ಬೆಂಗಳೂರು: ‘ಎ ಖಾತಾ ಪರಿವರ್ತನೆಗೆ ಲಂಚ ಪಡೆಯುವ ಮೂಲಕ ಬಿಜೆಪಿ ಸರ್ಕಾರ ಮುಂದಿನ ಚುನಾವಣೆಗೆ ಅಕ್ರಮವಾಗಿ ಹಣ ಸಂಗ್ರಹಿಸುತ್ತಿದೆ’ ಎಂದು ಆಮ್ ಆದ್ಮಿ ಪಕ್ಷದ (ಎಎಪಿ) ಬೆಂಗಳೂರು ಘಟಕದ ಅಧ್ಯಕ್ಷ ಮೋಹನ್ ದಾಸರಿ ಆರೋಪಿಸಿದರು.
ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿ ಖಾತಾ ಆಸ್ತಿ ಮಾಲೀಕರಿಂದ ಸುಧಾರಣಾ ಶುಲ್ಕ ಪಾವತಿಸಿಕೊಂಡು ಎ ಖಾತಾ ನೀಡಲಾಗುತ್ತಿದೆ.30x40 ನಿವೇಶನಕ್ಕೆ ₹25 ಸಾವಿರ ಹಾಗೂ 40x60 ನಿವೇಶನಕ್ಕೆ ₹50 ಸಾವಿರದವರೆಗೆ ಅಧಿಕಾರಿಗಳುಲಂಚ ಪಡೆಯುತ್ತಿದ್ದು, ಅದು ಮೂರೂ ಪಕ್ಷಗಳ ಶಾಸಕರ ಪಾಲಾಗುತ್ತಿದೆ’ ಎಂದು ದೂರಿದರು.
‘ಪ್ರತಿ ವಾರ್ಡ್‌ನ ಕಚೇರಿಗಳಲ್ಲಿ ಖಾತಾ ಮಾಡಿಕೊಡಲು ಸೇವಾ ಶುಲ್ಕದ ಹೆಸರಿನಲ್ಲಿ ಲಂಚ ಪಡೆಯುತ್ತಿದ್ದಾರೆ. ದಾಸರಹಳ್ಳಿ, ಬೊಮ್ಮನಹಳ್ಳಿ, ರಾಜರಾಜೇಶ್ವರಿನಗರ ಹಾಗೂ ಯಶವಂತ
ಪುರ ವಲಯಗಳಲ್ಲಿ ಈ ದಂಧೆ ಅವ್ಯಾಹತ
ವಾಗಿ ನಡೆಯುತ್ತಿದ್ದು, ಎಸಿಬಿ ದಾಳಿ ನಡೆಸಬೇಕು’ ಎಂದು ಆಗ್ರಹಿಸಿದರು.
ಎಎಪಿ ಮಹದೇವಪುರ ಘಟಕದ ಅಧ್ಯಕ್ಷ ಅಶೋಕ್ ಮೃತ್ಯುಂಜಯ, ‘ಬೆಂಗಳೂರಿನಲ್ಲಿ 8 ಲಕ್ಷಕ್ಕೂ ಹೆಚ್ಚು ಇದ್ದ ಬಿ ಖಾತಾ ಆಸ್ತಿಗಳ ಸಂಖ್ಯೆ 6.18 ಲಕ್ಷಕ್ಕೆ ಇಳಿಕೆಯಾಗಿದೆ. ಹತ್ತು ವರ್ಷಗಳಲ್ಲಿ 2 ಲಕ್ಷ ಬಿ ಖಾತಾಗಳನ್ನು ಅಕ್ರಮವಾಗಿ ಎ ಖಾತಾ ಮಾಡಲಾಗಿದೆ’ ಎಂದು ಆರೋಪಿಸಿದರು.
‘ಖಾತಾ ಪರಿವರ್ತನೆ ಬಗ್ಗೆ ಮಾಹಿತಿ ನೀಡಲು ಹಾಗೂ ಲಂಚ ಕೇಳಿದರೆ ದೂರು ನೀಡಲು ಸಹಾಯವಾಣಿ ಆರಂಭಿಸಬೇಕು. ಖಾತಾ ಪರಿವರ್ತನೆ ಪ್ರಕ್ರಿಯೆಗೆ ಆನ್‌ಲೈನ್‌ನಲ್ಲಿ ಅವಕಾಶ ಕಲ್ಪಿಸಬೇಕು. ಸಾರ್ವಜನಿಕರು ಕಚೇರಿಗಳಿಗೆ ಅಲೆಯದೆ, ಖಾತಾ ಪರಿವರ್ತನೆ ಆಗುವಂತೆ ಮಾಡಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.