ಬೆಂಗಳೂರು: ಅಂಧ ವಿದ್ಯಾರ್ಥಿಗಳು ತರಗತಿಗಳಲ್ಲಿ ಎಲ್ಲ ಮಕ್ಕಳೊಂದಿಗೆ ಕುಳಿತು, ಶೈಕ್ಷಣಿಕವಾಗಿ ಪ್ರಗತಿ ಹೊಂದಲು ಇಲ್ಲಿನ ಅಂತರರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯ (ಐಐಐಟಿಬಿ) ವಿದ್ಯಾರ್ಥಿಗಳು ವಿಶಿಷ್ಟ ಸಾಧನ ಅಭಿವೃದ್ಧಿಪಡಿಸಿದ್ದಾರೆ. ಈ ಸಾಧನದ ನೆರವಿನಿಂದ ಅಂಧ ಮಕ್ಕಳು ಸಹ ಬರವಣಿಗೆಯನ್ನು ಸುಲಭವಾಗಿ ಗ್ರಹಿಸಬಹುದಾಗಿದೆ.
‘ಸಿಸ್ಟಮ್ ಆ್ಯಂಡ್ ಮೆಥಡ್ ಫಾರ್ ಅಸಿಸ್ಟಿಂಗ್ ವಿಶುವಲಿ ಇಂಪೇರ್ಡ್’ ಶೀರ್ಷಿಕೆಯಡಿ ಈ ಸಾಧನವನ್ನು ಸಿದ್ಧಪಡಿಸಲಾಗಿದೆ. ಐಐಐಟಿಬಿಯ ಎಂ.ಟೆಕ್ ಅಂತಿಮ ವರ್ಷದ ವಿದ್ಯಾರ್ಥಿ ಮಯಾಂಕ್ ಕಾಬ್ರಾ ನೇತೃತ್ವದಲ್ಲಿ ಈ ಸಾಧನವನ್ನು ಅಭಿವೃದ್ಧಿಪಡಿಸಲಾಗಿದ್ದು, ಈ ಸಾಧನದ ಹಕ್ಕುಸ್ವಾಮ್ಯವನ್ನು ಅವರು ಹೊಂದಿದ್ದಾರೆ. ಇದು ಅಂಧರ ಕೈ ಬೆರಳುಗಳಿಗೆ ಅಳವಡಿಸುವ ಸಾಧನವಾಗಿದ್ದು, ಇದಕ್ಕೆ ‘ಹ್ಯಾಪ್ಟಿಕ್ ತಂತ್ರಜ್ಞಾನ’ ಬಳಸಿಕೊಳ್ಳಲಾಗಿದೆ. ಇದರಿಂದಾಗಿ ಕಂಪನದ ಮೂಲಕ ಅಕ್ಷರಗಳ ಸ್ಪರ್ಶದ ಅನುಭವ ದೊರೆಯುತ್ತದೆ. ಇದು ಕಾರ್ಯನಿರ್ವಹಿಸಲು ಸ್ಮಾರ್ಟ್ ಬೋರ್ಡ್ ಹಾಗೂ ಸುಸಜ್ಜಿತ ಕೊಠಡಿ ಅಗತ್ಯ. ಇಂಟರ್ನೆಟ್ ಅಥವಾ ವೈಫೈ ಮೂಲಕ ಸ್ಮಾರ್ಟ್ ಬೋರ್ಡ್ ಹಾಗೂ ಬೆರಳಿಗೆ ಅಳವಡಿಸಿರುವ ಸಾಧನದ ನಡುವೆ ಸಂಪರ್ಕ ಸಾಧ್ಯವಾಗಲಿದೆ.
ಈ ಸಾಧನದ ಒಳಗಡೆ ಅಂಧ ವಿದ್ಯಾರ್ಥಿಯ ಬೆರಳನ್ನು ಇರಿಸಿ, ಇಂಟರ್ನೆಟ್ ಸಂಪರ್ಕದೊಂದಿಗೆ ಕಾರ್ಯಾಚರಣೆ ಪ್ರಾರಂಭಿಸಿದಲ್ಲಿ ಸ್ಮಾರ್ಟ್ ಬೋರ್ಡ್ ಮೇಲಿನ ಬರಹವನ್ನು ಅವರಿಗೆ ಗ್ರಹಿಸಲು ಸಾಧ್ಯವಾಗುತ್ತದೆ. ಈ ಸಾಧನವು ‘ಬ್ರೈಲ್ ಡಾಟ್’ ಹೊಂದಿದೆ. ಇದು ಸ್ಮಾರ್ಟ್ ಬೋರ್ಡ್‌ನಲ್ಲಿನ ಪಠ್ಯ ಅರ್ಥ ಮಾಡಿಕೊಳ್ಳಲು ನೆರವಾಗುತ್ತದೆ. ಶಿಕ್ಷಕರು ಸ್ಮಾರ್ಟ್ ಬೋರ್ಡ್ ಮೇಲೆ ಬರೆದಂತೆ ಸಾಧನದ ಒಳಗಡೆ ಕಂಪನವಾಗಲಿದ್ದು, ವಿದ್ಯಾರ್ಥಿಯ ಬೆರಳಿಗೆ ಮಾರ್ಗದರ್ಶನ ಮಾಡುತ್ತದೆ. ಇದರಿಂದಾಗಿ ನೈಜ ಸಮಯದಲ್ಲಿ ಶಿಕ್ಷಕರ ಬರಹವನ್ನು ಅನುಸರಿಸಲು ಸಾಧ್ಯವಾಗುತ್ತದೆ.
ತಡೆ ರಹಿತ ಕಲಿಕೆ: ಈ ಸಾಧನವು ಆರು ಚುಕ್ಕೆಗಳ ಬ್ರೈಲ್ ವ್ಯವಸ್ಥೆಯಡಿ ಕಾರ್ಯನಿರ್ವಹಿಸುತ್ತದೆ. ಇವುಗಳನ್ನು ನಿಯಂತ್ರಿಸಲು ಚಿಕ್ಕ ಮೋಟಾರ್ ಮತ್ತು ನಿರ್ದೇಶನಕ್ಕೆ ‘ಮೈಕ್ರೊ ಕಂಟ್ರೋಲರ್’ ಅಳವಡಿಸಲಾಗಿದೆ. ಇದರಿಂದಾಗಿ ಅಂಧರು ಕೂಡ ಎಲ್ಲ ಮಕ್ಕಳಂತೆ ಸ್ಮಾರ್ಟ್ ಬೋರ್ಡ್ ಮೇಲಿನ ಬರಹಗಳನ್ನು ಯಾವುದೇ ಅಡೆತಡೆ ಇಲ್ಲದೆಯೇ ಕಲಿಯಬಹುದಾಗಿದೆ.
‘ಆನುವಂಶಿಕ ಸಮಸ್ಯೆ, ಜೀವಸತ್ವದ ಕೊರತೆ ಸೇರಿ ವಿವಿಧ ಕಾರಣಗಳಿಂದ ಅಂಧತ್ವ ಸಮಸ್ಯೆಗೆ ಒಳಗಾಗುವ ಮಕ್ಕಳ ಸಂಖ್ಯೆ ಹೆಚ್ಚುತ್ತಿದೆ. ಅಂಧತ್ವ ಸಮಸ್ಯೆಯಿಂದ ಕಲಿಕೆಯಲ್ಲಿಯೂ ಹಿನ್ನಡೆ ಅನುಭವಿಸುತ್ತಾರೆ. ಶಾಲಾ ಪರಿಸರದಲ್ಲಿ ಇತರ ಸಹಪಾಠಿಗಳೊಂದಿಗೆ ಶಿಕ್ಷಣವನ್ನು ಮುಂದುವರಿಸಲು ಕೆಲವರಿಗೆ ಸಾಧ್ಯವಾಗುತ್ತಿಲ್ಲ. ಕಲಿಕೆಗೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಸಾಧನಗಳು ದುಬಾರಿ ಆಗಿರುವುದರಿಂದ ಎಲ್ಲರಿಗೂ ಖರೀದಿಸುವ ಶಕ್ತಿ ಇರುವುದಿಲ್ಲ. ಆದ್ದರಿಂದ ಈ ಸಾಧನವನ್ನು ಅಭಿವೃದ್ಧಿಪಡಿಸಿ, ವಿವಿಧ ಶೈಕ್ಷಣಿಕ ಸಂಸ್ಥೆಗಳಲ್ಲಿ ಇದರ ಪ್ರಾಯೋಗಿಕ ಅಧ್ಯಯನ ನಡೆಸಲಾಗಿದೆ’ ಎಂದು ಮಯಾಂಕ್ ಕಾಬ್ರಾ ತಿಳಿಸಿದರು.
Cut-off box -
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.