ್‌ನಲ್ಲಿ 28 ಕಿ.ಮೀಗೆ ₹40.36 ಕೋಟಿ ಹಾಗೂ 7ನೇ ಬ್ಲಾಕ್‌ನಲ್ಲಿ 29 ಕಿ.ಮೀ ರಸ್ತೆಗೆ ₹40.33 ಕೋಟಿ ವೆಚ್ಚ ಮಾಡಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.