ADVERTISEMENT

ಸ್ಕೈವಾಕ್‌: ತ್ಯಾಜ್ಯ, ಮದ್ಯ ಸೇವನೆ, ದರೋಡೆ ತಾಣ!

ಲಕ್ಕಸಂದ್ರ ಸ್ಕೈವಾಕ್‌: ವಿದ್ಯಾರ್ಥಿಗಳು, ರೋಗಿಗಳು, ವೃದ್ಧರಿಗೆ ಸಂಕಷ್ಟ

ಆರ್. ಮಂಜುನಾಥ್
Published 15 ನವೆಂಬರ್ 2023, 23:50 IST
Last Updated 15 ನವೆಂಬರ್ 2023, 23:50 IST
<div class="paragraphs"><p>ಹೊಸೂರು ಮುಖ್ಯರಸ್ತೆಯ ಲಕ್ಕಸಂದ್ರದಲ್ಲಿ ಸ್ಕೈ ವಾಕ್ ಸಮೀಪವೇ ವಾಹನಗಳ ನಡುವೆ ರಸ್ತೆ ದಾಟುತ್ತಿರುವ ಪ್ರಯಾಣಿಕರು </p></div>

ಹೊಸೂರು ಮುಖ್ಯರಸ್ತೆಯ ಲಕ್ಕಸಂದ್ರದಲ್ಲಿ ಸ್ಕೈ ವಾಕ್ ಸಮೀಪವೇ ವಾಹನಗಳ ನಡುವೆ ರಸ್ತೆ ದಾಟುತ್ತಿರುವ ಪ್ರಯಾಣಿಕರು

   

–ಪ್ರಜಾವಾಣಿ ಚಿತ್ರ: ಎಂ.ಎಸ್‌.ಮಂಜುನಾಥ್‌

ಬೆಂಗಳೂರು: ಮಣ್ಣು ತುಂಬಿ ತುಕ್ಕು ಹಿಡಿದಿರುವ ಮೆಟ್ಟಿಲುಗಳು, ಆರಂಭದಲ್ಲೇ ಉಗುಳು, ತ್ಯಾಜ್ಯದ ಕೊಳಕು, ನೆಲ ಅಂತಸ್ತಿನಲ್ಲಿ ಬಾಗಿಲು ತೆರೆಯದ ಲಿಫ್ಟ್‌, ಮೇಲಸ್ತಿನಲ್ಲಿ ಮದ್ಯ ಸೇವನೆಯ ತಾಣವಾಗಿರುವ ಲಿಫ್ಟ್‌ ಸ್ಥಳ, ರಾತ್ರಿಯಾದರೆ ಕಳ್ಳಕಾಕರ ಭಯ...

ADVERTISEMENT

ಇದು ಲಕ್ಕಸಂದ್ರದ ಬಳಿ ಇರುವ ಸ್ಕೈವಾಕ್‌ ಚಿತ್ರಣ. ಲಕ್ಕಸಂದ್ರ ನಿವಾಸಿಗಳು, ಬೆಂಗಳೂರು ದಂತ ವಿಜ್ಞಾನ ಸಂಸ್ಥೆ, ನಿಮ್ಹಾನ್ಸ್‌, ಕ್ರೈಸ್ಟ್‌ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು, ರೋಗಿಗಳು, ವೃದ್ಧರಿಗೆ ರಸ್ತೆ ದಾಟಲು ಇರುವ ಏಕೈಕ ಮಾರ್ಗ ಈ ಸ್ಕೈವಾಕ್‌. ಅವ್ಯವಸ್ಥೆಯ ತಾಣವಾಗಿರುವ ಇದನ್ನೇ ಜನರು ಅನಿವಾರ್ಯವಾಗಿ ಉಪಯೋಗಿಸಬೇಕಾಗಿದೆ.

ಹೊಸೂರು ಮುಖ್ಯರಸ್ತೆಯ ಲಕ್ಕಸಂದ್ರದ ಬಳಿ ಇರುವ ಈ ಸ್ಕೈವಾಕ್‌ ನಿರ್ಮಾಣವಾಗಿ ಕೆಲವು ವರ್ಷಗಳಾಗಿವೆ. ಅಂದಿನಿಂದಲೂ ಲಿಫ್ಟ್‌/ ಎಲಿವೇಟರ್‌ ಕಾರ್ಯಾರಂಭ ಮಾಡಿಲ್ಲ. ಹೀಗಾಗಿ, ಲಿಫ್ಟ್‌ ತ್ಯಾಜ್ಯ ಹಾಗೂ ಮದ್ಯ ಸೇವಿಸುವ ತಾಣವಾಗಿದೆ. ಎಲ್ಲ ರೀತಿಯ ಕಸವನ್ನು ಲಿಫ್ಟ್‌ ಒಳಭಾಗಕ್ಕೆ ತುಂಬಲಾಗಿದೆ. ಇದು ದುರ್ವಾಸನೆ ಬೀರುವ ತಾಣವಾಗಿದೆ.

ಸ್ಕೈವಾಕ್‌ ಹತ್ತುವ ಜಾಗದಲ್ಲಿ ಉಗುಳುತ್ತಾರೆ. ಜತೆಗೆ ಎಲ್ಲ ತರಹದ ತ್ಯಾಜ್ಯವನ್ನೂ ಸುರಿಯಲಾಗುತ್ತಿದೆ. ಮೆಟ್ಟಿಲುಗಳ ಮೇಲೂ ಇದೇ ಅವಸ್ಥೆ. ಹೀಗಾಗಿ ಜನರಿಗೆ ಮೆಟ್ಟಿಲುಗಳ ಮೇಲೆ ಹೆಜ್ಜೆ ಇಡಲೂ ಸಮಸ್ಯೆಯಾಗುತ್ತಿದೆ. ಜೋರು ಮಳೆಬಂದಾಗ ಮಾತ್ರ ಈ ಮೆಟ್ಟಿಲುಗಳು ಸ್ವಚ್ಛವಾಗುತ್ತವೆ. ಇಲ್ಲದಿದ್ದರೆ ಮಣ್ಣು–ತ್ಯಾಜ್ಯವೇ ತುಂಬಿಕೊಂಡಿರುತ್ತದೆ ಎಂಬುದು ಸ್ಥಳೀಯರ ಮಾತು.

ಕತ್ತಲು ಆವರಿಸಿಕೊಳ್ಳುತ್ತಿದ್ದಂತೆಯೇ ಲಕ್ಕಸಂದ್ರದ ಸ್ಕೈವಾಕ್‌ ಕಳ್ಳಕಾಕರ ತಾಣವಾಗುತ್ತದೆ. ದೀಪದ ವ್ಯವಸ್ಥೆ ಇಲ್ಲದ್ದರಿಂದ, ಮದ್ಯಪಾನ, ಧೂಮಪಾನ ಮಾಡುವ ಗುಂಪು ಇಲ್ಲಿರುತ್ತದೆ. ಧೈರ್ಯ ಮಾಡಿ ನಾಗರಿಕರು ಸ್ಕೈವಾಕ್‌ ಹತ್ತಿದರೆ ಅವರನ್ನು ಬೆದರಿಸಿ, ಸುಲಿಗೆ ಮಾಡುವವರೂ ಇರುತ್ತಾರೆ. ಮೊಬೈಲ್, ಪರ್ಸ್‌, ಚೈನ್‌ನಂತಹ ವಸ್ತುಗಳನ್ನು ಸುಲಿಗೆ ಮಾಡಿರುವ ಪ್ರಕರಣಗಳು ದಾಖಲಾಗಿವೆ ಎಂದು ಸ್ಥಳೀಯ ನಿವಾಸಿ ರಂಜನ್‌ ಹೇಳಿದರು.

ಡಿವೈಡರ್‌ ದಾಟುವ ಸಾಹಸ: ಲಕ್ಕಸಂದ್ರದ ಸ್ಕೈವಾಕ್‌ನ ದುಃಸ್ಥಿತಿಯಿಂದ ವಿದ್ಯಾರ್ಥಿಗಳು ಹಾಗೂ ಆಸ್ಪತ್ರೆ ಸಿಬ್ಬಂದಿ ರಸ್ತೆಯ ಡಿವೈಡರ್‌ ಅನ್ನೇ ಹತ್ತಿ ರಸ್ತೆ ದಾಟುವ ಸಾಹಸವನ್ನು ಪ್ರತಿ ನಿತ್ಯವೂ ಇಲ್ಲಿ ಮಾಡುತ್ತಲೇ ಇರುತ್ತಾರೆ. ವಾಹನ ದಟ್ಟಣೆಯಲ್ಲಿ ಅಪಾಯವನ್ನೂ ಲೆಕ್ಕಿಸದೆ ಡಿವೈಡರ್‌ ದಾಟುವುದನ್ನು ತಡೆಯಲೂ ಇಲ್ಲಿ ’ಯಾರೂ’ ಇರುವುದಿಲ್ಲ. 

ಸ್ಕೈವಾಕ್‌ನ ದುಃಸ್ಥಿತಿ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳು, ಬಿಬಿಎಂಪಿಗೆ ಸಾಕಷ್ಟು ಬಾರಿ ದೂರು ನೀಡಿದ್ದರೂ ಯಾರೂ ಕ್ರಮ ಕೈಗೊಂಡಿಲ್ಲ. ಅಪಾಯ, ಅಪಘಾತಗಳು ಹೆಚ್ಚಾಗುವ ಮೊದಲು ರಸ್ತೆ ದಾಟಲು ನಾಗರಿಕರಿಗೆ ಸುರಕ್ಷಿತ ಮಾರ್ಗ ಕಲ್ಪಿಸಲು ಕೊಡು ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.

ಲಕ್ಕಸಂದ್ರ ಸ್ಕೈವಾಕ್ ಲಿಫ್ಟ್‌ನಲ್ಲಿ ಮದ್ಯದ ಬಾಟಲ್‌ಗಳು ತ್ಯಾಜ್ಯವನ್ನು ಸುರಿದಿರುವುದು ಪ್ರಜಾವಾಣಿ ಚಿತ್ರ: ಎಂ.ಎಸ್‌.ಮಂಜುನಾಥ್‌
ಲಕ್ಕಸಂದ್ರ ಸ್ಕೈವಾಕ್ ಮೆಟ್ಟಿಲಿನ ಮೇಲೆ ಕಸ ಪ್ರಜಾವಾಣಿ ಚಿತ್ರ: ಎಂ.ಎಸ್‌.ಮಂಜುನಾಥ್‌
ಹೊಸೂರು ಮುಖ್ಯರಸ್ತೆಯಲ್ಲಿನ ಎತ್ತರದ ಡಿವೈಡರ್‌ ದಾಟುತ್ತಿರುವ ವಿದ್ಯಾರ್ಥಿ ಪ್ರಜಾವಾಣಿ ಚಿತ್ರ: ಎಂ.ಎಸ್‌.ಮಂಜುನಾಥ್‌
ಹೊಸೂರು ಮುಖ್ಯರಸ್ತೆಯಲ್ಲಿ ಡಿವೈಡರ್‌ ದಾಟುತ್ತಿರುವ ಆಸ್ಪತ್ರೆ ಸಿಬ್ಬಂದಿ ಪ್ರಜಾವಾಣಿ ಚಿತ್ರ: ಎಂ.ಎಸ್‌.ಮಂಜುನಾಥ್‌
ಸುಹಾಸ್ ವಿದ್ಯಾರ್ಥಿ
ವಸಂತಾ ಕಾರ್ಮಿಕರು
ಸಿನ್ನಿ ಐಟಿ ಉದ್ಯೋಗಿ
ಕೆಂಗಲ್‌ ಹನುಮಂತಯ್ಯ ರಸ್ತೆಯಲ್ಲಿರುವ (ಡಬಲ್‌ ರೋಡ್‌) ಸ್ಕೈವಾಕ್‌ನ ಲಿಫ್ಟ್‌  ವರ್ಷಗಳಿಂದ ಕಾರ್ಯನಿರ್ವಹಿಸುತ್ತಿಲ್ಲ

ದೂರು ನೀಡಿದರೂ ಪ್ರಯೋಜನ ಇಲ್ಲ

ವರ್ಷಗಳ ಹಿಂದೆ ಲಕ್ಕಸಂದ್ರದ ಸ್ಕೈವಾಕ್‌ ನಿರ್ಮಿಸಲಾಗಿದೆ. ಆದರೆ ಇದು ಈಗ ಶೌಚಾಲಯದಂತಾಗಿದೆ. ಸ್ವಚ್ಛಗೊಳಿಸುವವರೇ ಇಲ್ಲ. ಮೆಟ್ಟಿಲುಗಳು ಹತ್ತಲು ಸುರಕ್ಷಿತವಾಗಿಲ್ಲ. ಎರಡು ಎಲಿವೇಟರ್‌ಗಳಿದ್ದರೂ ಕಾರ್ಯನಿರ್ವಹಿಸುತ್ತಿಲ್ಲ. ಹಲವು ಬಾರಿ ಬಿಬಿಎಂಪಿಗೆ ದೂರು ನೀಡಲಾಗಿದೆ. ಕನಿಷ್ಠ ಸ್ವಚ್ಛತೆ ಕಾರ್ಯವನ್ನೂ ನಡೆಸಿಲ್ಲ. ಸ್ಥಳೀಯ ಜನಪ್ರತಿನಿಧಿಗಳಿಗೂ ದೂರು ನೀಡಿದ್ದರೂ ಯಾರೂ ಇತ್ತ ಕಡೆ ಸುಳಿದಿಲ್ಲ. ಸದಾ ವಾಹನ ದಟ್ಟಣೆಯಿಂದಿರುವ ರಸ್ತೆಯನ್ನು ದಾಟಲು ಸ್ಕೈವಾಕ್‌ ಅಲ್ಲದೆ ಬೇರೆ ದಾರಿ ಇಲ್ಲ. ಅಂಚೆ ಕಚೇರಿ ಬ್ಯಾಂಕ್‌ ಆಸ್ಪತ್ರೆಗೆ ತೆರಳಲು ನಿವಾಸಿಗಳು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ವೃದ್ಧರು ಅಂಗವಿಕಲರು ರೋಗಿಗಳು ಸ್ಕೈವಾಕ್‌ ಬಳಸುವುದಾದರೂ ಹೇಗೆ?’ ಡಾ. ಆಶಾ ಕೃಷ್ಣಸ್ವಾಮಿ ಲಕ್ಕಸಂದ್ರ

ಕಾಲಿಡಲೂ ಅಸಹ್ಯ

ಬಸ್‌ ಇಳಿದು ಮತ್ತೊಂದು ಭಾಗದಲ್ಲಿರುವ ಕಾಲೇಜಿಗೆ ಹೋಗಲು ಇಲ್ಲಿ ಇರುವುದೇ ಒಂದು ಸ್ಕೈವಾಕ್‌. ಆದರೆ ಇಲ್ಲಿ ಕಸ ತುಂಬಿದ್ದು ಕಾಲಿಡಲೂ ಅಸಹ್ಯವಾಗುತ್ತದೆ. ಮೂಗು ಮುಚ್ಚಿಕೊಂಡು ಅನಿವಾರ್ಯವಾಗಿ ಓಡಾಡುತ್ತಿದ್ದೇವೆ ಸುಹಾಸ್‌ ವಿದ್ಯಾರ್ಥಿ ಮೆಟ್ಟಿಲುಗಳಲ್ಲಿ ತ್ಯಾಜ್ಯ ಲಿಫ್ಟ್‌ ಕಾರ್ಯಾಚರಣೆ ನಡೆಸಿದ್ದು ನಾನಂತೂ ನೋಡಿಲ್ಲ. ವರ್ಷಗಳಿಂದ ಹೀಗೆಯೇ ದೂಳು ತುಂಬಿಕೊಂಡು ನಿಂತಿದೆ. ಸ್ಕೈವಾಕ್‌ ಮೆಟ್ಟಿಲುಗಳು ಕಿರಿದಾಗಿರುವ ಜತೆಗೆ ತ್ಯಾಜ್ಯದಿಂದ ಕೂಡಿವೆ. ಸ್ವಚ್ಛತೆಯನ್ನಾದರೂ ಕಾಪಾಡಬೇಕಿದೆ ವಸಂತಾ ಬೆಂಗಳೂರು ಡೇರಿ ಕಾರ್ಮಿಕರು ದುರ್ವಾಸನೆಯ ತಾಣ ಸ್ಕೈವಾಕ್‌ನಲ್ಲಿ ಹತ್ತಿ ಇಳಿಯುವವರೆಗೂ ದುರ್ವಾಸನೆ. ಕಸ ಹಾಕುವ ಜೊತೆಗೆ ಮದ್ಯ ಕುಡಿಯುವ ತಾಣವೂ ಇದಾಗಿದ್ದು ಓಡಾಡಲು ಕಷ್ಟವಾಗಿದೆ. ಸಿನ್ನಿ ಐಟಿ ಉದ್ಯೋಗಿ

ಕೆ.ಎಚ್‌. ರಸ್ತೆಯಲ್ಲೂ ಲಿಫ್ಟ್‌ ಬಂದ್‌!

ಕೆಂಗಲ್‌ ಹನುಮಂತಯ್ಯ ರಸ್ತೆಯಲ್ಲಿರುವ (ಡಬಲ್‌ ರೋಡ್‌) ಸ್ಕೈವಾಕ್‌ನ ಲಿಫ್ಟ್‌ ಕೂಡ ಕಾರ್ಯನಿರ್ವಹಿಸುತ್ತಿಲ್ಲ. ‘ನಾಲ್ಕಾರು ವರ್ಷಗಳ ಹಿಂದೆ ನಿರ್ಮಿಸಲಾಗಿರುವ ಈ ಸ್ಕೈವಾಕ್‌ನ ಲಿಫ್ಟ್ ಕಾರ್ಯನಿರ್ವಹಿಸಿರುವುದನ್ನು ನೋಡಿಯೇ ಇಲ್ಲ’ ಎಂದು ಸ್ಥಳೀಯರು ಹೇಳುತ್ತಾರೆ. ಸ್ಕೈವಾಕ್‌ ನಿರ್ವಹಣೆಯನ್ನೂ ಯಾರೂ ಮಾಡುತ್ತಿಲ್ಲ. ಆದರೆ ಜಾಹೀರಾತು ಫಲಕಗಳು ಮಾತ್ರ ರಾರಾಜಿಸುತ್ತಿವೆ. ‘ಸ್ಕೈವಾಕ್‌ನ ಲಿಫ್ಟ್‌ ಚಾಲನೆಯಲ್ಲಿ ಇಲ್ಲ. ಹೀಗಾಗಿ ವೃದ್ಧರು ಮಹಿಳೆಯರು ಹಾಗೂ ಮಕ್ಕಳು ದುಃಸ್ಥಿತಿಯಲ್ಲಿರುವ ಮೆಟ್ಟಿಲುಗಳಲ್ಲೇ ಓಡಾಡುತ್ತಾರೆ. ಹಲವರು ಡಿವೈಡರ್‌ಗಳನ್ನು ಹತ್ತಿ ಅಪಾಯದಲ್ಲಿಯೇ ರಸ್ತೆ ದಾಟುತ್ತಾರೆ. ಈ ಸಂದರ್ಭದಲ್ಲಿ ಹಲವು ಅಪಘಾತಗಳೂ ಸಂಭವಿಸಿವೆ ’ ಎಂದು ಸ್ಥಳೀಯ ಅಂಗಡಿ ಮಾಲೀಕ ರಂಗನಾಥ್‌ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.