ADVERTISEMENT

ಬಿಬಿಎಂಪಿ ಅಧಿಕಾರಿಗಳ ಮನೆ ಮೇಲೆ ದಾಳಿ

ಬಿಬಿಎಂಪಿಯಲ್ಲಿ ನಡೆದಿರುವ ಟಿಡಿಆರ್‌ ವಂಚನೆ ಪ್ರಕರಣ: ಚುರುಕುಗೊಂಡ ಎಸಿಬಿ ತನಿಖೆ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2019, 5:59 IST
Last Updated 28 ನವೆಂಬರ್ 2019, 5:59 IST
   

ಬೆಂಗಳೂರು: ರಸ್ತೆ ವಿಸ್ತರಣೆಗೆ ಸ್ವಾಧೀನ ಪಡಿಸಿಕೊಂಡ ನಿವೇಶನ ಮತ್ತು ಕಟ್ಟಡಗಳಿಗೆ ಪರ್ಯಾಯವಾಗಿ ವಿತರಿಸಿರುವ ಅಭಿವೃದ್ಧಿ ಹಕ್ಕು ವರ್ಗಾವಣೆ ಪತ್ರ (ಟಿಡಿಆರ್‌ಸಿ) ವಂಚನೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ, ಬಿಬಿಎಂಪಿಯ ಹಾಲಿ ಮತ್ತು ನಿವೃತ್ತ ಅಧಿಕಾರಿಗಳ ಮನೆಗಳ ಮೇಲೆ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಬುಧವಾರ ದಾಳಿ ನಡೆಸಿದೆ.

ಪಾಲಿಕೆ ಸಹಾಯಕ ಎಂಜಿನಿಯರ್‌ ದೇವರಾಜ್‌ ಅವರ ಎಚ್‌ಎಸ್‌ಆರ್‌ ಬಡಾವಣೆಯಲ್ಲಿರುವ ಮನೆ, ಕಚೇರಿ,
ಪತ್ನಿಗೆ ಸೇರಿರುವ ಕ್ಯೂಬ್ಸ್‌ ಇಂಟೀರಿಯರ್‌ ಕಚೇರಿ, ಎಇ ಖಾಸಗಿ ಸಹಾಯಕ ಮತ್ತು ಮಧ್ಯವರ್ತಿ ಜಯಪ್ರಕಾಶ್‌ ಅವರ ಸರ್ಜಾಪುರದ ಸೋಂಪುರ ಗೇಟ್‌ನಲ್ಲಿರುವ ವಾಸದ ಮನೆ ಹಾಗೂ ನಿರ್ಮಾಣ ಹಂತದಲ್ಲಿರುವ ಮನೆಗಳ ಮೇಲೆಎಸಿಬಿ ಎಸ್‌ಪಿ ಆರ್‌.ಬಿ. ಬಸರಗಿ ಅವರ ನೇತೃತ್ವದಲ್ಲಿಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ಬಿಬಿಎಂಪಿ ನಿವೃತ್ತ ಕಾರ್ಯಪಾಲಕ ಎಂಜಿನಿಯರ್‌ ರಾಮೇಗೌಡ ಅವರ ವಿಜಯನಗರದ ಜಿಕೆಡಬ್ಲ್ಯು ಲೇಔಟ್‌ ಮನೆಯ ಮೇಲೂ ದಾಳಿ ಮಾಡಲಾಗಿದ್ದು, ಶೋಧ ಕಾರ್ಯ ಮುಂದುವರಿಯುತ್ತಿದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ನಗರದ ಟಿ.ಸಿ ಪಾಳ್ಯ ಹಾಗೂ ವಾರಣಾಸಿ ಮುಖ್ಯ ರಸ್ತೆಗಳ ಅಗಲೀಕರಣಕ್ಕಾಗಿ ಕೌದೇನಹಳ್ಳಿಯ ಸರ್ವೆ ನಂಬರ್‌ 7 ಜಾಗವನ್ನು ಸ್ವಾಧೀನಪಡಿಸಿಕೊಳ್ಳಲು 2009ರಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು. ಈ ನಿವೇಶನದ ಆರ್‌ಟಿಸಿ ಆನೆಮ್ಮ ಎಂಬುವವರ ಹೆಸರಿನಲ್ಲಿತ್ತು. ಈ ಬಗ್ಗೆ ಮಾಹಿತಿ ಪಡೆದ ಗುಡ್‌ ಹೋಮ್‌ ವೆಂಚರ್ಸ್‌ ಕಂಪನಿ ಪಾಲುದಾರರಾದ ಎಂ.ವಿ.ಗೋಪಿ, ವೆಂಕಟೇಶ್‌ ಎನ್‌.ವಿ. ಗಜೇಂದ್ರ ಹಾಗೂ ಎಂ.ಕೆ. ರೋಚನ್‌ ಅವರು ಆನೆಮ್ಮ ಮತ್ತು ಅವರ ಮಕ್ಕಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು.

ಈ ಮಧ್ಯೆ, ಸದರಿ ಜಾಗವನ್ನು ಬಡಾವಣೆಯಾಗಿ ಅಭಿವೃದ್ಧಿಪಡಿಸಿ ನಿವೇಶನಗಳನ್ನು ಹಾಗೂ 2.08 ಎಕರೆ ಜಾಗವನ್ನು ಸಯ್ಯದ್‌ ಫಯಾಜ್‌ ಎಂಬುವವರಿಗೆ ಮಾರಾಟ ಮಾಡಿದ್ದರು. ಈ ವಿಷಯವನ್ನು ಮರೆಮಾಚಿ, ಆನೆಮ್ಮ ಹೆಸರಿನಲ್ಲಿ ಪಾಲಿಕೆ ಮಹದೇವಪುರ ವಲಯ ಕಚೇರಿಗೆ 2013ರ ಆಗಸ್ಟ್‌ 6ರಂದು ಅರ್ಜಿ ಸಲ್ಲಿಸಿದ್ದರು.

ಟಿ.ಸಿ ಪಾಳ್ಯ ರಸ್ತೆಗೆ 31 ಮೀಟರ್‌, ವಾರಣಾಸಿ ರಸ್ತೆಗೆ 87 ಮೀಟರ್‌ ಸೇರಿದಂತೆ 9783.43 ಚದರ ಮೀಟರ್‌ಗೆ 1.5ರ ಅನುಪಾತದಲ್ಲಿ 14675.14 ಚದರ ಮೀಟರ್‌ ಟಿಡಿಆರ್‌ಸಿ ಪಡೆಯಲು 2015ರ ಏಪ್ರಿಲ್‌ 9ರಂದು ಹಕ್ಕು ಬಿಟ್ಟುಕೊಡುವ ಪತ್ರವನ್ನು ಬಿಬಿಎಂಪಿಗೆ ಸಲ್ಲಿಸಿದ್ದರು.

ಸಹಾಯಕ ಎಂಜಿನಿಯರ್‌ ದೇವರಾಜ್‌ ಸ್ವಾಧೀನಪಡಿಸಿಕೊಂಡ ನಿವೇಶನದ ನಕ್ಷೆ ತಯಾರಿಸಿ ಸರ್ಕಾರಕ್ಕೆ ಶಿಫಾರಸು ಮಾಡಿದ್ದರು. ರಾಮೇಗೌಡರು ಭೂ ಪರಿವರ್ತನಾ ಆದೇಶ ಮರೆಮಾಚಿ, ಕೃಷಿ ಭೂಮಿ ದರಗಳನ್ನೇ ನಿವೇಶನ ಮತ್ತು ಕಟ್ಟಡಗಳಿಗೆ ನಿಗದಿಪಡಿಸಿ, ಕಾನೂನುಬಾಹಿರವಾಗಿ ಶೇ 70ರಷ್ಟು ಟಿಡಿಆರ್‌ಸಿಯನ್ನು ಹೆಚ್ಚಾಗಿ ವಿತರಿಸಲು ಶಿಫಾರಸು ಮಾಡುವ ಮೂಲಕ ಬಿಬಿಎಂಪಿ ಮತ್ತು ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ನಷ್ಟ ಉಂಟುಮಾಡಿದ ಆರೋಪಕ್ಕೆ ಒಳಗಾಗಿದ್ದಾರೆ ಎಂದು ಮೂಲಗಳು ವಿವರಿಸಿವೆ.

ಕುತೂಹಲದ ಸಂಗತಿ ಎಂದರೆ, ಅಧಿಸೂಚನೆ ಪ್ರಕಟವಾಗಿ 10 ವರ್ಷ ಕಳೆದಿದ್ದರೂ ನಿವೇಶನ ಮತ್ತು ಕಟ್ಟಡಗಳನ್ನು ಬಿಬಿಎಂಪಿ ಸ್ವಾಧೀನಪಡಿಸಿಕೊಂಡಿಲ್ಲ. ರಸ್ತೆ ವಿಸ್ತರಣೆಯನ್ನೂ ಮಾಡಿಲ್ಲ. ಜಮೀನು, ಕಟ್ಟಡ ಕಳೆದುಕೊಂಡವರಿಗೆ ಪರಿಹಾರವೂ ಸಿಕ್ಕಿಲ್ಲ ಎಂದು ಮೂಲಗಳು ಸ್ಪಷ್ಟಪಡಿಸಿವೆ.

ಮೊಕದ್ದಮೆ ದಾಖಲಿಸಲು ಅನುಮತಿ

ದೇವರಾಜ್‌ ಹಾಗೂ ರಾಮೇಗೌಡರ ಮೇಲೆ ಟಿಡಿಆರ್‌ ವಂಚನೆ ಪ್ರಕರಣದಲ್ಲಿ ಮೊಕದ್ದಮೆ ಹೂಡಲು ಸಕ್ಷಮ ಪ್ರಾಧಿಕಾರ ಅನುಮತಿ ನೀಡಿದ ಬಳಿಕ ದಾಳಿ ನಡೆಸಲಾಗಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ಟಿಡಿಆರ್‌ ಪ್ರಕರಣದಲ್ಲಿ ಹಲವು ಅಧಿಕಾರಿಗಳು ಭಾಗಿಯಾದ ಆರೋಪ ಎದುರಿಸುತ್ತಿದ್ದಾರೆ. ಅವರೆಲ್ಲರ ವಿರುದ್ಧ ಪ್ರಕರಣ ದಾಖಲಿಸಲು ಒಪ್ಪಿಗೆ ನೀಡುವಂತೆ ಸಕ್ಷಮ ಪ್ರಾಧಿಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಅಧಿಕಾರಿ ವಿವರಿಸಿದರು.

ಟಿಡಿಆರ್‌ ಪ್ರಕರಣದ ಪ್ರಮುಖ ಆರೋಪಿ, ಬಿಡಿಎ ಕಾರ್ಯಪಾಲಕ ಎಂಜಿನಿಯರ್‌ ಕೃಷ್ಣಲಾಲ್‌ ಅವರನ್ನು ಕೋರ್ಟ್‌ ಇತ್ತೀಚೆಗೆ ಜಾಮೀನಿನ ಮೇಲೆ ಬಿಡುಗಡೆ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.