ADVERTISEMENT

ಹೆಸರಘಟ್ಟ ಕೆರೆ ಅಭಿವೃದ್ದಿಗೆ ಸರ್ಕಾರಕ್ಕೆ ಪ್ರಸ್ತಾವ

ರೈತ ಮುಖಂಡರಿಗೆ ಜಲಮಂಡಳಿ ಅಧ್ಯಕ್ಷರ ಭರವಸೆ

​ಪ್ರಜಾವಾಣಿ ವಾರ್ತೆ
Published 8 ಮೇ 2024, 14:35 IST
Last Updated 8 ಮೇ 2024, 14:35 IST
ಹೆಸರಘಟ್ಟ ಪ್ರದೇಶದ ರೈತ ಮುಖಂಡರು ಜಲಮಂಡಳಿ ಅಧ್ಯಕ್ಷ ಡಾ. ವಿ. ರಾಮ್‌ಪ್ರಸಾತ್‌ ಮನೋಹರ್‌ ಅವರಿಗೆ ಮನವಿ ಸಲ್ಲಿಸಿದರು
ಹೆಸರಘಟ್ಟ ಪ್ರದೇಶದ ರೈತ ಮುಖಂಡರು ಜಲಮಂಡಳಿ ಅಧ್ಯಕ್ಷ ಡಾ. ವಿ. ರಾಮ್‌ಪ್ರಸಾತ್‌ ಮನೋಹರ್‌ ಅವರಿಗೆ ಮನವಿ ಸಲ್ಲಿಸಿದರು   

ಬೆಂಗಳೂರು: ಹೆಸರಘಟ್ಟ ಕೆರೆಯ ಸಮಗ್ರ ಅಭಿವೃದ್ಧಿಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷ ಡಾ.ವಿ.ರಾಮ್‌ಪ್ರಸಾತ್‌ ಮನೋಹರ್‌ ಅವರು ರೈತರಿಗೆ ಭರವಸೆ ನೀಡಿದರು.

ಹೆಸರಘಟ್ಟ ಕೆರೆಯನ್ನು ಸಮಗ್ರ ಅಭಿವೃದ್ದಿ ಮಾಡುವುದರಿಂದ ಸುತ್ತಮುತ್ತಲಿನ ಗ್ರಾಮಗಳು ಹಾಗೂ ಭವಿಷ್ಯದಲ್ಲಿ ನಗರದ ಹಲವು ಪ್ರದೇಶಗಳಿಗೂ ಅನುಕೂಲವಾಗಲಿದೆ ಎಂದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳೊಂದಿಗೆ ಬುಧವಾರ ಅವರು ಸಭೆ ನಡೆಸಿದರು.

ADVERTISEMENT

‘ಹೆಸರಘಟ್ಟ ಕೆರೆಯಲ್ಲಿ ನೀರಿರುವುದರಿಂದ ಅಕ್ಕಪಕ್ಕದ ಗ್ರಾಮಗಳಿಗೆ ಬಹಳಷ್ಟು ಅನುಕೂಲವಾಗಿದೆ. ಹಲವಾರು ಪ್ರಾಣಿ ಮತ್ತು ಪಕ್ಷಿಗಳು ಕೆರೆಯ ನೀರಿನ ಮೇಲೆ ಅವಲಂಬಿತವಾಗಿವೆ. ಹೀಗಾಗಿ, ಇಲ್ಲಿನ ನೀರನ್ನು ನಗರದ ಇತರೆ ಪ್ರದೇಶಗಳಿಗೆ ಸರಬರಾಜು ಮಾಡುವುದು ಬೇಡ. ಈ ಕೆರೆಗೆ ನೀರು ಬರುವಂತಹ ಪ್ರದೇಶಗಳಲ್ಲಿ ಮಾಲಿನ್ಯವಿದ್ದು, ಅದನ್ನು ತಡೆಯಬೇಕು. ಹೂಳು ತುಂಬಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹವಾಗುತ್ತಿಲ್ಲ. ಹೆಸರಘಟ್ಟ ಕೆರೆಯನ್ನು ಅಭಿವೃದ್ದಿಪಡಿಸಬೇಕು’ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಅರಳಾಪುರ ಮಂಜೇಗೌಡ ಮನವಿ ಮಾಡಿದರು.

‘1894ರಲ್ಲಿ ಬೆಂಗಳೂರು ನಗರಕ್ಕೆ ನೀರು ಸರಬರಾಜು ಮಾಡುವ ಉದ್ದೇಶದಿಂದ ಹೆಸರಘಟ್ಟ ಕೆರೆಯನ್ನು ನಿರ್ಮಿಸಲಾಗಿತ್ತು. ಸೋಲದೇವನಹಳ್ಳಿ ಪಂಪಿಂಗ್‌ ಸ್ಟೇಷನ್‌ನಿಂದ ನಗರಕ್ಕೆ ಸರಬರಾಜು ಮಾಡಲಾಗುತ್ತಿತ್ತು. ದಾಸರಹಳ್ಳಿ ಪ್ರದೇಶದಲ್ಲಿ ನೀರಿನ ಅಭಾವದ ಕಾರಣ, ಹೆಸರಘಟ್ಟ ಕೆರೆಯಿಂದ ಆ ಪ್ರದೇಶಗಳಿಗೆ ನೀರು ಪೂರೈಸುವ ಉದ್ದೇಶವಿತ್ತು. ರೈತ ಸಂಘದ ಪದಾಧಿಕಾರಿಗಳು ನೀರು ಸರಬರಾಜು ಮಾಡುವುದು ಬೇಡ ಎಂದಿದ್ದಾರೆ. ಸರ್ಕಾರದೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ. ಮುಂದಿನ ದಿನಗಳಲ್ಲಿ ಎತ್ತಿನಹೊಳೆ ಯೋಜನೆಯ ಮೂಲಕ ಲಭ್ಯವಾಗುವ ನೀರನ್ನು ಈ ಮೂಲಕ ಸರಬರಾಜು ಮಾಡಲು ಸಜ್ಜಾಗುವ ಗುರಿ ನಮ್ಮದಾಗಿದೆ’ ಎಂದು ರಾಮ್‌ಪ್ರಸಾತ್‌ ಹೇಳಿದರು.

ನಗರದಲ್ಲಿ ಸದ್ಯ ಮಳೆ ಬೀಳುತ್ತಿದೆ. ಕಾವೇರಿ 5ನೇ ಹಂತದ ಕಾಮಗಾರಿ ಶೀಘ್ರ ಮುಗಿಯಲಿದ್ದು, ಹೆಚ್ಚಿನ ನೀರು ಲಭ್ಯವಾಗಲಿದೆ. ನೀರಿನ ಪ್ರಮಾಣವನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಹೆಸರಘಟ್ಟ ನೀರನ್ನು ಬಳಸುವ ಮುನ್ನ ರೈತರು ಹಾಗೂ ಸರ್ಕಾರದೊಂದಿಗೆ ಸಮಾಲೋಚನೆ ಮಾಡಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ನಂಜುಂಡಪ್ಪ ಕಡತನಮಲೆ, ಸಂಘಟನಾ ಕಾರ್ಯದರ್ಶಿ ಆರ್‌ ಲೋಕೇಶ್‌ ಶರ್ಮಾ, ಜಲಮಂಡಳಿಯ ಪ್ರಧಾನ ಮುಖ್ಯ ಎಂಜಿನಿಯರ್‌  ಸುರೇಶ್‌  ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.