ಬೆಂಗಳೂರು: ಕರ್ನಾಟಕ ರಾಜ್ಯ ದಿನಪತ್ರಿಕೆ ವಿತರಣಾ ಕಾರ್ಮಿಕರ ಅಪಘಾತ ಪರಿಹಾರ ಮತ್ತು ವೈದ್ಯಕೀಯ ಸೌಲಭ್ಯ ಯೋಜನೆಯ ಫಲಾನುಭವಿಗಳಾದ ದಿನಪತ್ರಿಕೆ ವಿತರಣಾ ಕಾರ್ಮಿಕರ ವಯೋಮಿತಿಯನ್ನು 70 ವರ್ಷಕ್ಕೆ ವಿಸ್ತರಿಸಲಾಗಿದೆ.
ಈ ಬಗ್ಗೆ ಕಾರ್ಮಿಕ ಇಲಾಖೆ ತಿದ್ದುಪಡಿ ಆದೇಶ ಹೊರಡಿಸಿದೆ. ಅಸಂಘಟಿತ ವಲಯದ ವ್ಯಾಪ್ತಿಯಲ್ಲಿ ಬರುವ ದಿನಪತ್ರಿಕೆ ವಿತರಣಾ ಕಾರ್ಮಿಕರಿಗೆ ಅಪಘಾತ ಪರಿಹಾರ ಮತ್ತು ವೈದ್ಯಕೀಯ ಸೌಲಭ್ಯಕ್ಕೆ ಕಳೆದ ವರ್ಷ ಯೋಜನೆ ಜಾರಿ ಮಾಡಿದ್ದ ಸರ್ಕಾರ, ಅರ್ಜಿದಾರರು 16ರಿಂದ 59 ವರ್ಷದವರಾಗಿರಬೇಕೆಂದು ಆದೇಶದಲ್ಲಿ ಹೇಳಿತ್ತು. ಇದರಿಂದಾಗಿ ಕೆಲವರು ಈ ಸೌಲಭ್ಯದಿಂದ ವಂಚಿತರಾಗಿದ್ದರು. ಈಗ ಆದೇಶ ತಿದ್ದುಪಡಿ ಮಾಡಿ, ವಯೋಮಿತಿ ವಿಸ್ತರಿಸಲಾಗಿದೆ.
ಅಪಘಾತದಿಂದ ಮರಣ ಹೊಂದಿದಲ್ಲಿ ₹ 2 ಲಕ್ಷ, ಅಪಘಾತದಿಂದ ಅಂಗವಿಕಲರಾದಲ್ಲಿ ₹ 2 ಲಕ್ಷದವರೆಗೆ ಯೋಜನೆಯಡಿ ಆರ್ಥಿಕ ನೆರವು ನೀಡಲಾಗುತ್ತದೆ. ಅಪಘಾತ, ಮಾರಣಾಂತಿಕ ಕಾಯಿಲೆ ಅಥವಾ ಗಂಭೀರ ಅನಾರೋಗ್ಯ ಸಮಸ್ಯೆಗೆ ಒಳಗಾದಲ್ಲಿ ₹ 1 ಲಕ್ಷದವರೆಗೆ ಆಸ್ಪತ್ರೆ ವೆಚ್ಚ ಮರುಪಾವತಿಸಲಾಗುತ್ತದೆ.
ಎಲ್ಲ ಪತ್ರಿಕಾ ವಿತರಕರು ಇ-ಶ್ರಮ್ ಪೋರ್ಟಲ್ (eshram.gov.in) ಮೂಲಕ ಹೆಸರು ನೋಂದಾಯಿಸಿಕೊಳ್ಳಬೇಕು. ಯೋಜನೆಯ ಪ್ರಯೋಜನವನ್ನು ಪಡೆಯಲು ನಿಗದಿಪಡಿಸಿದ ಅರ್ಜಿ ನಮೂನೆಯೊಂದಿಗೆ ಅಗತ್ಯ ದಾಖಲಾತಿಗಳನ್ನು ಸಲ್ಲಿಸಬೇಕು ಎಂದು ಇಲಾಖೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.