ADVERTISEMENT

ಬೆಂಗಳೂರು | ಪ್ರತ್ಯೇಕ ಅಪಘಾತ: ಇಬ್ಬರ ಸಾವು

ಚನ್ನಸಂದ್ರ, ಹೆಬ್ಬಾಳದ ಮೇಲ್ಸೇತುವೆಯಲ್ಲಿ ಸಂಭವಿಸಿದ ಅಪಘಾತ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2024, 1:01 IST
Last Updated 20 ಅಕ್ಟೋಬರ್ 2024, 1:01 IST
<div class="paragraphs"><p>ಸಾವು</p></div>

ಸಾವು

   

(ಪ್ರಾತಿನಿಧಿಕ ಚಿತ್ರ)

ಬೆಂಗಳೂರು: ನಗರದಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ಅಪಘಾತ ಪ್ರಕರಣ ಗಳಲ್ಲಿ ಸೆಕ್ಯೂರಿಟಿ ಗಾರ್ಡ್ ಸೇರಿ ಇಬ್ಬರು ಮೃತಪಟ್ಟಿದ್ದಾರೆ.

ADVERTISEMENT

ವೈಟ್‌ಫೀಲ್ಡ್‌ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಟಿಪ್ಪರ್ ಡಿಕ್ಕಿ ಹೊಡೆದು ಪಾದಚಾರಿ, ಮುನ್ನೇಕೊಳಾಲು ನಿವಾಸಿ ಬಾಬು (49) ಮೃತಪಟ್ಟರು.

ಚನ್ನಸಂದ್ರದ ಹೋಪ್ ಫಾರ್ಮ್ ಜಂಕ್ಷನ್‌ನಲ್ಲಿ ಶುಕ್ರವಾರ ರಾತ್ರಿ 10 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ. ಈ ಸಂಬಂಧ ಟಿಪ್ಪರ್ ಚಾಲನಕನನ್ನು ವಶಕ್ಕೆ ಪಡೆಯಲಾಗಿದೆ ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದರು.

‘ಮೃತ ಬಾಬು ಅವರು ಅಂಗವಿಕಲ ರಾಗಿದ್ದರು. ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು’ ಎಂದು ಪೊಲೀಸರು ಹೇಳಿದರು.

ಈ ಸಂಬಂಧ ವೈಟ್‌ಫೀಲ್ಡ್‌ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೆಸಿಬಿ ಡಿಕ್ಕಿ– ಬೈಕ್ ಸವಾರ ಸಾವು: ಹೆಬ್ಬಾಳದ ಸಂಚಾರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಜೆಸಿಬಿ ಯಂತ್ರಕ್ಕೆ ಹಿಂದಿನಿಂದ ದ್ವಿಚಕ್ರ ವಾಹನ ಡಿಕ್ಕಿಯಾಗಿ ಲಾಜಿಸ್ಟಿಕ್ ಕಂಪನಿಯ ನೌಕರ, ಭದ್ರಪ್ಪಲೇಔಟ್ ನಿವಾಸಿ ಅಜಯ್ ಮುರುಳಿ(30) ಮೃತಪಟ್ಟಿದ್ದಾರೆ.

ಶುಕ್ರವಾರ ರಾತ್ರಿ ಸುಮಾರು 11 ಗಂಟೆ ಸುಮಾರಿಗೆ ಎಸ್ಟೀಮ್ ಮಾಲ್ ಕಡೆಯಿಂದ ನಾಗವಾರ ಕಡೆಗೆ ತೆರಳುವಾಗ ಹೆಬ್ಬಾಳ ಮೇಲ್ಸೇತುವೆ ಬಳಿ ಘಟನೆ ನಡೆದಿದೆ. ಲಾಜಿಸ್ಟಿಕ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಅವರು ಶನಿವಾರ ಹೊಸೂರಿನತ್ತ ತೆರಳುವಾಗ ಅಪಘಾತ ಸಂಭವಿಸಿದೆ. ಜೆಸಿಬಿ ಯಂತ್ರದ ಚಾಲಕ ಪರಾರಿಯಾಗಿದ್ದಾನೆ. ಹೆಬ್ಬಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮನೆಯಲ್ಲಿ ಗಲಾಟೆ: ಯುವತಿ ಆತ್ಮಹತ್ಯೆ

ಬೆಂಗಳೂರು: ಮನೆಯಲ್ಲಿ ನಡೆದ ಗಲಾಟೆಯ ವೇಳೆ ತಂದೆ ಬುದ್ದಿ ಮಾತು ಹೇಳಿದ್ದಕ್ಕೆ ಮನನೊಂದು ಪುತ್ರಿ ನೇಣುಬಿಗಿದುಕೊಂಡು ಶುಕ್ರವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಖಾಸಗಿ ಕಾಲೇಜಿನಲ್ಲಿ ಬಿಬಿಎ ವ್ಯಾಸಂಗ ಮಾಡುತ್ತಿದ್ದ, ಚಾಮರಾಜಪೇಟೆಯ ನಿವಾಸಿ ಡಿ.ಶ್ರಾವ್ಯಾ (19) ಆತ್ಮಹತ್ಯೆ ಮಾಡಿಕೊಂಡವರು.

‘ಶ್ರಾವ್ಯಾ ಅವರು ತಂದೆ–ತಾಯಿ ಜತೆಗೆ ಚಾಮರಾಜಪೇಟೆಯಲ್ಲಿ ನೆಲಸಿದ್ದರು. ಕೌಟುಂಬಿಕ ವಿಚಾರಕ್ಕೆ ಒಂದು ವಾರದಿಂದ ಗಲಾಟೆ ನಡೆಯುತ್ತಿತ್ತು. ಶುಕ್ರವಾರ ಅಕ್ಕನ ಜತೆಗೂ ಶ್ರಾವ್ಯಾ ಗಲಾಟೆ ಮಾಡಿಕೊಂಡಿದ್ದರು. ಆಗ ಮಧ್ಯ ಪ್ರವೇಶಿಸಿದ್ದ ತಂದೆ ಶ್ರಾವ್ಯಾ ಅವರಿಗೆ ಬುದ್ದಿಮಾತು ಹೇಳಿದ್ದರು. ಇದರಿಂದ ಮನನೊಂದು ಮನೆಯ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಚಾಮರಾಜಪೇಟೆ ಠಾಣೆಯಲ್ಲಿ ಸಹಜ ಸಾವು ಪ್ರಕರಣ ದಾಖಲಾಗಿದೆ.

ಪುತ್ರನ ಕೊಲೆ: ತಂದೆಯ ಬಂಧನ

ಬೆಂಗಳೂರು: ಮದ್ಯ ಸೇವಿಸಿ ಮನೆಗೆ ಬಂದು ಗಲಾಟೆ ಮಾಡುತ್ತಿದ್ದ ಪುತ್ರನನ್ನು ಕೊಲೆ ಮಾಡಿದ್ದ ಆರೋಪದ ಅಡಿ ತಂದೆಯನ್ನು ಕೆಂಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ನಾಗದೇವನಹಳ್ಳಿ ನಿವಾಸಿ ರಾಜೇಶ್ (35) ಕೊಲೆಯಾದ ವ್ಯಕ್ತಿ. ಅವರ ತಂದೆ ಲಿಂಗಪ್ಪ (58) ಅವರನ್ನು ಬಂಧಿಸಲಾಗಿದೆ. ಮಂಡ್ಯ ಜಿಲ್ಲೆಯ ನವುಲೆ ಗ್ರಾಮದ ಲಿಂಗಪ್ಪ ತುಂಬ ಹಿಂದೆ ಬೆಂಗಳೂರಿಗೆ ಬಂದಿದ್ದರು. ‘ಶುಕ್ರವಾರ ಮದ್ಯ ಸೇವಿಸಿ ಬಂದಿದ್ದ ರಾಜೇಶ್, ತಂದೆಯ ಜತೆಗೆ ವಾಗ್ವಾದ ನಡೆಸಿದ್ದರು. ಗಲಾಟೆ ವಿಕೋಪ ಹೋದಾಗ ರಾಜೇಶ್‌ನ ಕೈಗಳನ್ನು ಹಿಂದಕ್ಕೆ ಕಟ್ಟಿ, ಮರದ ಪಟ್ಟಿಯಿಂದ ತಲೆಗೆ ಹೊಡೆದಿದ್ದಾರೆ. ಆಗ ಅವರು ಮೃತಪಟ್ಟಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಪತ್ನಿ ಕೊಲೆ: ಪತಿಯ ಬಂಧನ

ಬೆಂಗಳೂರು: ಬಾಗಲೂರು ಪೊಲೀಸ್ ಠಾಣಾ ವ್ಯಾಪ್ತಿಯ ಸಿಂಗೇನಹಳ್ಳಿಯಲ್ಲಿ ಪತ್ನಿ ಕೊಲೆ ಮಾಡಿದ್ದ ಆರೋಪದ ಅಡಿ ಮೃತಳ ಪತಿ ಶ್ರೀನಿವಾಸ್‌(50) ಅವರನ್ನು ಪೊಲೀಸರು ಬಂಧಿಸಿದ್ದಾರೆ. ಸುಧಾ ಕೊಲೆಯಾದವರು. 

‘ಶ್ರೀನಿವಾಸ್ ಅವರು ಕೋಳಿ ಮಾಂಸದ ವ್ಯಾಪಾರ ನಡೆಸುತ್ತಿದ್ದಾರೆ. ಮದ್ಯ ಸೇವಿಸಿ ಮನೆಗೆ ಬಂದು ಗಲಾಟೆ ನಡೆಸುತ್ತಿದ್ದರು. ಪತ್ನಿ ಬೇಸತ್ತು ಇತ್ತೀಚೆಗೆ ತವರು ಮನೆಗೆ ಹೋಗಿದ್ದರು. ನಂತರ, ಸಂಬಂಧಿಕರ ಸಮ್ಮುಖದಲ್ಲಿ ರಾಜಿಯಾಗಿ ಮರಳಿದ್ದರು. ‘ಶುಕ್ರವಾರ ರಾತ್ರಿ ಮತ್ತೆ ಇಬ್ಬರ ಮಧ್ಯೆ ಗಲಾಟೆ ನಡೆದಿದೆ. ತಡರಾತ್ರಿ ಕೋಳಿ ಕತ್ತರಿಸುವ ಮಚ್ಚಿನಿಂದ ಸುಧಾ ಅವರ ತಲೆ ಹಾಗೂ ಕೈಗೆ ಹೊಡೆದು ಕೊಲೆ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಬಾಗಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.