ADVERTISEMENT

ಲಾಲ್‌ಬಾಗ್‌: ಬಿರುಕುಬಿಟ್ಟ ಬ್ಯಾಂಡ್‌ಸ್ಟ್ಯಾಂಡ್‌

1860ರಲ್ಲಿ ಬ್ರಿಟಿಷರಿಂದ ನಿರ್ಮಾಣ | ನವೀಕರಣ ಕಾರ್ಯ ಶೀಘ್ರ ಆರಂಭಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2024, 0:51 IST
Last Updated 27 ಅಕ್ಟೋಬರ್ 2024, 0:51 IST
ಬಿರುಕು ಬಿಟ್ಟಿರುವ ಬ್ಯಾಂಡ್‌ಸ್ಟ್ಯಾಂಡ್‌ ಮುಂಭಾಗದಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ ಎಂಬ ಫಲಕ ಹಾಕಿರುವುದು
ಪ್ರಜಾವಾಣಿ ಚಿತ್ರ: ಪ್ರಶಾಂತ್ ಎಚ್.ಜಿ.
ಬಿರುಕು ಬಿಟ್ಟಿರುವ ಬ್ಯಾಂಡ್‌ಸ್ಟ್ಯಾಂಡ್‌ ಮುಂಭಾಗದಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ ಎಂಬ ಫಲಕ ಹಾಕಿರುವುದು ಪ್ರಜಾವಾಣಿ ಚಿತ್ರ: ಪ್ರಶಾಂತ್ ಎಚ್.ಜಿ.   

ಬೆಂಗಳೂರು: ‘ಸಸ್ಯಕಾಶಿ’ ಲಾಲ್‌ಬಾಗ್‌ನ ಆಕರ್ಷಣೀಯ ಕೇಂದ್ರಗಳಲ್ಲಿ ಒಂದಾಗಿರುವ ಗಾಜಿನ ಮನೆಯ ಮುಂಭಾಗದಲ್ಲಿರುವ ವಾದ್ಯ ರಂಗಮಂಟಪದಲ್ಲಿ(ಬ್ಯಾಂಡ್‌ ಸ್ಟ್ಯಾಂಡ್‌) ಬಿರುಕು ಬಿಟ್ಟಿದೆ. ಇದನ್ನು ಬ್ರಿಟಿಷರ ಕಾಲದಲ್ಲಿ ನಿರ್ಮಿಸಲಾಗಿತ್ತು.

ಬ್ರಿಟಿಷರು 1860ರಲ್ಲಿ ಲಾಲ್‍ಬಾಗ್‍ನಲ್ಲಿ ಬ್ಯಾಂಡ್ ಸ್ಟ್ಯಾಂಡ್ ಪ್ರಾರಂಭಿಸಿದರು. ಇಲ್ಲಿ ವಾರಕ್ಕೊಂದು ಬಾರಿ ಇಂಗ್ಲಿಷ್ ವಾದ್ಯ ಸಂಗೀತ ಕಾರ್ಯಕ್ರಮ ನಡೆಯುತ್ತಿತ್ತು. 2000ರಲ್ಲಿ ತೇಗದ ಮರದಿಂದ (ಟೀಕ್‌ವುಡ್‌) ಬ್ಯಾಂಡ್‌ ಸ್ಟ್ಯಾಂಡ್‌ ಅನ್ನು ಪುನರ್‌ ನಿರ್ಮಿಸಲಾಗಿತ್ತು. ಇದರ ಮೇಲ್ಚಾವಣಿಯನ್ನು ಮರದ ಹಲಗೆಗಳಿಂದ ನಿರ್ಮಿಸಲಾಗಿತ್ತು.

‘ಮಳೆ–ಗಾಳಿಗೆ ಮೇಲ್ಚಾವಣಿ ಸೋರಲು ಪ್ರಾರಂಭಿಸಿತು. ಮೇಲ್ಚಾವಣಿಯಲ್ಲಿ ಮಳೆ ನೀರು ಸಂಗ್ರಹಗೊಂಡ ಪರಿಣಾಮ ಶೇಕಡ 30ರಷ್ಟು ಹಾಳಾಗಿದೆ. ಇದರಿಂದ, ಇಲ್ಲಿ ಬಿರುಕು ಕಾಣಿಸಿಕೊಂಡಿದೆ. ಬ್ಯಾಂಡ್‌ ಸ್ಟ್ಯಾಂಡ್‌ ಕುಸಿಯದಂತೆ ಹಗ್ಗದಿಂದ ಕಟ್ಟಲಾಗಿದೆ. ಕಟ್ಟಡ ಕುಸಿಯದಂತೆ ಅಲ್ಲಲ್ಲಿ ಕಬ್ಬಿಣದ ರಾಡ್‌ಗಳನ್ನು ಅಳವಡಿಸಲಾಗಿದೆ’ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದರು.

ADVERTISEMENT

‘ಬ್ಯಾಂಡ್‌ ಸ್ಟ್ಯಾಂಡ್‌ ಸಂರಕ್ಷಿಸುವ ಉದ್ದೇಶದಿಂದ ಅ.ನ. ಯಲ್ಲಪ್ಪರೆಡ್ಡಿ ಅವರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಇದನ್ನು ತೆರವುಗೊಳಿಸಲು ಈ ಸಮಿತಿ ಅನುಮತಿ ನೀಡಿದೆ. ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಹೊಸದಾಗಿ ಬ್ಯಾಂಡ್‌ ಸ್ಟ್ಯಾಂಡ್‌ ನಿರ್ಮಿಸಲಾಗುವುದು’ ಎಂದು ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಎಂ. ಜಗದೀಶ್ ‘ಪ್ರಜಾವಾಣಿ’ಗೆ ತಿಳಿಸಿದರು.

‘24 ವರ್ಷಗಳ ಹಿಂದೆ ಬ್ಯಾಂಡ್‌ ಸ್ಟ್ಯಾಂಡ್‌ ನಿರ್ಮಿಸಲಾಗಿತ್ತು. ಮೇಲ್ಚಾವಣಿಗೆ ಹಲಗೆಗಳನ್ನು ಹಾಕಿದ ಕಾರಣದಿಂದ ಬಿರುಕು ಬಿಟ್ಟಿದೆ. ಇದರ ಸೌಂದರ್ಯಕ್ಕೆ ಯಾವುದೇ ಧಕ್ಕೆ ಆಗದಂತೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಬೆಂಗಳೂರಿನ ಮರ ವಿಜ್ಞಾನ ಸಂಶೋಧನಾ ಸಂಸ್ಥೆ ಹಾಗೂ ಇತರ ತಜ್ಞರ ಸಲಹೆಗಳನ್ನು ಪಡೆದುಕೊಳ್ಳಲಾಗುತ್ತಿದೆ’ ಎಂದು ಅವರು ವಿವರಿಸಿದರು.

‘ಸಂಗೀತ ಪ್ರೇಮಿಗಳ ಆಕರ್ಷಕ ಕೇಂದ್ರವಾಗಿದ್ದ ಬ್ಯಾಂಡ್‌ ಸ್ಟ್ಯಾಂಡ್‌ ತೋಟಗಾರಿಕೆ ಇಲಾಖೆ ನಿರ್ಲಕ್ಷ್ಯದಿಂದ ಕುಸಿದಿದೆ. ಈಗ ಇದನ್ನು ತೆರವುಗೊಳಿಸಿ ಪುನರ್‌ ನಿರ್ಮಿಸುವ ಚರ್ಚೆ ನಡೆಯುತ್ತಿದೆ. ಇದರ ಹಿಂದಿನ ಸೌಂದರ್ಯಕ್ಕೆ ಧಕ್ಕೆ ಆಗದಂತೆ ನವೀಕರಿಸಬೇಕು. ವಾರಕ್ಕೆ ಒಂದು ಬಾರಿ ಇಲ್ಲಿ ವಾದ್ಯ ನುಡಿಸಲು ಅವಕಾಶ ಕಲ್ಪಿಸಬೇಕು’ ಎಂದು ವಾಯುವಿಹಾರಿ ಜಯಕುಮಾರ್‌ ಒತ್ತಾಯಿಸಿದರು.

‘ಈಗಾಗಲೇ ಬ್ಯಾಂಡ್‌ ಸ್ಟ್ಯಾಂಡ್‌ ಶಿಥಿಲವಾಗಿದ್ದು, ಕುಸಿಯುವ ಹಂತಕ್ಕೆ ತಲುಪಿದೆ. ಇದು ಕುಸಿಯದಂತೆ ಹಗ್ಗದಿಂದ ಕಟ್ಟಲಾಗಿದೆ. ಏನಾದರೂ ಅನಾಹುತ ಸಂಭವಿಸುವ ಮುನ್ನ ಇದನ್ನು ತೆರವುಗೊಳಿಸಿ, ನೂತನ ಕಾಮಗಾರಿ ಪ್ರಾರಂಭಿಸಬೇಕು’ ಎಂದು ಸಂಗೀತ ಪ್ರೇಮಿ ಸುರೇಶ್ ಹೇಳಿದರು.

ಲಾಲ್‌ಬಾಗ್‌ನ ಬ್ಯಾಂಡ್‌ಸ್ಟ್ಯಾಂಡ್‌ ಬಿರುಕು ಬಿಟ್ಟಿರುವುದು ಪ್ರಜಾವಾಣಿ ಚಿತ್ರ: ಪ್ರಶಾಂತ್ ಎಚ್.ಜಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.