ಬೆಂಗಳೂರು: ವಾಣಿ ವಿಲಾಸ ಆಸ್ಪತ್ರೆಯಿಂದ ಹೆಣ್ಣು ಮಗುವನ್ನು ಅಪಹರಿಸಿ, ಮಾರಾಟ ಮಾಡಿದ್ದ ಪ್ರಕರಣದಲ್ಲಿ ಅಪರಾಧಿಗೆ ನ್ಯಾಯಾಲಯವು ನಾಲ್ಕು ವರ್ಷ ಶಿಕ್ಷೆ ಹಾಗೂ ₹5 ಸಾವಿರ ದಂಡ ವಿಧಿಸಿದೆ.
ಯಲಚೇನಹಳ್ಳಿಯ ಆಯೇಷಾ ಶಿಕ್ಷೆಗೆ ಒಳಗಾದವರು.
2020 ನವೆಂಬರ್ 11ರಂದು ವಾಣಿ ವಿಲಾಸ ಆಸ್ಪತ್ರೆಯ ತೀವ್ರ ನಿಗಾ ಘಟಕದಿಂದ(ಐಸಿಯು) ಮಗುವನ್ನು ಅಪಹರಣ ಮಾಡಲಾಗಿತ್ತು.
ವಿಶ್ವೇಶ್ವರಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರು, ಆರೋಪಿಯನ್ನು ಬಂಧಿಸಿದ್ದರು. ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಲಯವು ಪ್ರಕರಣದ ವಿಚಾರಣೆ ನಡೆಸಿ ಶಿಕ್ಷೆ ಪ್ರಕಟಿಸಿದೆ ಎಂದು ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ ಅವರು ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾಹಿತಿ ನೀಡಿದರು.
‘2020ರ ನವೆಂಬರ್ 11ರಂದು ವಿಜ್ಞಾನಪುರದ ಆರ್ಷಿಯಾ ಅವರು ಹೆರಿಗೆಗೆಂದು ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಎರಡು ದಿನ ಮಗುವಿನ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಅಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿತ್ತು. ಐಸಿಯುಗೆ ನುಗ್ಗಿದ್ದ ಆಯೇಷಾ ಮಗುವನ್ನು ಅಪಹರಣ ಮಾಡಿದ್ದಳು’ ಎಂದು ಪೊಲೀಸರು ಹೇಳಿದರು.
‘ಆಸ್ಪತ್ರೆಯಲ್ಲಿದ್ದ ಸಿಸಿಟಿವಿ ಕ್ಯಾಮೆರಾದ ದೃಶ್ಯಾವಳಿ ಆಧರಿಸಿ ಮಗು ಅಪಹರಣ ಮಾಡಿದ್ದ ಆರೋಪಿಯನ್ನು ಪತ್ತೆ ಹಚ್ಚಲಾಗಿತ್ತು. ನಂತರ, ವಶಕ್ಕೆ ಪಡೆದು ಬಂಧಿಸಲಾಗಿತ್ತು’ ಎಂದು ಮೂಲಗಳು ತಿಳಿಸಿವೆ.
‘ಆಯೇಷಾ ತಂಗಿಯೂ ಹೆರಿಗೆಗೆಂದು ಆಸ್ಪತ್ರೆಗೆ ದಾಖಲಾಗಿದ್ದರು. ಅವರನ್ನು ನೋಡಲು ಆಯೇಷಾ ಸಹ ಬಂದಿದ್ದಳು. ತಂಗಿಯನ್ನು ನೋಡಿ ವಾಪಸ್ ಬರುವಾಗ ಐಸಿಯುಗೆ ಹೋಗಿದ್ದಳು. ಅಲ್ಲಿ ಆರ್ಷಿಯಾ ಅವರ ಮಗುವಿನ ಬಳಿಗೆ ಹೋಗಿದ್ದ ಅಪರಾಧಿ, ‘ನಾನು ಮಗುವಿನ ಚಿಕ್ಕಮ್ಮ’ ಎಂದು ಆಸ್ಪತ್ರೆ ಸಿಬ್ಬಂದಿ ಬಳಿ ಹೇಳಿಕೊಂಡಿದ್ದಳು. ನಿಜವೆಂದು ನಂಬಿದ್ದ ಸಿಬ್ಬಂದಿ ಮಗುವನ್ನು ಕೊಟ್ಟಿದ್ದರು. ಮಗುವನ್ನು ಮನೆಗೆ ಕೊಂಡೊಯ್ದು ಅಬ್ದುಲ್ ರೆಹಮಾನ್ ಹಾಗೂ ಸಾನಿಯಾ ಫಾತಿಮಾ ದಂಪತಿಗೆ ₹80 ಸಾವಿರಕ್ಕೆ ಮಾರಾಟ ಮಾಡಿದ್ದಳು ಎಂಬುದು ತನಿಖೆಯಿಂದ ಗೊತ್ತಾಗಿತ್ತು’ ಎಂದು ಮೂಲಗಳು ತಿಳಿಸಿವೆ.
ಡ್ರಗ್ಸ್ ದಂಧೆ: ಸೆಪ್ಟೆಂಬರ್‌ನಲ್ಲಿ 67 ಬಂಧನ
ಬೆಂಗಳೂರು: ಸೆಪ್ಟೆಂಬರ್ ತಿಂಗಳಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಮೂವರು ವಿದೇಶಿ ಪ್ರಜೆಗಳೂ ಸೇರಿದಂತೆ 67 ಮಂದಿಯನ್ನು ನಗರದ ವಿವಿಧ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಮಾದಕ ದ್ರವ್ಯ ನಿಗ್ರಹ ಕಾಯ್ದೆಯ ಅಡಿ (ಎನ್‌ಡಿಪಿಎಸ್) 49 ಪ್ರಕರಣ ದಾಖಲು ಮಾಡಲಾಗಿದೆ. 170 ಕೆ.ಜಿ ಗಾಂಜಾ, 2 ಕೆ.ಜಿ ಅಫೀಮು, 13 ಗ್ರಾಂ ಕೋಕೆನ್, 372 ಗ್ರಾಂ ಎಂಡಿಎಂಎ, 998 ಎಕ್ಸೆಟೆಸಿ ಮಾತ್ರೆಗಳು, 1,089 ಎಲ್‌ಎಸ್‌ಡಿ ಸ್ಟ್ರಿಪ್ಸ್ ಅನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ನಗರದಲ್ಲಿ ಕಾನೂನು ಬಾಹಿರ ಚಟುವಟಿಕೆ ನಡೆಸುತ್ತಿದ್ದವರ ವಿರುದ್ಧ 196 ಪ್ರಕರಣ ದಾಖಲಿಸಿಕೊಂಡು, 343 ಮಂದಿಯನ್ನು ಬಂಧಿಸಲಾಗಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.