ADVERTISEMENT

ಕೋವಿಡ್‌ ಮೃತರ ಸಂಖ್ಯೆ ಮರೆಮಾಚುತ್ತಿರುವ ಸರ್ಕಾರ: ಎಎಪಿ ರಾಜ್ಯ ಮಾಧ್ಯಮ ಸಂಚಾಲಕ

ಎಎಪಿ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್‌ ವಿ.ಸದಂ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2021, 11:48 IST
Last Updated 19 ಆಗಸ್ಟ್ 2021, 11:48 IST
ಆಮ್‌ ಆದ್ಮಿ ಪಕ್ಷದ (ಎಎಪಿ) ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್‌ ವಿ.ಸದಂ ಮಾತನಾಡಿದರು. ವೀಣಾ ಸೆರ್ರಾವ್‌ ಇದ್ದಾರೆ.
ಆಮ್‌ ಆದ್ಮಿ ಪಕ್ಷದ (ಎಎಪಿ) ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್‌ ವಿ.ಸದಂ ಮಾತನಾಡಿದರು. ವೀಣಾ ಸೆರ್ರಾವ್‌ ಇದ್ದಾರೆ.   

ಬೆಂಗಳೂರು: ‘ರಾಜ್ಯ ಸರ್ಕಾರವು ಕೋವಿಡ್‌ ಮೊದಲ ಹಾಗೂ ಎರಡನೇ ಅಲೆಯ ವೇಳೆ ಸೋಂಕಿತರಿಗೆ ಹಾಸಿಗೆ ಮತ್ತು ಆಮ್ಲಜನಕ ವ್ಯವಸ್ಥೆ ಕಲ್ಪಿಸಲು ನಿರ್ಲಕ್ಷಿಸಿತು. ಇದರಿಂದ ಅನೇಕರು ಪ್ರಾಣ ಕಳೆದುಕೊಂಡರು. ಹಾಗೆ ಸತ್ತವರ ನಿಖರ ಸಂಖ್ಯೆಯನ್ನು ಸರ್ಕಾರ ಮರೆಮಾಚುತ್ತಿದೆ’ ಎಂದು ಆಮ್‌ ಆದ್ಮಿ ಪಕ್ಷದ (ಎಎಪಿ) ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್‌ ವಿ.ಸದಂ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು ‘ಆರೋಗ್ಯ ಇಲಾಖೆಯ ಕೋವಿಡ್‌ ಬುಲೆಟಿನ್‌ ಪ್ರಕಾರ ಆಗಸ್ಟ್‌ 2ರವರೆಗೆ ರಾಜ್ಯದಲ್ಲಿ 36 ಸಾವಿರ ಜನ ಮೃತಪಟ್ಟಿದ್ದಾರೆ. ಇಲಾಖೆಯು ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ಸಲ್ಲಿಸಿರುವ ವರದಿಯಲ್ಲಿ ಕೇವಲ 14,371 ಮಂದಿ ಸಾವಿಗೀಡಾಗಿರುವುದಾಗಿ ತಿಳಿಸಲಾಗಿದೆ. ಇಲಾಖೆ ನೀಡಿರುವ ವ್ಯತಿರಿಕ್ತ ಅಂಕಿ ಅಂಶಗಳನ್ನು ಗಮನಿಸಿದರೆ ರಾಜ್ಯ ಸರ್ಕಾರ ಸುಳ್ಳು ಹೇಳುತ್ತಿರುವುದು ಸ್ಪಷ್ಟವಾಗುತ್ತದೆ. ರಾಜ್ಯದಲ್ಲಿ ಈವರೆಗೆ 3 ಲಕ್ಷ ಜನ ಕೋವಿಡ್‌ನಿಂದ ಸತ್ತಿರುವುದಾಗಿ ಕೆಲ ಮಾಧ್ಯಮಗಳಲ್ಲಿ ವರದಿಯಾಗಿದೆ. ವಿರೋಧ ಪಕ್ಷದವರೂ ಇದನ್ನೇ ಹೇಳುತ್ತಿದ್ದಾರೆ’ ಎಂದರು.

‘ಕೋವಿಡ್‌ನಿಂದಾಗಿ ಜನ ಬೀದಿಗಳಲ್ಲಿ ಪ್ರಾಣ ಕಳೆದುಕೊಳ್ಳುತ್ತಿದ್ದಾಗ ನೆರವಿಗೆ ಬಾರದ ಬಿಜೆಪಿ ನಾಯಕರು ಈಗ ಜನಾಶೀರ್ವಾದ ಯಾತ್ರೆಯ ನೆಪದಲ್ಲಿ ಸುಳ್ಳುಗಳನ್ನೇ ಪ್ರಚಾರ ಮಾಡುತ್ತಿದ್ದಾರೆ. ಅದರ ಬದಲು ಹೆಣಾಶೀರ್ವಾದದ ಹೆಸರಿನಲ್ಲಿ ಸ್ಮಶಾನಕ್ಕೆ ಹೋಗಿ, ಕೋವಿಡ್‌ ಮೃತರ ಎಷ್ಟು ಶವಗಳು ಅಲ್ಲಿಗೆ ಬಂದಿವೆ ಎಂದು ವಿಚಾರಿಸಲಿ’ ಎಂದು ಹೇಳಿದರು.

ADVERTISEMENT

‘ಕೇಂದ್ರ ಸರ್ಕಾರದ ನೂತನ ಸಚಿವ ಸಂಪುಟದಲ್ಲಿ ಎಸ್‌ಸಿ, ಎಸ್‌ಟಿ ಸಮುದಾಯದ 20 ಹಾಗೂ ಒಬಿಸಿಗೆ ಸೇರಿದ 27 ಮಂದಿ ಸಚಿವರಾಗಿದ್ದಾರೆ ಎಂದು ಬಿಜೆಪಿ ಹೇಳುತ್ತಿದೆ. ಅವರೆಲ್ಲಾ ನಾಮಕಾವಸ್ಥೆ ಸಚಿವರು. ಅವರ ಅಧಿಕಾರವನ್ನೆಲ್ಲಾ ನರೇಂದ್ರ ಮೋದಿಯವರೇ ಚಲಾಯಿಸುತ್ತಾರೆ. ಹೀಗಿರುವಾಗ ಆ ಸಚಿವರಿಂದ ಅವರ ಸಮುದಾಯದ ಅಭಿವೃದ್ಧಿ ನಿರೀಕ್ಷಿಸುವುದು ಸಾಧ್ಯವೇ’ ಎಂದು ಪ್ರಶ್ನಿಸಿದರು.

ಆಮ್‌ ಆದ್ಮಿ ಪಕ್ಷದ ಕಚೇರಿ ಕಾರ್ಯದರ್ಶಿ ವೀಣಾ ಸೆರ್ರಾವ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.