ADVERTISEMENT

ಬಯೋಮೆಟ್ರಿಕ್ ಸೋರಿಕೆ: ಹಣ ದೋಚುತ್ತಿರುವ ವಂಚಕರು

ಎಇಪಿಎಸ್ ವ್ಯವಸ್ಥೆಯಲ್ಲಿ ಲೋಪ, ನೋಂದಣಾಧಿಕಾರಿ ಕಚೇರಿಗಳಲ್ಲಿ ದತ್ತಾಂಶ ಸೋರಿಕೆ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2023, 16:08 IST
Last Updated 10 ಅಕ್ಟೋಬರ್ 2023, 16:08 IST
ಬೆರಳಚ್ಚು ಸ್ಕ್ಯಾನರ್ (ಆಧಾರ್ ಬಯೋಮೆಟ್ರಿಕ್) ಮೂಲಕ ದೃಢೀಕರಣ ವ್ಯವಸ್ಥೆ...
ಬೆರಳಚ್ಚು ಸ್ಕ್ಯಾನರ್ (ಆಧಾರ್ ಬಯೋಮೆಟ್ರಿಕ್) ಮೂಲಕ ದೃಢೀಕರಣ ವ್ಯವಸ್ಥೆ...   

ಬೆಂಗಳೂರು: ಬ್ಯಾಂಕ್ ಹಾಗೂ ಎಟಿಎಂ ಕೇಂದ್ರಗಳಿಗೆ ಹೋಗದೇ ಕೇವಲ ಆಧಾರ್ ಬಳಸಿಕೊಂಡು ಹಣ ಪಡೆಯಲು ದೇಶದಲ್ಲಿ ಎಇಪಿಎಸ್ (ಆಧಾರ್‌ ಆಧಾರಿತ ಹಣ ಪಾವತಿ ವ್ಯವಸ್ಥೆ) ಜಾರಿಗೆ ತರಲಾಗಿದ್ದು, ಈ ವ್ಯವಸ್ಥೆಯನ್ನು ದುರುಪಯೋಗ ಮಾಡಿಕೊಂಡಿರುವ ಸೈಬರ್ ವಂಚಕರು ಜನರ ಖಾತೆಗಳಲ್ಲಿರುವ ಹಣ ದೋಚುತ್ತಿದ್ದಾರೆ.

ಉಪ ನೋಂದಣಾಧಿಕಾರಿ ಕಚೇರಿ ಸೇರಿದಂತೆ ಹಲವು ಕಡೆಯ ಕೆಲಸಗಳಿಗಾಗಿ ಆಧಾರ್ ಬಯೋಮೆಟ್ರಿಕ್ (ಬೆರಳಚ್ಚು) ಮಾಹಿತಿ ಹಂಚಿಕೊಳ್ಳುತ್ತಿರುವ ಜನರ ಖಾತೆಯಲ್ಲಿರುವ ಹಣ ಇವರ ಅರಿವಿಗೆ ಬಾರದಂತೆ ಕಡಿತವಾಗುತ್ತಿದೆ. ಇದರಿಂದ ಆತಂಕಗೊಳ್ಳುತ್ತಿರುವ ಜನ, ಪೊಲೀಸ್ ಠಾಣೆಗೆ ದೂರು ನೀಡುತ್ತಿದ್ದಾರೆ.

ಜನರ ವೈಯಕ್ತಿಕ ಮಾಹಿತಿಯುಳ್ಳ ಆಧಾರ್ ಬಯೋಮೆಟ್ರಿಕ್ ಸೌಲಭ್ಯವನ್ನು ಬಳಸಿಕೊಂಡು ಸೈಬರ್ ವಂಚಕರು, ಜನರಿಗೆ ಅರಿವಿಲ್ಲದಂತೆ ಖಾತೆಯಲ್ಲಿರುವ ಹಣವನ್ನು ಕದಿಯುತ್ತಿದ್ದಾರೆ. ಇಂಥ ವಂಚನೆ ಜಾಲ, ರಾಜ್ಯದೆಲ್ಲೆಡೆ ವ್ಯಾಪಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

‘ಪ್ರತಿಯೊಬ್ಬರು ಬ್ಯಾಂಕ್ ಖಾತೆಗೆ ಆಧಾರ್ ಜೋಡಿಸುವುದನ್ನು ಕಡ್ಡಾಯ ಮಾಡಲಾಗಿದೆ. ಇದರ ಜೊತೆಯಲ್ಲೇ ದೇಶವ್ಯಾಪಿ ಎಇಪಿಎಸ್ ಜಾರಿಗೊಳಿಸಲಾಗಿದೆ. ಬ್ಯಾಂಕ್ ಖಾತೆಗೆ ಜೋಡಣೆ ಆಗಿರುವ ಆಧಾರ್ ಬಯೋಮೆಟ್ರಿಕ್ ಬಳಸಿಕೊಂಡು, ದೇಶದ ಯಾವುದೇ ಭಾಗದಲ್ಲಾದರೂ ಅಂಚೆ ಕಚೇರಿ ಸಿಬ್ಬಂದಿ ಮೂಲಕ ಹಣ ಪಡೆಯಲು ಅವಕಾಶ ಕಲ್ಪಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಕನಿಷ್ಠ ₹ 100 – ಗರಿಷ್ಠ ₹ 10 ಸಾವಿರದವರೆಗೂ ಹಣ ಪಡೆಯಲು ಎಇಪಿಎಸ್ ವ್ಯವಸ್ಥೆಯಲ್ಲಿ ಅವಕಾಶವಿದೆ. ಗ್ರಾಮಾಂತರ ಪ್ರದೇಶಗಳ ಜನರ ಅನುಕೂಲಕ್ಕಾಗಿ ಈ ವ್ಯವಸ್ಥೆ ರೂಪಿಸಲಾಗಿದೆ. ಜನರ ಬಯೋಮೆಟ್ರಿಕ್ ಮಾಹಿತಿ ಪಡೆಯುವ ಬ್ಯಾಂಕ್ ಅಥವಾ ಅಂಚೆ ಕಚೇರಿ ಸಿಬ್ಬಂದಿ, ಸ್ಥಳದಲ್ಲೇ ಹಣ ವಿತರಿಸುತ್ತಿದ್ದಾರೆ. ಈ ವ್ಯವಸ್ಥೆಯಲ್ಲಿ ಲೋಪಗಳಿದ್ದು, ಅದನ್ನು ಬಳಸಿಕೊಂಡು ಸೈಬರ್ ವಂಚಕರು ಹಣ ದೋಚುತ್ತಿದ್ದಾರೆ’ ಎಂದು ಅನುಮಾನ ವ್ಯಕ್ತಪಡಿಸಿದರು.

ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಸೋರಿಕೆ: ‘ರಾಜ್ಯದ ಹಲವು ಉಪ ನೋಂದಣಾಧಿಕಾರಿ ಕಚೇರಿಗಳಲ್ಲಿ ಜನರ ವೈಯಕ್ತಿಕ ದತ್ತಾಂಶ ಸೋರಿಕೆಯಾಗುತ್ತಿದ್ದು, ಇದರಿಂದ ಖಾತೆಯಲ್ಲಿರುವ ಹಣ ಕಳೆದುಕೊಳ್ಳುತ್ತಿದ್ದೇವೆ’ ಎಂದು ಆರೋಪಿಸಿ ಹಲವರು ಪೊಲೀಸ್ ಠಾಣೆಗಳಿಗೆ ದೂರು ನೀಡಿದ್ದಾರೆ.

ಅಶೋಕನಗರ ಠಾಣೆಗೆ ದೂರು ನೀಡಿರುವ ಸಾಫ್ಟ್‌ವೇರ್ ಎಂಜಿನಿಯರ್‌ರೊಬ್ಬರು, ‘ಆಸ್ತಿ ವರ್ಗಾವಣೆಗೆ ಸಂಬಂಧಪಟ್ಟಂತೆ ಸೆ. 30ರಂದು ಕೋರಮಂಗಲ ಉಪ ನೋಂದಣಾಧಿಕಾರಿ ಕಚೇರಿಗೆ ಹೋಗಿ ಬಯೋಮೆಟ್ರಿಕ್ ಹಾಗೂ ಆಧಾರ್ ನೀಡಿದ್ದೆ. ಇದಾದ ಕೆಲವೇ ದಿನಗಳಲ್ಲಿ ನನ್ನ ಖಾತೆಯಿಂದ ಹಂತ ಹಂತವಾಗಿ ₹ 22 ಸಾವಿರ ಕಡಿತವಾಗಿದೆ. ಯಾವುದೇ ಒನ್‌ ಟೈಂ ಪಾಸ್‌ವರ್ಡ್‌ (ಒಟಿಪಿ) ಸಹ ನೀಡಿರಲಿಲ್ಲ’ ಎಂದಿದ್ದಾರೆ.

‘ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ನೀಡಿದ್ದ ಬಯೋಮೆಟ್ರಿಕ್ ಹಾಗೂ ಆಧಾರ್ ಮಾಹಿತಿ ದುರುಪಯೋಗಪಡಿಸಿಕೊಂಡು, ಹಣ ದೋಚಿರುವ ಅನುಮಾನವಿದೆ’ ಎಂದು ಅವರು ತಿಳಿಸಿದ್ದಾರೆ.

ಹೈಗ್ರೌಂಡ್ಸ್ ಠಾಣೆಗೆ ದೂರು ನೀಡಿರುವ ಮಹಿಳೆಯೊಬ್ಬರು, ‘ದಾವಣಗೆರೆ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಇತ್ತೀಚೆಗೆ ಬಯೋಮೆಟ್ರಿಕ್ ಮಾಹಿತಿ ಹಂಚಿಕೊಂಡಿದ್ದೆ. ಇದಾದ ಕೆಲ ದಿನಗಳಲ್ಲಿ, ನನ್ನ ಖಾತೆಯಿಂದ ಎಇಪಿಎಸ್ ಮೂಲಕ ₹ 10 ಸಾವಿರ ಕಡಿತವಾಗಿದೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.