ADVERTISEMENT

ಐವರು ಎಂಜಿನಿಯರ್‌ಗಳ ಮೇಲೆ ಎಸಿಬಿ ದಾಳಿ

ಘನ ತ್ಯಾಜ್ಯ ಸಂಸ್ಕರಣೆಗೆ ನೀಡಿದ್ದ ಜಮೀನು ಅಡವಿಟ್ಟ ಪ್ರಕರಣ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2020, 3:15 IST
Last Updated 20 ಸೆಪ್ಟೆಂಬರ್ 2020, 3:15 IST
ಭ್ರಷ್ಟಾಚಾರ ನಿಗ್ರಹ ದಳ
ಭ್ರಷ್ಟಾಚಾರ ನಿಗ್ರಹ ದಳ   

ಬೆಂಗಳೂರು: ನಗರದಲ್ಲಿ ಸಂಗ್ರಹವಾಗುವ ಘನ ತ್ಯಾಜ್ಯವನ್ನು ಸಂಸ್ಕರಿಸಿ ವಿದ್ಯುತ್‌ ಉತ್ಪಾದಿಸುವ ಯೋಜನೆಗಾಗಿ ಶ್ರೀನಿವಾಸ ಗಾಯತ್ರಿ ರಿಸೋರ್ಸ್ ರಿಕವರಿ ಕಂಪನಿಗೆ ನೀಡಿದ್ದ ಸರ್ಕಾರಿ ಜಮೀನು ಅಡವಿಟ್ಟು ಸಾಲ ಪಡೆದು ವಂಚಿಸಿದ ಮತ್ತು ತ್ಯಾಜ್ಯ ಸಂಸ್ಕರಿಸದ ಕಂಪನಿಗೆ ₹ 4.61 ಕೋಟಿ ಶುಲ್ಕ ಪಾವತಿಸಿದ ಪ್ರಕರಣದಲ್ಲಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ಐವರು ಎಂಜಿನಿಯರುಗಳ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಶನಿವಾರ ದಾಳಿ ನಡೆಸಿದೆ.

ಪಾಲಿಕೆಯ ಕಾರ್ಯನಿರ್ವಾಹಕ ಎಂಜಿನಿಯರ್ ಕೆ.ವಿ. ರವಿ ಅವರ ಜಯನಗರದ ನಿವಾಸ ಮತ್ತು ಪಾಲಿಕೆ ಪ್ರಧಾನ ಕಚೇರಿ ಆವರಣದಲ್ಲಿರುವ ಕಚೇರಿ, ಪಾಲಿಕೆ ಜಾಗೃತ ಕೋಶದ ಕಾರ್ಯನಿರ್ವಾಹಕ ಎಂಜಿನಿಯರ್‌ ವೆಂಕಟೇಶಪ್ಪ ಅವರ ಕಲ್ಯಾಣನಗರದ ಮನೆ ಹಾಗೂ ಪಾಲಿಕೆ ಪ್ರಧಾನ ಕಚೇರಿಯಲ್ಲಿರುವ ಕಚೇರಿ, ನಿವೃತ್ತ ಕಾರ್ಯನಿರ್ವಾಹಕ ಎಂಜಿನಿಯರ್‌ ಸುರೇಶ್‌ ಅವರ ಇಂದಿರಾನಗರದ ಮನೆ, ಪಾಲಿಕೆಯ ಸಹಾಯಕ ಕಾರ್ನಿರ್ವಾಹಕ ಎಂಜಿನಿಯರ್‌ ರಾಘವೇಂದ್ರ ಅವರ ಮನೆ ಮತ್ತು ಜಯನಗರದಲ್ಲಿರುವ ಕಚೇರಿಗಳ ಮೇಲೆ ಶನಿವಾರ ಬೆಳಿಗ್ಗೆಯೇ ದಾಳಿ ಮಾಡಿರುವ ಎಸಿಬಿ ಅಧಿಕಾರಿಗಳು, ಶೋಧ ನಡೆಸುತ್ತಿದ್ದಾರೆ.

ತ್ಯಾಜ್ಯ ಸಂಸ್ಕರಣೆಯ ಗುತ್ತಿಗೆ ಪಡೆದ ಖಾಸಗಿ ಕಂಪನಿಯು ಸರ್ಕಾರಿ ಜಮೀನು ಅಡವಿಟ್ಟು ₹ 52.75 ಕೋಟಿ ಸಾಲ ಪಡೆಯಲು ಮತ್ತು ಅಕ್ರಮವಾಗಿ ₹ 4.61 ಕೋಟಿ ಶುಲ್ಕ ಪಾವತಿಗೆ ನೆರವಾಗಿರುವ ಆರೋಪ ನಾಲ್ವರು ಅಧಿಕಾರಿಗಳ ಮೇಲಿದೆ. ಎಸಿಬಿಯ ಬೆಂಗಳೂರು ನಗರ ಎಸ್‌ಪಿ ಕುಲದೀಪ್‌ಕುಮಾರ್ ಆರ್‌. ಜೈನ್‌ ನೇತೃತ್ವದಲ್ಲಿ ಏಳು ಸ್ಥಳಗಳಲ್ಲಿ ಶೋಧ ನಡೆಯುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಅಕ್ರಮದ ಕುರಿತು ಪ್ರಾಥಮಿಕ ವಿಚಾರಣೆ ನಡೆಸಿದ್ದ ಎಸಿಬಿ ಅಧಿಕಾರಿಗಳು, ಆರೋಪಿಗಳ ವಿರುದ್ಧ ಸೆಪ್ಟೆಂಬರ್‌ 8ರಂದು ಪ್ರಕರಣ ದಾಖಲಿಸಿದ್ದರು. ಅದೇ ದಿನ ಶ್ರೀನಿವಾಸ ಗಾಯತ್ರಿ ರಿಸೋರ್ಸ್‌ ರಿಕವರಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ರಮೇಶ್‌ ಬಿಂಗಿ, ಪಾಲಿಕೆಯ ನಿವೃತ್ತ ಸಹಾಯಕ ಎಂಜಿನಿಯರ್‌ಗಳಾದ ಶಿವಲಿಂಗೇಗೌಡ ಮತ್ತು ಚನ್ನಕೇಶವ ಅವರ ಮೇಲೆ ದಾಳಿ ನಡೆಸಿದ್ದರು. ಅದರ ಮುಂದುವರಿದ ಭಾಗವಾಗಿ ಶನಿವಾರದ ಕಾರ್ಯಾಚರಣೆ ನಡೆಯುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.