ADVERTISEMENT

ಕೋಚಿಮುಲ್‌ನಲ್ಲಿ ಕೋಟ್ಯಂತರ ಅವ್ಯವಹಾರ; ಆಡಳಿತಾಧಿಕಾರಿ ನೇಮಕಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 15 ಜುಲೈ 2023, 15:51 IST
Last Updated 15 ಜುಲೈ 2023, 15:51 IST
ಕೋಲಾರದಲ್ಲಿರುವ ಕೋಚಿಮುಲ್‌ ಆಡಳಿತ ಕಚೇರಿ ಕಟ್ಟಡ
ಕೋಲಾರದಲ್ಲಿರುವ ಕೋಚಿಮುಲ್‌ ಆಡಳಿತ ಕಚೇರಿ ಕಟ್ಟಡ   

ಬೆಂಗಳೂರು: ಕೋಲಾರ–ಚಿಕ್ಕಬಳ್ಳಾಪುರ ಹಾಲು ಒಕ್ಕೂಟದಲ್ಲಿ ಕೈಗೊಂಡಿರುವ ಕಾಮಗಾರಿಯಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ಆಗಿದೆ. ಆಡಳಿತ ಮಂಡಳಿ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಆಡಳಿತಾಧಿಕಾರಿ ನೇಮಕ ಮಾಡಬೇಕು ಎಂದು ಜನಾಂದೋಲನ ವೇದಿಕೆ ಆಗ್ರಹಿಸಿದೆ.

‘ಮೆಗಾ ಡೈರಿ ಘಟಕ ನಿರ್ಮಾಣದ ಹಾಲು ಸಂಸ್ಕರಣಾ ಕೇಂದ್ರ ಕಟ್ಟಡ ನಿರ್ಮಾಣ, ಸಂಸ್ಕರಣ ಯಂತ್ರೋಪಕರಣ ಖರೀದಿಯಲ್ಲಿ ಸರ್ಕಾರದ ಯೋಜನಾ ಅನುಮೋದನೆಗಿಂತ ಹಲವು ಪಟ್ಟು ಹೆಚ್ಚು ವೆಚ್ಚ ಮಾಡಲಾಗಿದೆ. ಕೋಚಿಮುಲ್‌ ನಿರ್ದೇಶಕರಾಗಿರುವ ಶಾಸಕ ಕೆ.ವೈ. ನಂಜೇಗೌಡ ಮತ್ತು ಹನುಮೇಶ ಇದಕ್ಕೆ ಕಾರಣ’ ಎಂದು ವೇದಿಕೆ ಅಧ್ಯಕ್ಷ ಲಕ್ಕವಳ್ಳಿ ಮಂಜುನಾಥ್‌ ಶನಿವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

'ಬಾಯ್ಲರ್‌ ಖರೀದಿಯೂ ಸೇರಿದಂತೆ ಮೆಗಾ ಡೈರಿ ಘಟಕ ನಿರ್ಮಾಣಕ್ಕೆ ಮೂಲ ಅಂದಾಜು ವೆಚ್ಚ ₹ 9.75 ಕೋಟಿ. ಆದರೆ, ಇದಕ್ಕೆ ಒಟ್ಟು ₹ 59.78 ಕೋಟಿ ಹೆಚ್ಚುವರಿಯಾಗಿ ವೆಚ್ಚ ಮಾಡಲಾಗಿದೆ. ಇದೇ ಯೋಜನೆಯ ಸಿವಿಲ್‌ ಕಾಮಗಾರಿಗಳಿಗೆ ₹ 9.75 ಕೋಟಿ ಅಂದಾಜು ವೆಚ್ಚ ನಿರ್ಧರಿಸಲಾಗಿತ್ತು. ₹ 25.95 ಕೋಟಿ ಹೆಚ್ಚುವರಿಯಾಗಿ ಪಾವತಿಸಲಾಗಿದೆ. ಈ ಘಟಕಕ್ಕೆ ಸಂಬಂಧಿಸಿ ಹೊರಸೂಸುವ ಸಂಸ್ಕರಣ ಘಟಕವನ್ನು (ಇಟಿಪಿ) ₹ 3.15 ಕೋಟಿಗಳಲ್ಲಿ ನಿರ್ಮಿಸಬೇಕಿತ್ತು. ₹ 2.56 ಕೋಟಿ ಹೆಚ್ಚುವರಿ ವೆಚ್ಚ ಮಾಡಲಾಗಿದೆ. ಇದಕ್ಕೆ ಸರ್ವ ಸದಸ್ಯರ ಅನುಮೋದನೆ ಪಡೆದಿಲ್ಲ. ಸರ್ಕಾರದಿಂದ, ಸಹಕಾರ ಸಂಘಗಳ ನಿಬಂಧಕರಿಂದ, ಹಾಲು ಒಕ್ಕೂಟದಿಂದ ಅನುಮೋದನೆ ಪಡೆದಿಲ್ಲ' ಎಂದು ದೂರಿದರು.‌

ADVERTISEMENT

'ಸಹಕಾರ ಸಂಘಗಳ ಜಂಟಿ ನಿಬಂಧಕರು ಈ ಬಗ್ಗೆ ಪರಿಶೀಲನೆ ಮಾಡಿದ್ದಾರೆ. ಆರೋಪಗಳು ಸಾಬೀತಾಗಿದ್ದು, ಒಕ್ಕೂಟ ಕ್ರಮ ಕೈಗೊಳ್ಳಬೇಕು ಎಂದು ನಿಬಂಧಕರು ಆದೇಶಿಸಿದ್ದಾರೆ. ಆದರೆ, ಕ್ರಮಕೈಗೊಂಡಿಲ್ಲ' ಎಂದು ವೇದಿಕೆಯ ಮುನೇಶ್‌ ಡಿ., ಆನಂದ ಕುಮಾರ್‌ ಎಚ್‌.ಆರ್‌., ಆನಂದ ಕುಮಾರ್‌ ಎಸ್‌.ಜಿ., ರಂಗನಾಥ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.