ADVERTISEMENT

ಆರೋಗ್ಯ ಸೇವೆ ಕೊಡಲಾಗದಿದ್ದರೆ ರಾಜೀನಾಮೆ ನೀಡಿ: ದಿನೇಶ್ ಗುಂಡೂರಾವ್‌ಗೆ AAP ಆಗ್ರಹ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2024, 15:52 IST
Last Updated 15 ನವೆಂಬರ್ 2024, 15:52 IST
ದಿನೇಶ್ ಗುಂಡೂರಾವ್‌
ದಿನೇಶ್ ಗುಂಡೂರಾವ್‌   

ಬೆಂಗಳೂರು: ‘ಆಮ್‌ ಆದ್ಮಿ ಪಕ್ಷದ (ಎಎಪಿ) ಸರ್ಕಾರವು ನವದೆಹಲಿಯಲ್ಲಿ ಯಶಸ್ವಿಯಾಗಿ ನಡೆಸುತ್ತಿರುವ ‘ನಮ್ಮ ಮೊಹಲ್ಲಾ ಕ್ಲಿನಿಕ್’ ಮಾದರಿಯ ‘ನಮ್ಮ ಕ್ಲಿನಿಕ್‌’ಗಳು ರಾಜ್ಯದಲ್ಲಿ ಸಂಪೂರ್ಣ ವಿಫಲವಾಗಿವೆ’ ಎಂದು ಆರೋಪಿಸಿರುವ ಎಎಪಿ ರಾಜ್ಯ ಘಟಕ, ‘ಜನರಿಗೆ ಆರೋಗ್ಯ ಸೇವೆ ಕೊಡಲು ಸಾಧ್ಯವಾಗದಿದ್ದರೆ ರಾಜೀನಾಮೆ ಕೊಡಿ’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರನ್ನು ಆಗ್ರಹಿಸಿದೆ. 

ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ರಾಜ್ಯ ಘಟಕದ ಕಾರ್ಯದರ್ಶಿ ಉಷಾ ಮೋಹನ್, ‘ನಮ್ಮ ಕ್ಲಿನಿಕ್‌ಗಳಿಗೆ ಮೂರು ವರ್ಷಗಳಲ್ಲಿ ₹ 500 ಕೋಟಿಗೂ ಹೆಚ್ಚು ಖರ್ಚು ಮಾಡಿದ್ದರೂ ಜನರಿಗೆ ಅನುಕೂಲವಾಗಿಲ್ಲ. ದೆಹಲಿಯಲ್ಲಿ ಒಂಬತ್ತು ವರ್ಷಗಳಿಂದ ಎಎಪಿ ಸರ್ಕಾರ ನಡೆಸುತ್ತಿರುವ ಮೊಹಲ್ಲಾ ಕ್ಲಿನಿಕ್‌ಗಳು ಲಕ್ಷಾಂತರ ಜನರಿಗೆ ಉತ್ತಮ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುತ್ತಿವೆ. ರಾಜ್ಯದಲ್ಲಿ ಅಲ್ಲಿಯ ಯೋಜನೆ ಅನುಸರಿಸಿದರೂ, ಗುಣಮಟ್ಟದ ಸೇವೆ ಒದಗಿಸುವಲ್ಲಿ ಸರ್ಕಾರ ವಿಫಲವಾಗಿದೆ’ ಎಂದು ದೂರಿದರು.

‘2020ರಲ್ಲಿ ಎಎಪಿ ವತಿಯಿಂದ ಬೆಂಗಳೂರಿನ ಶಾಂತಿ ನಗರದಲ್ಲಿ ಆಮ್ ಆದ್ಮಿ ಕ್ಲಿನಿಕ್ ಸ್ಥಾಪನೆ ಮಾಡಲಾಗಿದೆ. ನವದೆಹಲಿಯ ಮೊಹಲ್ಲಾ ಕ್ಲಿನಿಕ್‌ನಂತೆ ಈ ಕ್ಲಿನಿಕ್ ಕೂಡ ಜನರಿಗೆ ಉತ್ತಮ ಚಿಕಿತ್ಸೆಯನ್ನು ನೀಡಿದೆ. ಒಂದು ವರ್ಷದಲ್ಲಿ 10 ಸಾವಿರಕ್ಕೂ ಹೆಚ್ಚು ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. ನಗರದಲ್ಲಿ ಇಂತಹ ಕ್ಲಿನಿಕ್‌ಗಳ ಅಗತ್ಯತೆಯನ್ನು ಆಮ್ ಆದ್ಮಿ ಕ್ಲಿನಿಕ್ ತೋರಿಸಿದೆ’ ಎಂದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.