ADVERTISEMENT

ಅಂಗಾಂಗ ದಾನ ಮಾಡಿ ಐವರಿಗೆ ನೆರವಾದ ವ್ಯಕ್ತಿ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2024, 15:37 IST
Last Updated 7 ನವೆಂಬರ್ 2024, 15:37 IST
.
.   

ಬೆಂಗಳೂರು: ಮಿದುಳು ನಿಷ್ಕ್ರಿಯಗೊಂಡ 43 ವರ್ಷದ ವ್ಯಕ್ತಿಯೊಬ್ಬರು ಅಂಗಾಂಗ ದಾನದ ಮೂಲಕ ಐವರಿಗೆ ನೆರವಾಗಿದ್ದಾರೆ. 

ಇಲ್ಲಿನ ಮಾರ್ಕಂಡ ಆರ್. ಎನ್ನುವವರು ಅಂಗಾಂಗ ದಾನಿಯಾಗಿದ್ದಾರೆ. ಅವರು ಬಡಗಿ ವೃತ್ತಿ ಮಾಡಿಕೊಂಡಿದ್ದರು. ಇತ್ತೀಚೆಗೆ ಜ್ವರ ಹಾಗೂ ತೀವ್ರ ತಲೆ ನೋವಿನಿಂದ ಕೆಲಸದ ಅವಧಿಯಲ್ಲಿ ಕುಸಿದುಬಿದ್ದಿದ್ದ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದು, ತುರ್ತು ಚಿಕಿತ್ಸೆ ನೀಡಲಾಗಿತ್ತು. ಹೆಚ್ಚಿನ ಚಿಕಿತ್ಸೆಗೆ ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಕ್ತದಲ್ಲಿನ ಆಮ್ಲಜನಕದ ಮಟ್ಟವು ಅವರಲ್ಲಿ ಕಡಿಮೆಯಾಗಿತ್ತು. ತೀವ್ರ ನಿಗಾ ಘಟಕದಲ್ಲಿ ಒಂದು ವಾರ ಚಿಕಿತ್ಸೆ ನೀಡಿದರೂ ಆರೋಗ್ಯದಲ್ಲಿ ಚೇತರಿಕೆ ಕಾಣಲಿಲ್ಲ. ಮಿದುಳಿನಲ್ಲಿ ರಕ್ತಸ್ರಾವ ಆಗಿರುವುದು ಸಿಟಿ ಸ್ಕ್ಯಾನ್‌ ವರದಿಯಿಂದ ಖಚಿತಪಟ್ಟಿತು. ಇದರಿಂದಾಗಿ ಮಿದುಳು ನಿಷ್ಕ್ರಿಯಗೊಂಡಿರುವುದಾಗಿ ಘೋಷಿಸಿ, ಅಂಗಾಂಗ ದಾನ ಪ್ರಕ್ರಿಯೆ ನಡೆಸಲಾಯಿತು ಎಂದು ವೈದ್ಯರು ತಿಳಿಸಿದ್ದಾರೆ

ಕುಟುಂಬ ಸದಸ್ಯರ ಸಮ್ಮತಿ ಮೇರೆಗೆ ವ್ಯಕ್ತಿಯ ಯಕೃತ್ತು, ಎರಡು ಮೂತ್ರಪಿಂಡಗಳು ಮತ್ತು ಕಣ್ಣಿನ ಕಾರ್ನಿಯಾಗಳನ್ನು ದಾನವಾಗಿ ಪಡೆಯಲಾಗಿದೆ. ಜೀವಸಾರ್ಥಕತೆ ಸಂಸ್ಥೆಯಡಿ ಹೆಸರು ನೋಂದಾಯಿಕೊಂಡ ಐವರಿಗೆ ಈ ಅಂಗಾಂಗಗಳು ನೆರವಾಗಿವೆ ಎಂದು ಹೇಳಿದ್ದಾರೆ.

ADVERTISEMENT

ಮಣಿಪಾಲ್ ಆಸ್ಪತ್ರೆಯ ಡಾ.ನಾರಾಯಣಸ್ವಾಮಿ ಮೂಲಾ, ‘ಸಾವಿನ ನಂತರ ಒಬ್ಬ ವ್ಯಕ್ತಿಯು ತನ್ನ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಸಂಕಷ್ಟದಲ್ಲಿರುವವರಿಗೆ ಹೇಗೆ ನೆರವಾಗಬಹುದು ಎಂಬುದಕ್ಕೆ ಈ ಪ್ರಕರಣ ಉತ್ತಮ ಉದಾಹರಣೆ. ದುಃಖದ ಸಂದರ್ಭದಲ್ಲಿಯೂ ಕುಟುಂಬದ ಸದಸ್ಯರು ಮಾನವೀಯತೆ ಮೆರೆದಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

‘ವ್ಯಕ್ತಿಯ ಮಿದುಳು ನಿಷ್ಕ್ರಿಯಗೊಂಡ ಬಳಿಕ ಕುಟುಂಬದ ಸದಸ್ಯರ ಒಪ್ಪಿಗೆ ಮೇರೆಗೆ ಅಂಗಾಂಗವನ್ನು ದಾನವಾಗಿ ಪಡೆಯಲಾಗುತ್ತಿದೆ. ಅಂಗಾಂಗ ದಾನಿಗಳ ಕೊರತೆಯಿಂದ ಅಂಗಾಂಗ ಕಸಿಗೆ ಕಾಯುತ್ತಿರುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿದೆ. ರಸ್ತೆ ಅಪಘಾತ ಸೇರಿ ವಿವಿಧ ಸಂದರ್ಭದಲ್ಲಿ ಗಂಭೀರವಾಗಿ ಗಾಯಗೊಂಡು, ಮಿದುಳು ನಿಷ್ಕ್ರಿಯಗೊಂಡವರ ಕುಟುಂಬಸ್ಥರಿಗೆ ಅಂಗಾಂಗ ದಾನದ ಬಗ್ಗೆ ಮನವರಿಕೆ ಮಾಡಿಸಲಾಗುತ್ತಿದೆ’ ಎಂದು ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.