ADVERTISEMENT

2023 ಮರೆಯುವ ಮುನ್ನ: ಭರವಸೆಗಳ ಸುರಿಮಳೆ; ಕಾಣದ ಬೆಂಗಳೂರು ಅಭಿವೃದ್ದಿ

ಪ್ರಜಾವಾಣಿ ವಿಶೇಷ
Published 26 ಡಿಸೆಂಬರ್ 2023, 20:06 IST
Last Updated 26 ಡಿಸೆಂಬರ್ 2023, 20:06 IST
ಹಳೇ ಮದ್ರಾಸ್‌ ರಸ್ತೆಯಲ್ಲಿ ನಿರ್ಮಿಸಲಾಗಿದ್ದ ‘ರ‍್ಯಾಪಿಡ್‌ ರಸ್ತೆ’ಯಲ್ಲಿ ಕಾಣಿಸಿಕೊಂಡಿದ್ದ ಬಿರುಕು
ಹಳೇ ಮದ್ರಾಸ್‌ ರಸ್ತೆಯಲ್ಲಿ ನಿರ್ಮಿಸಲಾಗಿದ್ದ ‘ರ‍್ಯಾಪಿಡ್‌ ರಸ್ತೆ’ಯಲ್ಲಿ ಕಾಣಿಸಿಕೊಂಡಿದ್ದ ಬಿರುಕು   

ರಾಜಧಾನಿ ಬೆಂಗಳೂರು 2023ರ ಆರಂಭದಿಂದ ಅಂತ್ಯದವರೆಗೆ ಅಭಿವೃದ್ಧಿ ಯೋಜನೆಗಳ ಭರವಸೆಯ ಸುರಿಮಳೆಯನ್ನೇ ಕಂಡರೂ, ಆ ಯೋಜನೆಗಳ ಕಾರ್ಯಗತವಾಗುವ ಮುನ್ಸೂಚನೆಯೂ ವರ್ಷದ ಅಂತ್ಯಕ್ಕೆ ಕಂಡುಬರಲಿಲ್ಲ.

ವಾಹನ ದಟ್ಟಣೆ ನಿಯಂತ್ರಣ, ಸಿಗ್ನಲ್ ಮುಕ್ತ ಸಂಚಾರ, ಮೇಲ್ಸೇತುವೆ, ಸುರಂಗ ಮಾರ್ಗ, ಎಲಿವೇಟೆಡ್‌ ಕಾರಿಡಾರ್, 25 ವರ್ಷದ ದೂರದೃಷ್ಟಿಯ ಅಭಿವೃದ್ಧಿ ಕಾಮಗಾರಿಗಳು, ಕಾಂಕ್ರೀಟ್‌ ರಸ್ತೆಗಳು, ಗುಂಡಿ ಮುಕ್ತ ರಸ್ತೆಗಳು... ಹೀಗೆ ನೂರಾರು ಭರವಸೆಗಳನ್ನು ಅಧಿಕಾರದಲ್ಲಿದ್ದವರು, ಅಧಿಕಾರಕ್ಕೆ ಬಂದವರು ವರ್ಷದ ಆರಂಭದಿಂದ ಕೊನೆಯವರೆಗೂ ನೀಡಿದ್ದರು. ಇವುಗಳಲ್ಲಿ ಒಂದೂ ಅನುಷ್ಠಾನವಾಗಲಿಲ್ಲ.

‘ಬ್ರ್ಯಾಂಡ್‌ ಬೆಂಗಳೂರು’ ಹೆಸರಿನಲ್ಲೂ ನೂರಾರು ಯೋಜನೆಗಳನ್ನು ಪ್ರಕಟಿಸಲಾಯಿತಾದರೂ ಅವೆಲ್ಲ ಇನ್ನೂ ಸಭೆ, ಸಮಾರಂಭ, ಚರ್ಚೆಯ ಹಂತದಲ್ಲೇ ಉಳಿದಿವೆ. ಮಾಡಿರುವ ಕೆಲಸಕ್ಕೆ ಗುತ್ತಿಗೆದಾರರಿಗೆ ಹಣ ಪಾವತಿಯಾಗದ್ದರಿಂದ ಅವರಿಂದ ಪ್ರತಿಭಟನೆ, ಕೆಲಸ ಸ್ಥಗಿತವೂ ಆಯಿತು. ಹಲವು ಕಾಮಗಾರಿಗಳು ಇನ್ನೂ ಪ್ರಾರಂಭವೇ ಆಗಿಲ್ಲ.

ADVERTISEMENT

ನಗರದ ಎಲ್ಲ ಭಾಗಕ್ಕೂ ಕುಡಿಯಲು ಕಾವೇರಿ ನೀರು, ಒಳಚರಂಡಿ ನೀರಿನ ವ್ಯವಸ್ಥೆ ನೀಡುತ್ತೇನೆ ಎಂದು ಭರವಸೆ ನೀಡುತ್ತಲೇ ಇದೆ ಜಲಮಂಡಳಿ (ಬಿಡಬ್ಲ್ಯುಎಸ್‌ಎಸ್‌ಬಿ). ಹೊಸ ನಿವೇಶನಗಳ ಹಂಚಿಕೆಗೆ ಆಸಕ್ತಿ ತೋರಿದ್ದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಈ ವರ್ಷ ಒಂದೇ ಒಂದು ಯೋಜನೆಯನ್ನೂ ಅನುಷ್ಠಾನಗೊಳಿಸಲಿಲ್ಲ ನಾಗರಿಕರಿಗೆ ನಿವೇಶನ ಹಂಚಲಿಲ್ಲ.

ಚುನಾವಣೆ ವರ್ಷವಾದ್ದರಿಂದ ಮೂರ್ನಾಲ್ಕು ತಿಂಗಳು ಚುನಾವಣೆಯ ಚಟುವಟಿಕೆಗಳಲ್ಲೇ ಕಳೆದು ಹೋಯಿತು. ಆದರೂ ಒಂದು ಸರ್ಕಾರದ ಅಂತ್ಯ ಹಾಗೂ ಮತ್ತೊಂದು ಸರ್ಕಾರದ ಆರಂಭದ ನಡುವೆ ಸಿಲುಕಿಕೊಂಡ ಬೆಂಗಳೂರು ಅಭಿವೃದ್ಧಿ ಕಾಮಗಾರಿಗಳು ಯಾವ ಪ್ರಗತಿಯನ್ನೂ ಕಾಣಲಿಲ್ಲ. ಭರವಸೆಗಳ ಬೃಹತ್‌ ಪ್ರಕಾಶಮಾನದಲ್ಲೇ ಅಭಿವೃದ್ಧಿ ಕಾಣಲು ಸಾಧ್ಯವಾಗಿಲ್ಲ.

ಜನವರಿ

* ಸ್ಯಾಂಕಿ ರಸ್ತೆ ಮೇಲ್ಸೇತುವೆಗೆ ಸ್ಥಳೀಯ ನಾಗರಿಕರ ವಿರೋಧ.

* ವಾಯುಗುಣಮಟ್ಟ ಸುಧಾರಿಸಲು 11 ಚಟುವಟಿಕೆಗಳ ಕ್ರಿಯಾಯೋಜನೆ ಅನುಮೋದನೆ.

* ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಗಣರಾಜ್ಯೋತ್ಸವ

* ಬ್ರಿಗೇಡ್‌ ರಸ್ತೆ, ಮಹಾಲಕ್ಷ್ಮಿ ಬಡಾವಣೆ ಮುಖ್ಯರಸ್ತೆಯಲ್ಲಿ ರಸ್ತೆ ಕುಸಿತ

* ದೇಶದ ಪ್ರಥಮ ‍‌‘ರ‍್ಯಾಪಿಡ್‌ ರಸ್ತೆ’ ಎಂದು ಬಿಬಿಎಂಪಿ ಬಿಂಬಿಸಿದ್ದ ರಸ್ತೆ ಒಂದು ತಿಂಗಳಲ್ಲೇ ಬಿರುಕು

* ಹೆಬ್ಬಾಳ ಮೇಲ್ಸೇತುವೆ ವಿಸ್ತರಣೆ ಕಾಮಗಾರಿ ಪ್ರಾರಂಭ

ಫೆಬ್ರುವರಿ

* ಬಿಡಿಎ ನಾಡಪ್ರಭು ಕೆಂಪೇಗೌಡ ಬಡಾವಣೆ: ಸಿಎ ನಿವೇಶನ ಪರಿವರ್ತನೆ ಪ್ರಕರಣದ ವರದಿ– 31 ಎಂಜಿನಿಯರ್‌ ಮೇಲೆ ಕಾನೂನು ಕ್ರಮಕ್ಕೆ ಶಿಫಾರಸು

* ಎಂ.ಸಿ. ಲೇಔಟ್‌ನಲ್ಲಿ 300 ಹಾಸಿಗೆಗಳ ಪಾಲಿಕೆಗಳ ವ್ಯಾಪ್ತಿಯಲ್ಲಿ ಅತಿ ದೊಡ್ಡ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಆರಂಭ

* ಜ್ಞಾನಭಾರತಿ ಆವರಣದಲ್ಲಿ ತ್ಯಾಜ್ಯ; ಬಿಬಿಎಂಪಿಯಿಂದ 5 ನೋಟಿಸ್‌

ಮಾರ್ಚ್‌

* ಪುರಭವನದಲ್ಲಿ ಬಹಿರಂಗವಾಗಿ, ₹11,163 ಕೋಟಿ ಮೌಲ್ಯದ ಬಿಬಿಎಂಪಿ ಬಜೆಟ್‌ ಮಂಡನೆ

* ವಿಶ್ವಸಂಸ್ಥೆಯಿಂದ ಬೆಂಗಳೂರಿಗೆ ‘ಆರೋಗ್ಯಕರ ನಗರಗಳ ಪಾಲುದಾರಿಕೆ’ ಪ್ರಶಸ್ತಿ

* ರೇಸ್‌ಕೋರ್ಸ್‌ಗೆ ಅಂಬರೀಶ್‌ ಹೆಸರು: ಬಿಬಿಎಂಪಿ ‌ಅನುಮೋದನೆ

* ಪುಟಾಣಿ ರೈಲು, ಬೋಟಿಂಗ್‌ ಸೇರಿದಂತೆ ನವೀಕರಣಗೊಂಡ ಬಾಲಭವನಕ್ಕೆ ಚಾಲನೆ

* ವಿಧಾನಸಭೆ ಚುನಾವಣೆ ನೀತಿ ಸಂಹಿತೆ ಜಾರಿ: 19 ವಿಧಾನಸಭೆ ಕ್ಷೇತ್ರಗಳು ಸೂಕ್ಷ್ಮ

ಏಪ್ರಿಲ್‌

* ಪಿಯುಸಿ: ಬಿಬಿಎಂಪಿ ಕಾಲೇಜಿಗೆ ಶೇ 63.18 ಫಲಿತಾಂಶ

* ವಿಧಾನಸಭೆ ಚುನಾವಣೆಗೆ ಮನೆಯಿಂದ ಮತ: ಮತದಾನಕ್ಕೆ ಮುನ್ನ 33 ಮಂದಿ ಮರಣ

ಮೇ

* ವಿಧಾನಸಭೆ ಚುನಾವಣೆಯಲ್ಲಿ ಬೆಂಗಳೂರಿನಲ್ಲಿ 97 ಲಕ್ಷ ಮತದಾರರು, 8802 ಮತಗಟ್ಟೆಗಳು

* ಜನಸ್ನೇಹಿ, ಭ್ರಷ್ಟಾಚಾರ ರಹಿತ ಬಿಬಿಎಂಪಿ: ಡಿಸಿಎಂ ಶಿವಕುಮಾರ್‌ ಭರವಸೆ

ಜೂನ್

* ಮಕ್ಕಳಿಗೆ ರಸ್ತೆ ಬದಿ ಗಿಡ ಬೆಳೆಸುವ ‘ಜವಾಬ್ದಾರಿ ಸ್ಪರ್ಧೆ’.

* ಹೊಸದಾಗಿ 50 ಇಂದಿರಾ ಕ್ಯಾಂಟೀನ್‌ ಪ್ರಾರಂಭಿಸಲು ಸಿಎಂ ಸೂಚನೆ. 

* ಪಾಲಿಕೆ ವಿಭಜನೆ, ಒಂದೇ ವೇದಿಕೆಯಡಿ ಎಲ್ಲ ಇಲಾಖೆಗಳಿಗೆ ‘ಗ್ರೇಟರ್‌ ಬೆಂಗಳೂರು’– ಬಿಬಿಎಂಪಿ ಪುನರ್‌ ರಚನೆಗೆ ತಜ್ಞರ ಸಮಿತಿ.

* ಸ್ಮಾರ್ಟ್‌ ಸಿಟಿ ಕಾಮಗಾರಿಗಳಿಗೆ ಮತ್ತೊಂದು ವರ್ಷ ಗಡುವು ವಿಸ್ತರಣೆ

* ಬಿಬಿಎಂಪಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಪ್ರವೇಶದಲ್ಲಿ ಶೇ 23ರಷ್ಟು ಕುಸಿತ

* ನಗರದಲ್ಲಿ ₹50 ಸಾವಿರ ಕೋಟಿ ವೆಚ್ಚದಲ್ಲಿ ಸುರಂಗ ಮಾರ್ಗ ನಿರ್ಮಿಸಲು ಚಿಂತನೆ

ಜುಲೈ

* ಶಾಲೆ ಕಟ್ಟಡ ಪೂರ್ಣಗೊಳ್ಳದೆ ಬಿಲ್‌ ಪಾವತಿ ಮಾಡಿದ ಐವರು ಎಂಜಿನಿಯರ್‌ಗಳ ಅಮಾನತು.

* 65 ಕಿ.ಮೀ ಪೆರಿಫೆರಲ್‌ ವರ್ತುಲ ರಸ್ತೆ ಯೋಜನೆಗೆ ಡೆವಲಪರ್‌ಗಳಿಂದ ಹಣ:  ಡಿಸಿಎಂ ಡಿ.ಕೆ. ಶಿವಕುಮಾರ್‌

* ಬಿಬಿಎಂಪಿ ದಕ್ಷಿಣ ವಲಯದಲ್ಲಿ 80 ಕಟ್ಟಡಗಳು ಅನಧಿಕೃತ; ನಕ್ಷೆ ಉಲ್ಲಂಘನೆ– ಕಟ್ಟಡ ತೆರವು

* ರಸ್ತೆ ನಾಮಫಲಕಗಳಲ್ಲಿ ‘ಕ್ಯೂಆರ್‌ ಕೋಡ್‌ ರೋಡ್‌ ರೀಡರ್’ ಯೋಜನೆ ಜಾರಿ.

* ‘ಬ್ರ್ಯಾಂಡ್ ಬೆಂಗಳೂರು’: 70 ಸಾವಿರಕ್ಕೂ ಹೆಚ್ಚು ಸಲಹೆ

* ಬಿಡಿಎ ಪೆರಿಫೆರಲ್‌ ವರ್ತುಲ ರಸ್ತೆ: ಪರಿಹಾರ ಹೆಚ್ಚು ಕೊಡಿ; ಇಲ್ಲ ಎನ್‌ಒಸಿ ಕೊಡಿ– ಭೂಮಾಲೀಕರ ಆಗ್ರಹ

ಆಗಸ್ಟ್‌

* ಸರ್ಕಾರದಿಂದ ₹25 ಸಾವಿರ ಕೋಟಿ ಬಾಕಿ, ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿಯಲ್ಲಿ ಗುತ್ತಿಗೆದಾರರು: ಅಧ್ಯಕ್ಷ ಕೆಂಪಣ್ಣ ಆರೋಪ

* ಬಿಬಿಎಂಪಿ ಕೇಂದ್ರ ಕಚೇರಿಯ ಗುಣಮಟ್ಟ ನಿಯಂತ್ರಣ ಪ್ರಯೋಗಾಲಯದಲ್ಲಿ ಬೆಂಕಿ. ಒಂಬತ್ತು ಮಂದಿಗೆ ತೀವ್ರ ಗಾಯ, ಮುಖ್ಯ ಎಂಜಿನಿಯರ್‌ ಶಿವಕುಮಾರ್‌ ಸಾವು.

* ಶಿವರಾಮ ಕಾರಂತ ಬಡಾವಣೆ ಬಳಿ ಐಟಿ ಹಬ್: ಡಿಸಿಎಂ ಘೋಷಣೆ

* ಷರತ್ತುಗಳನ್ನೇ ಉಲ್ಲಂಘಿಸಿದ ಜಯನಗರದ ಪ್ರತಿಷ್ಠಿತ ಕಾಸ್ಮೊಪಾಲಿಟನ್‌ ಕ್ಲಬ್‌ಗೆ ಬಿಡಿಎ ನೋಟಿಸ್‌.

* ಕಾಂಗ್ರೆಸ್‌ನ 12 ಶಾಸಕರ ಕ್ಷೇತ್ರದಲ್ಲಿ ಹೊಸ ಕಾಮಗಾರಿಗಳನ್ನು ಕೈಗೊಳ್ಳಲು ತಲಾ ₹45 ಕೋಟಿ ವೆಚ್ಚಕ್ಕೆ ಸರ್ಕಾರ ಅನುಮತಿ.

‌ಅಕ್ಟೋಬರ್‌

* ಮೂರು ವರ್ಷದ ನಂತರ ಬೀದಿನಾಯಿಗಳ ಗಣತಿ. ಡ್ರೋನ್‌ ಮೂಲಕ ವಿವಿಧೆಡೆ ಗಣತಿ.

* ಎಲ್ಲ ಆಸ್ತಿಗಳ ತೆರಿಗೆ ಮರುಪರಿಶೀಲನೆ; ಕಟ್ಟಡಗಳ ವಾಸ್ತವ ಅಳತೆ ದಾಖಲು ಹಾಗೂ ಆಸ್ತಿ  ದಾಖಲೆಗಳ ಡಿಜಿಟಲೀಕರಣಕ್ಕೆ ನಿರ್ಧಾರ

* ವಾರ್ಡ್‌ಗಳ ಮರುವಿಂಗಡಣೆ. 243ರಿಂದ 225ಕ್ಕೆ ನಿಗದಿ. ‘ಬಸನಗುಡಿ ವಾರ್ಡ್‌’ ಹೆಸರು ಬದಲಾವಣೆಗೆ ವಿರೋಧ

* ‘ಕೆರೆ ಮಿತ್ರ’ ಹಾಗೂ ‘ಹಸಿರು ಮಿತ್ರ’ರಾಗಲು ನಾಗರಕರಿಗೆ ಅವಕಾಶ.

ಸೆಪ್ಟೆಂಬರ್‌

* ಬಿಬಿಎಂಪಿ ಪ್ರತ್ಯೇಕ ಆರೋಗ್ಯ ಜಿಲ್ಲೆ: ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಘೋಷಣೆ

* ಶಾಲೆ, ಕಾಲೇಜು, ದೇವಾಲಯ ಆವರಣದಲ್ಲಿ ಏಕಬಳಕೆ ಪ್ಲಾಸ್ಟಿಕ್‌ ನಿಷೇಕ್ಕೆ ಸೂಚನೆ

* ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘಕ್ಕೆ ಚುನಾವಣೆ. ಅಧ್ಯಕ್ಷರಾಗಿ ಅಮೃತ್‌ರಾಜ್ ಅವಿರೋಧ ಆಯ್ಕೆ.

* ಬಿಬಿಎಂಪಿ ಗುತ್ತಿಗೆದಾರರಿಗೆ ಶೇ 75ರಷ್ಟು ಬಿಲ್‌ ಪಾವತಿಗೆ ನಿರ್ಧಾರ

* ಸಾವಿರಾರು ಪಿಒಪಿ ಗಣೇಶ ಮೂರ್ತಿಗಳ ವಿಸರ್ಜನೆ

ನವೆಂಬರ್‌

* ನಗರದ ಹೊರವಲಯದಲ್ಲಿ ನಾಲ್ಕು ದಿನ ಭಯ ಹುಟ್ಟಿಸಿದ್ದ ಚಿರತೆಗೆ ಗುಂಡು

* ನಗರದ ಪ್ರಥಮ ಹಮಾಮಾನ ಕ್ರಿಯಾಯೋಜನೆ (ಸಿಎಪಿ) ಕರಡು ಸಿದ್ಧತೆ ಸಜ್ಜು.

* ಪಾರಂಪರಿಕ ಜಾಗಗಳು, ಹಸಿರು ವನಗಳ ಬಗ್ಗೆ ಸಮೀಕ್ಷೆಗೆ ಸೂಚನೆ

* ಬಿಬಿಎಂಪಿ ಸಂಘದ ವತಿಯಿಂದ ನೇಪಾಳದ ಕಠ್ಮಂಡುವಿನಲ್ಲಿ ‘ಅಂತರರಾಷ್ಟ್ರೀಯ ಕರ್ನಾಟಕ ರಾಜ್ಯೋತ್ಸವ’

ಡಿಸೆಂಬರ್

* 9 ಹೈ ಟ್ರಾಫಿಕ್‌ ಡೆನ್ಸಿಟಿ ಕಾರಿಡಾರ್‌ಗಳ ಕಾಮಗಾರಿ ಆರಂಭಿಸಲು ಸರ್ಕಾರ ಅನುಮೋದನೆ

* ಅರ್ಧಕ್ಕೆ ನಿಂತಿದ್ದ ಈಜಿಪುರ ಎಲಿವೇಟೆಡ್‌ ಕಾರಿಡಾರ್‌ ಯೋಜನೆ ಕಾಮಗಾರಿಗೆ ಚಾಲನೆ

* ಆಸ್ತಿಗಳ ದಾಖಲೆಗಳ ಡಿಜಿಟಲೀಕರಣಕ್ಕೆ ನಿರ್ಧಾರ

* ಇಂದಿರಾ ಕ್ಯಾಂಟೀನ್‌ನಲ್ಲಿ ಮುದ್ದೆ ಸೊಪ್ಪಿನ ಸಾರು ಸೇರಿದಂತೆ ಹೊಸ ಮೆನುಗೆ ಅನುಮತಿ

* ರಾಜಕಾಲುವೆ, ಕೆರೆಗಳ ಒತ್ತುವರಿ ತೆರವಿಗೆ ಕಂದಾಯ ಇಲಾಖೆಯಿಂದ ಅಸಹಕಾರ– ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್‌

* 2019–20ರಿಂದ 2022–23ನೇ ಸಾಲಿನಲ್ಲಿ ನಡೆದಿದ್ದ ಕಾಮಗಾರಿಗಳ ಅಕ್ರಮ ತನಿಖೆಗೆ ರಚಿಸಿದ್ದ ನಾಲ್ಕು ವಿಶೇಷ ತನಿಖಾ ಸಮಿತಿ (ಎಸ್‌ಐಟಿ) ರದ್ದು

* ₹754 ಕೋಟಿ ವೆಚ್ಚದಲ್ಲಿ 61 ಕಿ.ಮೀ ರಸ್ತೆ ವೈಟ್‌ ಟಾಪಿಂಗ್‌ಗೆ ಟೆಂಡರ್‌

* ಬಿಬಿಎಂಪಿ ಶಾಲೆಗಳಲ್ಲಿ ಶಿಕ್ಷಣ– ಶಿಕ್ಷಣ ಇಲಾಖೆಗೆ ಜವಾಬ್ದಾರಿ

ಬಾಕಿ ಮೊತ್ತ ಬಿಡುಗಡೆ ಹಾಗೂ ಇತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಗುತ್ತಿಗೆದಾರರು ಬೃಹತ್ ಪ್ರತಿಭಟನೆ ನಡೆಸಿದ್ದರು
ಸ್ಯಾಂಕಿ ಕೆರೆ ತಂಡದ ಸದಸ್ಯರಿಂದ ‘ಸ್ಯಾಂಕಿ ಫ್ಲೈ ಓವರ್ ಯೋಜನೆ’ಗೆ ವಿರೋಧ
ಇಂದಿರಾ ಕ್ಯಾಂಟೀನ್‌
ಬಾಲಭವನದ ಪುಟಾಣಿ ರೈಲು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.