ADVERTISEMENT

ಕೆಪಿಸಿಸಿ ಕಚೇರಿಯಲ್ಲಿ ಅಕಾಡೆಮಿ ಅಧ್ಯಕ್ಷರ ಸಭೆ: ವ್ಯಾಪಕ ಟೀಕೆ

ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 15 ಜೂನ್ 2024, 15:46 IST
Last Updated 15 ಜೂನ್ 2024, 15:46 IST
ಡಿ.ಕೆ. ಶಿವಕುಮಾರ್
ಡಿ.ಕೆ. ಶಿವಕುಮಾರ್   

ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೆಪಿಸಿಸಿ ಕಚೇರಿಯಲ್ಲಿಯೇ ಸಾಂಸ್ಕೃತಿಕ ಅಕಾಡೆಮಿಗಳ ಹಾಗೂ ಪ್ರಾಧಿಕಾರಗಳ ಅಧ್ಯಕ್ಷರ ಜತೆಗೆ ಸಭೆ ನಡೆಸಿರುವ ಕ್ರಮಕ್ಕೆ ಸಾಂಸ್ಕೃತಿಕ ವಲಯದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ.

ಈ ಸಭೆಯಲ್ಲಿ ಪಾಲ್ಗೊಂಡ ಅಕಾಡೆಮಿಗಳ ಅಧ್ಯಕ್ಷರ ನಡೆಯ ಬಗ್ಗೆಯೂ ಸಾಹಿತ್ಯ, ರಂಗಭೂಮಿ ಸೇರಿ ವಿವಿಧ ಕ್ಷೇತ್ರಗಳ ಪ್ರಮುಖರು ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದು, ಸಾಂಸ್ಕೃತಿಕ ಅಕಾಡೆಮಿಗಳು ಕಾಂಗ್ರೆಸ್ ಪಕ್ಷದ ಶಾಖೆಗಳೇ ಎಂದು ಪ್ರಶ್ನಿಸಿದ್ದಾರೆ. 

ನಿಗಮ ಮಂಡಳಿಗಳ ಅಧ್ಯಕ್ಷರ ಜತೆಗೆ ವಿವಿಧ ಸಾಂಸ್ಕೃತಿಕ ಅಕಾಡೆಮಿಗಳ ಹಾಗೂ ಪ್ರಾಧಿಕಾರಗಳ ಅಧ್ಯಕ್ಷರ ಜತೆಗೆ ಗುರುವಾರ ಸಭೆ ನಡೆಸಿದ್ದ ಡಿ.ಕೆ. ಶಿವಕುಮಾರ್, ‘ಈ ಹುದ್ದೆಗಳು ರಾಜಕಾರಣಕ್ಕೆ ಮೆಟ್ಟಿಲುಗಳಾಗಿದ್ದು, ಕೈ ಮತ್ತು ಬಾಯಿ ಶುದ್ಧವಾಗಿರಬೇಕು’ ಎಂದು ಕಿವಿಮಾತು ಹೇಳಿದ್ದರು. ಸಭೆಯಲ್ಲಿ ಕಾರ್ಯಾಧ್ಯಕ್ಷ ಜಿ.ಸಿ. ಚಂದ್ರಶೇಖರ್, ಕಾಂಗ್ರೆಸ್ ‍ಪಕ್ಷದ ಮುಖಂಡರಾದ ಮೊಹಮ್ಮದ್ ನಲಪಾಡ್, ರುಕ್ಸಾನಾ ಉಸ್ತಾದ್, ನಾರಾಯಣಸ್ವಾಮಿ, ಮುರುಳೀಧರ ಹಾಲಪ್ಪ ಪಾಲ್ಗೊಂಡಿದ್ದರು. 

ADVERTISEMENT

‘ಸಾಹಿತ್ಯ, ಕಲೆ, ಸಂಸ್ಕೃತಿ ಹಾಗು ಭಾಷೆಗೆ ಸಂಬಂಧಿಸಿದ ವಿವಿಧ ಅಕಾಡೆಮಿ ಹಾಗೂ ಪ್ರಾಧಿಕಾರಗಳ ಅಧ್ಯಕ್ಷರನ್ನು ಕಾಂಗ್ರೆಸ್ ಪಕ್ಷದ ಕಚೇರಿಗೆ ಕರೆದು ಸಭೆ ನಡೆಸಿದ್ದು ಅತ್ಯಂತ ವಿಷಾದನೀಯ. ಪಕ್ಷದ ಕಚೇರಿಯಲ್ಲಿ ಆಯೋಜಿಸಿದ ಈ ಸಭೆಗೆ ಅಧ್ಯಕ್ಷರು ಹಾಗೂ ಸದಸ್ಯರು ಭಾಗವಹಿಸಿದ್ದನ್ನು ಒಪ್ಪಲಾಗದು’ ಎಂದು ಶಿಕ್ಷಣ ತಜ್ಞ ನಿರಂಜನಾರಾಧ್ಯ ವಿ.ಪಿ. ಬೇಸರ ವ್ಯಕ್ತಪಡಿಸಿದ್ದಾರೆ.

‘ಈ ಹಿಂದೆ ಇಂತಹ ಘಟನೆ ನಡೆದ ನೆನಪಿಲ್ಲ. ಸಭೆಯನ್ನು ಸರ್ಕಾರದ ಕಚೇರಿಯಲ್ಲಿ, ವಿಧಾನಸೌಧದಲ್ಲಿ ಮಾಡಬಹುದಷ್ಟೆ. ಆಳುವ ಪಕ್ಷದ ಕಚೇರಿಯಲ್ಲಿ ಸಭೆ ಕರೆದು, ಉಪದೇಶ ನೀಡಿರುವುದು ಯಾವುದೇ ಕಾರಣಕ್ಕೂ ಸರಿಯಾದ ನಡೆಯಲ್ಲ. ಇದು ಸಾಂಸ್ಕೃತಿಕ ಅಧಃಪತನದ ಪರಾಕಾಷ್ಠೆಯಲ್ಲದೆ ಮತ್ತೇನೂ ಅಲ್ಲ’ ಎಂದು ಸಾಮಾಜಿಕ ಕಾರ್ಯಕರ್ತ ಸುರೇಂದ್ರ ರಾವ್ ಟಿ. ತಿಳಿಸಿದ್ದಾರೆ.  

‘ಅಕಾಡೆಮಿ, ಪ್ರಾಧಿಕಾರಗಳು ಕಾಂಗ್ರೆಸ್ ಪಕ್ಷ, ಸರ್ಕಾರದ ಅಡಿಯಾಳುಗಳಲ್ಲ. ಅವು ಸ್ವತಂತ್ರವಾಗಿ ಕಾರ್ಯ ನಿರ್ವಹಿಸುವ ಸ್ವಾಯತ್ತ ಸಂಸ್ಥೆ ಅಲ್ಲವೆ’ ಎಂದು ಪತ್ರಕರ್ತ ಆರ್.ಜಿ.ಹಳ್ಳಿ ನಾಗರಾಜ್ ಪ್ರಶ್ನಿಸಿದ್ದಾರೆ.

‘ಸಾಂಸ್ಕೃತಿಕ ಅಕಾಡೆಮಿಗಳು ಕಾಂಗ್ರೆಸ್‌ನ ವಿಸ್ತರಣೆಯೆ? ಕುರ್ಚಿ ಏರಿದ ಮಾರನೆ ದಿನವೇ ಪಕ್ಷದ ಕಚೇರಿಯಲ್ಲಿ ಪಾಠ ಹೇಳಿಸಿಕೊಳ್ಳಲು ಹಾಜರಾದರೆ ಏನರ್ಥ? ನೈತಿಕತೆಯ ಒಂದು‌ ಮೆಟ್ಟಿಲು ಇಳಿದಂತೆ ಎಂದಷ್ಟೇ ಅರ್ಥ’ ಎಂದು ಸಾಮಾಜಿಕ ಕಾರ್ಯಕರ್ತ ಸುರೇಶ ಕಂಜರ್ಪಣೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಕಾಂಗ್ರೆಸ್ ಸರ್ಕಾರ ಅನಿಷ್ಠ ಪದ್ಧತಿಯನ್ನು ಹುಟ್ಟು ಹಾಕಿದೆ. ಇಲ್ಲಿಯವರೆಗೂ ಯಾವುದೇ ಪಕ್ಷದ ಸರ್ಕಾರವಿದ್ದರೂ ಪಕ್ಷದ ಕಚೇರಿಯಲ್ಲಿ ಸರ್ಕಾರಿ ಸಾಂಸ್ಕೃತಿಕ ಸಂಸ್ಥೆಗಳ ಸಭೆ ಕರೆದಿರಲಿಲ್ಲ. ಏಕೆಂದರೆ ಈ ಸಂಸ್ಥೆಗಳು ಸರ್ಕಾರದ ಅಧೀನದಲ್ಲಿವೆಯೇ ಹೊರತು ಯಾವುದೇ ಪಕ್ಷದ ಅಧೀನದಲ್ಲಿಲ್ಲ. ಸಾಂಸ್ಕೃತಿಕ ಸಂಸ್ಥೆಗಳನ್ನು ಕಾಂಗ್ರೆಸ್ಸೀಕರಣ ಮಾಡುವ ಹುನ್ನಾರವಾಗಿದೆ’ ಎಂದು ರಂಗಕರ್ಮಿ ಶಶಿಕಾಂತ್ ಯಡಹಳ್ಳಿ ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.