ಬೆಂಗಳೂರು: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಅಕ್ರಮವಾಗಿ ಬಂಧಿಸಿಡಲಾಗಿದೆ ಎಂದು ಆರೋಪಿಸಿ ಆಮ್ ಆದ್ಮಿ ಪಕ್ಷ (ಎಎಪಿ) ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು ಸ್ವಾತಂತ್ರ್ಯ ಉದ್ಯಾನದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ಎಎಪಿ ರಾಜ್ಯ ಘಟಕದ ಅಧ್ಯಕ್ಷ ‘ಮುಖ್ಯಮಂತ್ರಿ’ ಚಂದ್ರು ಮಾತನಾಡಿ, ‘ಅರವಿಂದ ಕೇಜ್ರಿವಾಲ್ ಅವರ ಬಂಧನ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ನಡೆಯನ್ನು ಸುಪ್ರೀಂ ಕೋರ್ಟ್ ಆಕ್ಷೇಪಿಸಿದೆ. ಆದರೆ, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೇಜ್ರಿವಾಲ್ ಅವರ ಜೈಲಿನಲ್ಲಿಯೇ ಇರಿಸಿದೆ. ಅವರನ್ನು ಜೈಲಿನಲ್ಲೇ ಕೊಲೆ ಮಾಡಲು ಕೇಂದ್ರ ಸರ್ಕಾರ ಸಂಚು ರೂಪಿಸಿದೆ’ ಎಂದು ಆರೋಪಿಸಿದರು.
‘ಕೇಜ್ರಿವಾಲ್ ಅವರ ಆರೋಗ್ಯ ಹದಗೆಡುತ್ತಿದ್ದರೂ ಅವರು ಚಿಕಿತ್ಸೆ ಪಡೆಯಲು ಅವಕಾಶ ನೀಡದೇ, ಕೇಂದ್ರ ಸರ್ಕಾರ ಮಾನವ ಹಕ್ಕುಗಳನ್ನು ಉಲ್ಲಂಘಿಸುತ್ತಿದೆ. ಕೇಜ್ರಿವಾಲ್ ಅವರನ್ನು ಬಿಡುಗಡೆಗೊಳಿಸಿ, ಚಿಕಿತ್ಸೆ ಪಡೆಯಲು ಅವಕಾಶ ನೀಡಬೇಕು’ ಎಂದು ಆಗ್ರಹಿಸಿದರು.
ಎಎಪಿ ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ಪೃಥ್ವಿ ರೆಡ್ಡಿ ಮಾತನಾಡಿ, ‘ಅರವಿಂದ್ ಕೇಜ್ರಿವಾಲ್ ಅವರ ಆರೋಗ್ಯ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಅವರು ಮಧುಮೇಹದಿಂದ ಬಳಲುತ್ತಿದ್ದು, ಅವರ ಪ್ರಾಣಕ್ಕೆ ಮಾರಕವಾಗುವ ಸಾಧ್ಯತೆ ಇದೆ’ ಎಂದು ಆತಂಕ ವ್ಯಕ್ತಪಡಿಸಿದರು.
ಎಸ್‌ಡಿಪಿಐ ರಾಜ್ಯ ಘಟಕದ ಅಧ್ಯಕ್ಷ ಅಬ್ದುಲ್ ಮಜೀದ್, ರಾಜ್ಯಸಭೆಯ ಮಾಜಿ ಸದಸ್ಯ ಎಲ್. ಹನುಮಂತಯ್ಯ ಮಾತನಾಡಿದರು. ರಂಗಕರ್ಮಿ ಶ್ರೀನಿವಾಸ್ ಜಿ. ಕಪ್ಪಣ್ಣ, ಸಿಪಿಐಎಂ ಮುಖಂಡ ಬಸವರಾಜು, ಸಿಪಿಐ ಸಹ ಕಾರ್ಯದರ್ಶಿ ಅಮ್ಜದ್ ಖಾನ್, ಭಾಸ್ಕರ್ ಪ್ರಸಾದ್, ದಲಿತ ಮುಖಂಡ ಹರಿರಾಮ್, ನಾಟಕ ಅಕಾಡೆಮಿ ಅಧ್ಯಕ್ಷ ನಾಗರಾಜ ಮೂರ್ತಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.