ADVERTISEMENT

ಬಿಡಿಎ ವಸತಿ ಸಮುಚ್ಚಯಕ್ಕೆ ವಿದ್ಯುತ್‌ ಕಟ್‌

​ಪ್ರಜಾವಾಣಿ ವಾರ್ತೆ
Published 10 ಮೇ 2019, 20:30 IST
Last Updated 10 ಮೇ 2019, 20:30 IST
   

ಬೆಂಗಳೂರು: ದಾಸನಪುರ ಹೋಬಳಿಯ ಆಲೂರು ಸಮೀಪ ಬಿಡಿಎ ನಿರ್ಮಿಸಿರುವ ವಸತಿ ಸಮುಚ್ಚಯದಲ್ಲಿ ಮೂರು ದಿನಗಳಿಂದ ವಿದ್ಯುತ್‌ ಸರಬರಾಜು ಕಡಿತಗೊಂಡಿದೆ. ಇದರಿಂದಾಗಿ ಇಲ್ಲಿನ 40 ಕ್ಕೂ ಹೆಚ್ಚು ಮನೆಗಳಲ್ಲಿನ ನಿವಾಸಿಗಳು ತೊಂದರೆ ಅನುಭವಿಸುತ್ತಿದ್ದಾರೆ.

ವಿದ್ಯುತ್‌ ಇಲ್ಲದೆ ಮನೆಯಲ್ಲಿನ ಒಂದೂ ಎಲೆಕ್ಟ್ರಾನಿಕ್‌ ಉಪಕರಣಗಳು ಕಾರ್ಯನಿರ್ವಹಿಸುತ್ತಿಲ್ಲ. ನೀರು ಶುದ್ಧೀಕರಣ ಘಟಕಗಳು ಚಾಲನೆಗೊಳ್ಳದೆ ಜನರು ಶುದ್ಧ ಕುಡಿಯುವ ನೀರನ್ನು ತರಲು ಬೇರೆಡೆಗೆ ಹೋಗಬೇಕಾಗಿದೆ.

ವಿದ್ಯುತ್‌ ಕಡಿತದಿಂದಾಗಿ ಸಂಜೆಯಾಗುತ್ತಲೇ ಈ ಸಮುಚ್ಚಯಕ್ಕೆ ಹೋಗುವ ದಾರಿಯೇ ಕಾಣದಾಗುತ್ತದೆ. ‘ಪ್ರದೇಶದಲ್ಲಿ ಹಾವುಗಳು ಹೆಚ್ಚಿವೆ. ಕತ್ತಲಲ್ಲಿ ಆ ವಿಷಜಂತುಗಳು ಮನೆಗೆ ನುಗ್ಗಿದರೂ ಗೊತ್ತಾಗುವುದಿಲ್ಲ. ಮನೆಯಲ್ಲಿ ಮಕ್ಕಳು–ಹಿರಿಯ ನಾಗರಿಕರು ಇದ್ದಾರೆ. ಈ ಸಮಸ್ಯೆಯಿಂದ ಜೀವಹಾನಿಯಾಗುವ ಮುನ್ನವೇ ವಿದ್ಯುತ್‌ ಸೌಲಭ್ಯ ಕಲ್ಪಿಸಬೇಕು’ ಎಂದು ಸ್ಥಳೀಯರಾದ ನಂದಕುಮಾರ್‌ ಒತ್ತಾಯಿಸಿದರು.

ADVERTISEMENT

‘ಸಮುಚ್ಛಯ ನಿರ್ಮಿಸುವ ಗುತ್ತಿಗೆದಾರರು ನಿಗದಿತ ಮೊತ್ತವನ್ನು ಜಮೆ ಮಾಡಿ ನಿರ್ದಿಷ್ಟ ಕಾಲಾವಧಿಗೆ ವಿದ್ಯುತ್‌ ಸಂಪರ್ಕ ಪಡೆದಿದ್ದರು. ಈಗ ಆ ಅವಧಿ ಮುಗಿದಿದೆ. ಈಗ ಮತ್ತೊಮ್ಮೆ ಮೊತ್ತವನ್ನು ಜಮೆ ಮಾಡಿದರೆ ಮಾತ್ರ ವಿದ್ಯುತ್‌ ಸರಬರಾಜು ಮಾಡುತ್ತೇವೆ ಎಂದು ಬೆಸ್ಕಾಂ ಅಧಿಕಾರಿಗಳು ಹೇಳುತ್ತಿದ್ದಾರೆ’ ಎಂದರು.

‘ಬೆಸ್ಕಾಂನ ವಿದ್ಯುತ್‌ ಸಂಪರ್ಕ ಪಡೆಯಲು, ಮೀಟರ್‌ ಜೋಡಿಸಲು, ಮೊತ್ತ ಜಮೆ ಮಾಡಲು ಬಿಡಿಎ ಅಧಿಕಾರಿಗಳು ಪ್ರತಿ ಮನೆಯಿಂದ ₹ 91,250 ಸಂಗ್ರಹಿಸಿದ್ದಾರೆ. ಕೇಳಿದರೆ, ‘ಬೆಸ್ಕಾಂ ಎಂಜಿನಿಯರ್‌ಗಳು ಬಂದು ಸ್ಥಳ ಪರಿಶೀಲನೆ ಮಾಡಬೇಕು. ಆ ಬಳಿಕವೇ ಮೀಟರ್‌ಗಳನ್ನು ಜೋಡಿಸಲಾಗುತ್ತದೆ’ ಎಂದು ಸಬೂಬು ಹೇಳುತ್ತಿದ್ದಾರೆ’ ಎಂದು ಅವರು ತಿಳಿಸಿದರು.

‘ತಿಂಗಳಿಗೆ ₹ 1,500 ಕೊಡಿ, ವಿದ್ಯುತ್‌ ಕಡಿತಗೊಳ್ಳದಂತೆ ನೋಡಿಕೊಳ್ಳುತ್ತೇನೆ’ ಎಂದು ಗುತ್ತಿಗೆದಾರ ಹೇಳುತ್ತಿದ್ದಾನೆ. ಈ ಬಿಡಿಎ, ಬೆಸ್ಕಾಂ, ಗುತ್ತಿಗೆದಾರರ ನಡುವೆ ನಿವಾಸಿಗಳು ಮೂಲಸೌಕರ್ಯಗಳಿಲ್ಲದೆ ನಲುಗಿ ಹೋಗಿದ್ದಾರೆ’ ಎಂದು ಅವರು ದೂರಿದರು.

‘ಈ ಸಮುಚ್ಚಯದಲ್ಲಿ ಕಸದ ಸಮಸ್ಯೆ ಇದೆ. ಬೀದಿ ನಾಯಿಗಳ ಕಾಟವೂ ಇದೆ’ ಎಂದು ಸಮಸ್ಯೆಗಳನ್ನು ತಿಳಿಸಿದರು.

ಬೆಸ್ಕಾಂನ ಕಾರ್ಯನಿರ್ವಾಹಕ ಎಂಜಿನಿಯರ್‌ ಅವರಿಗೆ ಕರೆ ಮಾಡಿದಾಗ, ಸಮಸ್ಯೆ ಹೇಳುತ್ತಿದ್ದಂತೆ ಕರೆಯನ್ನು ಕಡಿತಗೊಳಿಸಿದರು.

ಈ ಸಮುಚ್ಚಯದಲ್ಲಿ 350ಕ್ಕೂ ಹೆಚ್ಚು ಮನೆಗಳು, ವಿಲ್ಲಾಗಳು ನಿರ್ಮಾಣಗೊಳ್ಳುತ್ತಿವೆ. ಸದ್ಯ ಪೂರ್ಣಗೊಂಡಿರುವ 40 ಮನೆಗಳಲ್ಲಿ ಜನ ನೆಲೆಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.