ಬೆಂಗಳೂರು: ಮಹಾಲಕ್ಷ್ಮಿ ಲೇಔಟ್‌ನಲ್ಲಿ ರಸ್ತೆಯಲ್ಲಿ ಹೊರಟಿದ್ದ ಬೈಕ್ ಸವಾರರೊಬ್ಬರಿಗೆ ಕೋಲೆ ಬಸವ ಗುದ್ದಿದ್ದು, ಈ ಅವಘಡದಿಂದ ಟ್ರಕ್ ಅಡಿ ಸಿಲುಕಿದ್ದ ಸವಾರ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕೆಲ ದಿನಗಳ ಹಿಂದೆ ನಡೆದಿರುವ ಅವಘಡದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ವಿಡಿಯೊ ಗಮನಿಸಿರುವ ಪೊಲೀಸರು, ಅವಘಡದ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ.
ಮಹಿಳೆಯೊಬ್ಬರು ಕೋಲೆ ಬಸವ ಜೊತೆ ರಸ್ತೆಯಲ್ಲಿ ನಡೆದುಕೊಂಡು ಹೊರಟಿದ್ದರು. ಕೋಲೆ ಬಸವ ಪಕ್ಕದಲ್ಲಿಯೇ ಸರಕು ಸಾಗಣೆ ಟ್ರಕ್ ಬಂದಿತ್ತು. ಇದೇ ಸಂದರ್ಭದಲ್ಲಿ ಕೋಲೆ ಬಸವನ ಎದುರಿಗೆ ಸವಾರ ಬೈಕ್ ಚಲಾಯಿಸಿಕೊಂಡು ಬರುತ್ತಿದ್ದರು. ಈ ದೃಶ್ಯ ವಿಡಿಯೊದಲ್ಲಿದೆ.
ಕೋಲೆ ಬಸವನ ಪಕ್ಕದಲ್ಲಿ ಟ್ರಕ್ ಹೊರಟಿತ್ತು. ಕೋಲೆ ಬಸವ ಹಾಗೂ ಟ್ರಕ್ ಮಧ್ಯದಲ್ಲಿ ಸವಾರ ಬೈಕ್ ಚಲಾಯಿಸಿದ್ದ. ಇದೇ ಸಂದರ್ಭದಲ್ಲಿ ಹೆದರಿದ್ದ ಕೋಲೆ ಬಸವ, ಬೈಕ್ ಸವಾರನ ಮೇಲೆ ಜಿಗಿದು ಗುದ್ದಿತ್ತು. ಬೈಕ್ ಸಮೇತ ರಸ್ತೆಗೆ ಬಿದ್ದ ಸವಾರ, ಎದುರಿಗೆ ಬರುತ್ತಿದ್ದ ಟ್ರಕ್ ಅಡಿ ಸಿಲುಕಿದ್ದ. ಚಾಲಕ, ದಿಢೀರ್ ಟ್ರಕ್ ನಿಲ್ಲಿಸಿದ್ದರು. ಟ್ರಕ್ ನಿಲ್ಲಿಸದಿದ್ದರೆ, ಸವಾರನ ಮೇಲೆಯೇ ಚಕ್ರ ಹರಿದು ಹೋಗುವ ಸಾಧ್ಯತೆ ಇತ್ತು. ಈ ದೃಶ್ಯವೂ ವಿಡಿಯೊದಲ್ಲಿದೆ.
ಅವಘಡ ಬಗ್ಗೆ ಪ್ರತಿಕ್ರಿಯಿಸಿದ ಪೊಲೀಸರು, ‘ವಿಡಿಯೊ ಗಮನಿಸಿದ್ದೇನೆ. ಸವಾರ ಯಾರು ಎಂಬುದನ್ನು ಪತ್ತೆ ಮಾಡಲಾಗಿದೆ. ಆದರೆ, ಕೋಲೆ ಬಸವ ಕರೆತಂದಿದ್ದ ಮಹಿಳೆ ಕುರಿತು ಮಾಹಿತಿ ಲಭ್ಯವಾಗಿಲ್ಲ. ಟ್ರಕ್ ಚಾಲಕನ ಸಮಯಪ್ರಜ್ಞೆಯಿಂದ ಸವಾರನ ಪ್ರಾಣ ಉಳಿದಿದೆ. ಸವಾರರಿಂದ ಹೇಳಿಕೆ ಪಡೆದು, ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.