ADVERTISEMENT

ಕೇಂದ್ರ ವಿ.ವಿ: ಗಾಂಧಿ ಜಯಂತಿ ಆಚರಿಸಿದ ಎಬಿವಿಪಿ

ಘೋಷಣೆ ಕೂಗಿದ್ದಕ್ಕೆ ಠಾಣೆಯಲ್ಲಿ ಪ್ರಕರಣ ದಾಖಲು: ನನ್ನ ಪಾತ್ರ ಇಲ್ಲ ಎಂದ ಕುಲಪತಿ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2019, 20:21 IST
Last Updated 4 ಅಕ್ಟೋಬರ್ 2019, 20:21 IST
ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ಆವರಣದಲ್ಲಿ ಶನಿವಾರ ಎಬಿವಿಪಿ ವತಿಯಿಂದ ಗಾಂಧಿ ಜಯಂತಿ ಆಚರಿಸಲಾಯಿತು. 
ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ಆವರಣದಲ್ಲಿ ಶನಿವಾರ ಎಬಿವಿಪಿ ವತಿಯಿಂದ ಗಾಂಧಿ ಜಯಂತಿ ಆಚರಿಸಲಾಯಿತು.    

ಬೆಂಗಳೂರು: ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ಆವರಣದಲ್ಲಿ ಶನಿವಾರ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ (ಎಬಿವಿಪಿ) ವತಿಯಿಂದ ಗಾಂಧಿ ಜಯಂತಿ ಆಚರಿಸಲಾಯಿತು. ಆದರೆ ಕ್ಯಾಂಪಸ್‌ನಲ್ಲಿ ಘೋಷಣೆ ಕೂಗಲಾಗಿದೆ ಎಂಬ ಕಾರಣಕ್ಕೆ ಹಲಸೂರು ಗೇಟ್‌ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿದೆ.

‘ಅಕ್ಟೋಬರ್ 2ರಂದೇ ಗಾಂಧಿ ಜಯಂತಿಯನ್ನು ವಿಶ್ವವಿದ್ಯಾಲಯದ ವತಿಯಿಂದ ಆಚರಿಸಬೇಕಿತ್ತು. ಅದು ನಡೆದಿರಲಿಲ್ಲ. ಹೀಗಾಗಿ ಎಬಿವಿಪಿ ವತಿಯಿಂದ ಆಚರಿಸಿದೆವು’ ಎಂದು ಎಬಿವಿಪಿ ಬೆಂಗಳೂರು ವಿಭಾಗದ ಕಾರ್ಯದರ್ಶಿ ಸೂರಜ್‌ ತಿಳಿಸಿದರು.

‘ಮಹಾತ್ಮ ಗಾಂಧಿ ಪರ ಘೋಷಣೆ ಕೂಗಿದ್ದಕ್ಕಾಗಿ ಠಾಣೆಯಲ್ಲಿ ಸಿಆರ್‌ಪಿಸಿ 107 ಅಡಿಯಲ್ಲಿ (ದೊಂಬಿ ಎಬ್ಬಿಸುವುದು) ಪ್ರಕರಣ ದಾಖಲಾಗಿದೆ’ ಎಂದು ಅವರು ತಿಳಿಸಿದರು.

ADVERTISEMENT

‘ರಾಷ್ಟ್ರೀಯ ಹಬ್ಬಗಳಾದ ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆ ಮತ್ತು ಗಾಂಧಿ ಜಯಂತಿಗಳನ್ನು ಆಯಾ ದಿನಗಳಂದೇ ಆಚರಿಸಬೇಕಾಗುತ್ತದೆ. ವಿಶ್ವವಿದ್ಯಾಲಯ ಸರಳವಾಗಿಯಾದರೂ ಗಾಂಧಿ ಜಯಂತಿಯನ್ನು 2ರಂದು ಆಚರಿಸಬೇಕಿತ್ತು’ ಎಂದು ಸಿಂಡಿಕೇಟ್‌ ಸದಸ್ಯ ಅರವಿಂದ ಅಭಿಪ್ರಾಯಪಟ್ಟರು.

ನನ್ನ ಪಾತ್ರ ಇಲ್ಲ: ‘ಲಿಖಿತ ದೂರು ನೀಡಬೇಡಿ ಎಂದು ವಿಶ್ವವಿದ್ಯಾಲಯದ ಅಧಿಕಾರಿಗಳಿಗೆ ಹೇಳಿದ್ದೆ. ಪೊಲೀಸ್‌ ಠಾಣೆಯಲ್ಲಿ ಸ್ವಯಂಪ್ರೇರಿತ ದೂರು ದಾಖಲಾಗಿರಬಹುದು. ಇದರಲ್ಲಿ ನನ್ನ ಪಾತ್ರವೇನೂ ಇಲ್ಲ’ ಎಂದು ಕುಲಪತಿ ಪ್ರೊ. ಎಸ್‌. ಜಾಫೆಟ್‌ ತಿಳಿಸಿದರು.

‘ಗಾಂಧಿ ಜಯಂತಿ ರದ್ದು ಮಾಡಿಲ್ಲ’

ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ವತಿಯಿಂದ ಜರುಗಬೇಕಿದ್ದ ಅ.2ರ ಗಾಂಧಿ ಜಯಂತಿಯನ್ನು ರದ್ದು ಮಾಡಿಲ್ಲ, ಮುಂದೂಡಲಾಗಿದೆ ಅಷ್ಟೇ. ಇದೇ 10ರಂದು ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಕುಲಪತಿ
ಪ್ರೊ. ಎಸ್‌. ಜಾಫೆಟ್‌ ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯ ಮುಂದಿನ ದಿನಗಳಲ್ಲೂ ಶೈಕ್ಷಣಿಕ ಕಾರ್ಯಕ್ರಮ ಹಾಗೂ ಪರಿಕಲ್ಪನೆಗಳಲ್ಲಿ ಬಾಪು ಅವರ ಚಿಂತನೆ ಬಳಸಿಕೊಳ್ಳಲು ಈಗಾಗಲೇ ಕ್ರಮ ತೆಗೆದುಕೊಂಡಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.