ADVERTISEMENT

ಬೆಂಗಳೂರು: ಅಂಚೆ ಕಚೇರಿಯಲ್ಲಿ ಡ್ರಗ್ಸ್‌ ಪಾರ್ಸೆಲ್ ಪತ್ತೆ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2024, 15:54 IST
Last Updated 6 ಅಕ್ಟೋಬರ್ 2024, 15:54 IST
ಡ್ರಗ್ಸ್‌ –ಪ್ರಾತಿನಿಧಿಕ ಚಿತ್ರ
ಡ್ರಗ್ಸ್‌ –ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಸರ್ಕಾರಿ ಸ್ವಾಮ್ಯದ ಅಂಚೆ ಇಲಾಖೆಯನ್ನೇ ಬಳಸಿಕೊಂಡು ವಿದೇಶಗಳಿಂದ ಬೆಂಗಳೂರು ನಗರಕ್ಕೆ ಮಾದಕವಸ್ತು ಪೂರೈಸುತ್ತಿರುವುದು ಪತ್ತೆಯಾಗಿದೆ. ಈ ಬಗ್ಗೆ ತನಿಖೆ ಚುರುಕುಗೊಳಿಸಿರುವ ಸಿಸಿಬಿ ಪೊಲೀಸರು, ನೂರಾರು ಪಾರ್ಸೆಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಚಾಮರಾಜಪೇಟೆಯಲ್ಲಿನ ವಿದೇಶಿ ಅಂಚೆ ಕಚೇರಿಯಲ್ಲಿ ಹಲವು ವರ್ಷಗಳಿಂದ ತರಿಸಿಕೊಂಡಿದ್ದ ಪಾರ್ಸೆಲ್‌ಗಳನ್ನು ಸ್ವೀಕರಿಸಿರಲಿಲ್ಲ ಎಂಬ ಮಾಹಿತಿ ಸಿಸಿಬಿಗೆ ಸಿಕ್ಕಿತ್ತು. ಪಾರ್ಸೆಲ್‌ಗಳಲ್ಲಿ ಡ್ರಗ್ಸ್‌ ಇದೆ ಎಂಬ ಶಂಕೆ ವ್ಯಕ್ತವಾಗಿತ್ತು. ಹಾಗಾಗಿ ಸಿಸಿಬಿ ಮಾದಕ ವಸ್ತು ನಿಗ್ರಹ ಘಟಕದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

‘ವಿಲೇವಾರಿಯಾಗದ ಪಾರ್ಸೆಲ್‌ಗಳನ್ನು ಶ್ವಾನ ‘ರಾಣಾ’ ಗುರುತಿಸಿತು. ಹೀಗೆ ರಾಣಾ ಗುರುತಿಸಿದ 626 ಪಾರ್ಸೆಲ್‌ಗಳನ್ನು ಪರಿಶೀಲಿಸಿದಾಗ ಹೈಡ್ರೋ ಗಾಂಜಾ, ಕೊಕೇನ್, ಎಂಡಿಎಂಎ ಇದ್ದವು. ಪ್ರತಿ ಪಾರ್ಸೆಲ್‌ನಲ್ಲಿ 100 ಗ್ರಾಂ. ಮಾದಕ ವಸ್ತು ಇಡಲಾಗಿತ್ತು. ಮಹಜರು ಕಾರ್ಯ ನಡೆಸಲಾಗುತ್ತಿದ್ದು, ಮುಗಿದ ಬಳಿಕವಷ್ಟೇ ಎಷ್ಟು ಪ್ರಮಾಣದ ಡ್ರಗ್ಸ್‌ ಇದೆ ಎಂಬುದು ಗೊತ್ತಾಗಲಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ADVERTISEMENT

‘ಪಾರ್ಸೆಲ್‌ಗಳಲ್ಲಿ ಇಂಗ್ಲೆಂಡ್‌, ಥಾಯ್ಲೆಂಡ್‌, ನೆದರ್ಲೆಂಡ್‌ ಸೇರಿದಂತೆ ಹಲವು ದೇಶಗಳಿಂದ ಕಳುಹಿಸಿರುವ ವಿಳಾಸವಿದೆ. ಪಾರ್ಸೆಲ್ ತರಿಸಿಕೊಂಡಿದ್ದವರ ನಗರದ ವಿಳಾಸವನ್ನು ನಮೂದಿಸಲಾಗಿದೆ. ಆದರೆ, ಆ ವಿಳಾಸಕ್ಕೆ ತೆರಳಿ ವಿಚಾರಿಸಿದರೆ, ಸಂಬಂಧಪಟ್ಟ ವ್ಯಕ್ತಿ ವಾಸವಿರುವುದಿಲ್ಲ. ಪೊಲೀಸರಿಗೆ ಸಿಕ್ಕಿಬೀಳುವ ಭಯದಿಂದ ಪೆಡ್ಲರ್​ಗಳು ಕೆಲವೊಂದು ಪಾರ್ಸೆಲ್​ಗಳನ್ನು ಸ್ವೀಕರಿಸದೆ ಬಿಟ್ಟಿರುವ ಸಾಧ್ಯತೆಯಿದೆ. ಹೀಗಾಗಿ 2018 ರಿಂದಲೂ ಮಾದಕವಸ್ತು ಪಾರ್ಸೆಲ್‌ಗಳು ಹಾಗೆಯೇ ಉಳಿದುಕೊಂಡಿವೆ’ ಎಂದು ಮೂಲಗಳು ಹೇಳಿವೆ.

‘ಬಹುತೇಕ ಪಾರ್ಸೆಲ್‌ಗಳಿಗೆ ನೀಡಿರುವ ವಿಳಾಸಗಳು ನಕಲಿಯೇ ಆಗಿವೆ. ಪ್ರಾಥಮಿಕ ತನಿಖೆಯಲ್ಲಿ ಡ್ರಗ್ಸ್‌ ಪಾರ್ಸೆಲ್‌ನಲ್ಲಿರುವ ವಿಳಾಸ ಹಾಗೂ ವ್ಯಕ್ತಿಗಳ ವಿವರ ನಕಲಿ ಎಂಬುದು ಗೊತ್ತಾಗಿದೆ. ಹಾಗಾಗಿ ಡ್ರಗ್ಸ್‌ ತರಿಸಿಕೊಂಡಿದ್ದವರು ಯಾರು? ಕಳಿಸಿದವರು ಯಾರು? ಎಂಬುದರ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ’ ಎಂದು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.