ಬೆಂಗಳೂರು: ಸೆಪ್ಟೆಂಬರ್‌ನಿಂದ ಹೊಸ ಮಾನ್ಯತಾ ಪರಿಕಲ್ಪನೆಗಳನ್ನು ಜಾರಿಗೆ ತರುತ್ತಿರುವ ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತಾ ಮಂಡಳಿ (ನ್ಯಾಕ್), ಗ್ರಾಮೀಣ ಪ್ರದೇಶದ ಕಾಲೇಜುಗಳು ಹಾಗೂ ವಿಶ್ವವಿದ್ಯಾಲಯಗಳಿಗೆ ಒಂದಷ್ಟು ರಿಯಾಯಿತಿ ನೀಡಲು ನಿರ್ಧರಿಸಿದೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನ್ಯಾಕ್ ನಿರ್ದೇಶಕ ಗಣೇಶನ್ ಕಣ್ಣಬೀರನ್, ‘ಗ್ರಾಮೀಣ ಭಾಗದ ಶೇ 58ರಷ್ಟು ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ಶಿಕ್ಷಣ ಗುಣಮಟ್ಟದ ಸುಧಾರಣೆಗಾಗಿ ಬೈನರಿ ಮಾನ್ಯತೆ ಮತ್ತು ಪ್ರಬುದ್ಧತಾ ಹಂತ ರೂಪಿಸಲಾಗುತ್ತಿದೆ’ ಎಂದರು.
‘ಗ್ರಾಮೀಣ ಪ್ರದೇಶದಲ್ಲಿ ಮೂಲಸೌಕರ್ಯದ ಕೊರತೆ, ಇಂಟರ್ನೆಟ್ ಮತ್ತು ತಂತ್ರಜ್ಞಾನದ ಲಭ್ಯತೆ ಕೊರತೆಯ ಕಾರಣದಿಂದ ನ್ಯಾಕ್ ಮಾನ್ಯತೆಗೆ ಅರ್ಜಿ ಸಲ್ಲಿಸಿದರೂ, ಉನ್ನತ ಶ್ರೇಣಿ ಪಡೆಯಲು ಸಾಧ್ಯವಾಗುತ್ತಿಲ್ಲ. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು, ದಾಖಲಾತಿ ಸಲ್ಲಿಕೆ ಮತ್ತು ಮಾನ್ಯತಾ ಪ್ರಕ್ರಿಯೆನ್ನು ಸರಳಗೊಳಿಸಲಾಗುತ್ತಿದೆ’ ಎಂದು ಹೇಳಿದರು.
‘ನ್ಯಾಕ್ ಮಾನ್ಯತೆ ಕೋರಿದ 1,900ಕ್ಕೂ ಹೆಚ್ಚು ಅರ್ಜಿಗಳು ಬಾಕಿ ಉಳಿದಿವೆ. ಅವುಗಳಲ್ಲಿ 100 ಕಾಲೇಜುಗಳು ಮಾತ್ರ ಬೈನರಿ ವ್ಯವಸ್ಥೆಗೆ ಸಮ್ಮತಿಸಿವೆ. ನ್ಯಾಕ್ ಮಾನ್ಯತೆ ಪಡೆಯದ ಹೊಸ ಕಾಲೇಜುಗಳು ಬೈನರಿ ಮಾನ್ಯತೆ ಕೋರಿ ಅರ್ಜಿ ಸಲ್ಲಿಸಬಹುದು. ಶುಲ್ಕದಲ್ಲೂ ಶೇ 50ರಷ್ಟು ರಿಯಾಯಿತಿ ನೀಡಲಾಗಿದೆ. ಹೊಸ ಮಾನ್ಯತಾ ಪರಿಕಲ್ಪನೆಗಳ ಜಾರಿಯ ನಂತರ ಹಿಂದಿನ ನ್ಯಾಕ್ ಶ್ರೇಣಿ ಪದ್ಧತಿಗಳು ಕ್ರಮೇಣವಾಗಿ ರದ್ದಾಗಲಿವೆ’ ಎಂದರು.
‘ಬೈನರಿ ಮಾನ್ಯತೆ’ ಕುರಿತು ನಡೆದ ಸಮಾಲೋಚನಾ ಕಾರ್ಯಗಾರದಲ್ಲಿ ದೇಶದ 28 ರಾಜ್ಯಗಳ ಮತ್ತು ಐದು ಕೇಂದ್ರಾಡಳಿತ ಪ್ರದೇಶದ ಪ್ರತಿನಿಧಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.