ಬೆಂಗಳೂರು: ಹೋರಾಟಗಾರ ಕೆ.ಬಾಲಗೋಪಾಲ್ ಅವರ ಹಲವು ಕೃತಿಗಳು ತೆಲುಗಿನಿಂದ ಕನ್ನಡಕ್ಕೆ ಅನುವಾದಗೊಳ್ಳಬೇಕಿದೆ ಎಂದು ಸಾಹಿತಿ ಬಂಜಗೆರೆ ಜಯಪ್ರಕಾಶ್ ಅಭಿಪ್ರಾಯಪಟ್ಟರು.
ಆಕೃತಿ ಪುಸ್ತಕ, ನವಯಾನ ಟ್ರಸ್ಟ್ ಮತ್ತು ಬೀ ಕಲ್ಚರ್ ಶನಿವಾರ ಆಯೋಜಿಸಿದ್ದ ಕೆ.ಬಾಲಗೋಪಾಲ್ ಅವರ ‘ಅಭಿವೃದ್ಧಿ ಎಂಬ ವಿನಾಶ’ (ತೆಲುಗಿನಿಂದ ಕನ್ನಡಕ್ಕೆ ಬಂಜಗೆರೆ ಜಯಪ್ರಕಾಶ) ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯಾವುದೇ ವಿಷಯದ ಬಗ್ಗೆ ಬಾಲಗೋಪಾಲ್ ಅವರು ಆಳ ಅಧ್ಯಯನ ಮಾಡುತ್ತಿದ್ದರು. ಸಾಹಿತ್ಯ, ಸಂಸ್ಕೃತಿ, ಮಾನವ ಹಕ್ಕು, ಕಾಶ್ಮೀರ ಮತ್ತು ಈಶಾನ್ಯ ರಾಜ್ಯಗಳ ಸಮಸ್ಯೆಗಳ ಬಗ್ಗೆ ಲೇಖನ ಬರೆದಿದ್ದಾರೆ. ಅಂಬೇಡ್ಕರ್ ಮತ್ತು ಮಾರ್ಕ್ಸ್‌ವಾದಿಯಾಗಿಯೂ ಆಗಿದ್ದರು. ಬೆಂಗಳೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾನವ ಹಕ್ಕುಗಳ ಹೋರಾಟಗಾರರ ಜತೆ ಚರ್ಚಿಸುತ್ತಿದ್ದರು. ಆದರೆ ಅವರಿಗೆ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುವ ಅವಕಾಶ ಸಿಗಲಿಲ್ಲ ಎಂದು ತಿಳಿಸಿದರು.
ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ವಿಮರ್ಶಕ ರಹಮತ್ ತರೀಕೆರೆ, ಹಲವು ದೇಶಗಳ ಪ್ರಮುಖ ಕೃತಿಗಳು ಇಂಗ್ಲಿಷ್‌ಗೆ ಅನುವಾದವಾಗುತ್ತಿವೆ. ಕೆಲವರು ಆಯಾ ಭಾಷೆಯಲ್ಲಿ ಪರಿಣತರಾಗಿ ಕೃತಿಗಳನ್ನು ಅನುವಾದ ಮಾಡುತ್ತಿದ್ದಾರೆ. ಕನ್ನಡ ಸಾಹಿತ್ಯ ಅನ್ಯ ಭಾಷೆಗೆ ಅನುವಾದ ಆಗುತ್ತಿದೆಯೇ ಎಂಬುದರ ಬಗ್ಗೆ ತಿಳಿದುಕೊಳ್ಳಬೇಕಿದೆ. ತುಳು, ಬ್ಯಾರಿ, ಲಂಬಾಣಿ ಭಾಷೆಯಲ್ಲಿ ಸಾಹಿತ್ಯ ಸೃಷ್ಟಿಯಾಗುತ್ತಿದೆ ಎಂದರು.
ಚಿಂತಕ ಶ್ರೀಪಾದ್ ಭಟ್, ‘ಪುಸ್ತಕದಲ್ಲಿ ಪೊಲೀಸ್ ವ್ಯವಸ್ಥೆ, ಜಾತಿ ವ್ಯವಸ್ಥೆ ಕುರಿತು ಪ್ರಸ್ತಾಪಿಸಲಾಗಿದೆ. ಬಾಲಗೋಪಾಲ್ ಅವರ ಲೇಖನಗಳು ಈಗಲೂ ಪ್ರಸ್ತುತ‘ ಎಂದರು.
‘ನವ ಉದಾರೀಕರಣದ ಬಗ್ಗೆ ಮಾತನಾಡುತ್ತೇವೆ. ದೇಶದಲ್ಲಿ ವಸೂಲಾಗದ ಸಾಲದ ಪ್ರಮಾಣ ₹ 10 ಲಕ್ಷ ಕೋಟಿಯಷ್ಟಿದೆ. ಇದರಲ್ಲಿ ಶೇಕಡ 50ರಷ್ಟು ಬಂಡವಾಳಶಾಹಿಗಳದ್ದು. ಒಂದೂವರೆ ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಿರುದ್ಯೋಗ ಸಮಸ್ಯೆ ಇದೆ. ಉದ್ಯೋಗ ಅರಸಿ ಜನರು ವಲಸೆ ಹೋಗುತ್ತಿದ್ದಾರೆ. ಇವುಗಳ ಬಗ್ಗೆ ಚರ್ಚೆ ನಡೆಸಬೇಕಾದ ಅಗತ್ಯ ಇದೆ‘ ಎಂದು ಹೇಳಿದರು.
ಜಾತಿಯೇ ಕಾನೂನು: ‘ಬಾಲಗೋಪಾಲ್ ಜತೆಗೆ ಜಾತಿ ಓದು’ ಕುರಿತು ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ ಸಂದರ್ಶಕ ಪ್ರಾಧ್ಯಾಪಕ ಮಾತನಾಡಿದರು. ಸಾಮಾಜಿಕ ಕಾರ್ಯಕರ್ತ ವಿ.ಎಲ್.ನರಸಿಂಹಮೂರ್ತಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.