ADVERTISEMENT

ನಾಯಿಗಳಿಗೆ ಊಟ ಹಾಕುವುದನ್ನು ಅಡ್ಡಿಪಡಿಸಿದ್ದಕ್ಕೆ ದೂರು ನೀಡಿದ ಮಹಿಳೆ!

ಅಶೋಕನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

​ಪ್ರಜಾವಾಣಿ ವಾರ್ತೆ
Published 5 ಮೇ 2024, 15:03 IST
Last Updated 5 ಮೇ 2024, 15:03 IST
<div class="paragraphs"><p>ನಾಯಿಗಳು</p></div>

ನಾಯಿಗಳು

   

ಬೆಂಗಳೂರು: ನಾಯಿಗಳಿಗೆ ಊಟ ಹಾಕುತ್ತಿದ್ದ ಸಂದರ್ಭದಲ್ಲಿ ಅಡ್ಡಿಪಡಿಸಿದರೆಂಬ ಕಾರಣಕ್ಕೆ ಭದ್ರತಾ ಸಿಬ್ಬಂದಿ ಮೇಲೆ ಮಹಿಳೆಯೊಬ್ಬರು ದೂರು ನೀಡಿದ್ದು, ಅಶೋಕನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಪುಣೆಯ ಮಹಿಳೆ, ನಗರದಲ್ಲಿ ಆಯೋಜಿಸಿದ್ದ ಓಟದ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಬಂದಿದ್ದರು. ಏಪ್ರಿಲ್ 4ರಂದು ಬೆಳಿಗ್ಗೆ ನಡೆದಿರುವ ಘಟನೆ ಸಂಬಂಧ ಅವರು ದೂರು ನೀಡಿದ್ದಾರೆ. ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸಿದಾಗ, ಮಹಿಳೆಯ ಆರೋಪಕ್ಕೆ ಯಾವುದೇ ಪುರಾವೆಗಳು ಸಿಕ್ಕಿಲ್ಲ’ ಎಂದು ಪೊಲೀಸರು ಹೇಳಿದರು.

ADVERTISEMENT

‘ಬ್ರಿಗೇಡ್ ರಸ್ತೆ ಬಳಿಯ ಸ್ಯಾಮ್‌ಸಂಗ್ ಹೌಸ್ ಮಳಿಗೆ ಸಮೀಪದಲ್ಲಿ ಓಡಾಡುತ್ತಿದ್ದ ನಾಯಿಗಳಿಗೆ ಮಹಿಳೆ ಆಹಾರ ಹಾಕಿದ್ದರು. ಸ್ಥಳದಲ್ಲಿದ್ದ ಭದ್ರತಾ ಸಿಬ್ಬಂದಿ, ಮಹಿಳೆಯನ್ನು ಪ್ರಶ್ನಿಸಿದ್ದರು. ಊಟ ಹಾಕದಂತೆ ತಾಕೀತು ಮಾಡಿದ್ದರು. ಜೊತೆಗೆ, ಎದೆಗೆ ಕೈಯಿಂದ ಒತ್ತಿ ತಳ್ಳಿದ್ದರೆಂದು ಮಹಿಳೆ ಆರೋಪಿಸಿದ್ದರು’ ಎಂದು ಪೊಲೀಸರು ತಿಳಿಸಿದರು.

‘ಮಹಿಳೆ ದೂರಿನಡಿ ಪ್ರಕರಣ ದಾಖಲಿಸಿಕೊಂಡು, ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಲಾಯಿತು. ಆದರೆ, ಮಹಿಳೆಯನ್ನು ತಳ್ಳಾಡಿದ್ದ ದೃಶ್ಯ ಇರಲಿಲ್ಲ. ಪರಸ್ಪರ ಮಾತಿನ ಚಕಮಕಿ ನಡೆದಿದ್ದು ಮಾತ್ರ ಸೆರೆಯಾಗಿದೆ. ಮಹಿಳೆ ಮಾಡಿರುವ ಆರೋಪ ಸುಳ್ಳು ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತಿದ್ದು, ಕ್ಯಾಮೆರಾ ದೃಶ್ಯ ಆಧರಿಸಿ ತನಿಖೆ ಮುಂದುವರಿಸಲಾಗಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.