ADVERTISEMENT

BMTC ಬಸ್, ಕಾರು, ಸ್ಕೂಟಿ ಡಿಕ್ಕಿ: 50 ಅಡಿ ದೂರಕ್ಕೆ ಮಹಿಳೆಯ ಎಳೆದೊಯ್ದ ಕಾರು

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2024, 14:38 IST
Last Updated 8 ಅಕ್ಟೋಬರ್ 2024, 14:38 IST
ಅಪಘಾತದ ದೃಶ್ಯ 
ಅಪಘಾತದ ದೃಶ್ಯ    

ಬೆಂಗಳೂರು: ಇಲ್ಲಿನ ಉಲ್ಲಾಳು ಸಮೀಪದ 100 ಅಡಿ ರಸ್ತೆಯಲ್ಲಿ ಮಂಗಳವಾರ ಬೆಳಿಗ್ಗೆ ಸ್ಕೂಟಿಗೆ ಬಿಎಂಟಿಸಿ ಬಸ್‌ ತಾಕಿದ್ದರಿಂದ ರಸ್ತೆಗೆ ಬಿದ್ದ ಮಹಿಳೆಯೊಬ್ಬರಿಗೆ ಹಿಂದೆ ಬರುತ್ತಿದ್ದ ಕಾರು ಡಿಕ್ಕಿಯಾಗಿ, ಅವರನ್ನು 50 ಅಡಿಗೂ ಹೆಚ್ಚು ದೂರಕ್ಕೆ ಎಳೆದೊಯ್ದ ಪರಿಣಾಮ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಉಲ್ಲಾಳು ಉಪನಗರ ನಿವಾಸಿ ಮೋನಿಕಾ (28) ಮೃತಪಟ್ಟವರು.

ಉಲ್ಲಾಳು ಸಮೀಪದ ಹೊರವರ್ತುಲ ರಸ್ತೆಯಲ್ಲಿರುವ ಶೋ ರೂಮ್‌ವೊಂದರಲ್ಲಿ ಮಾನವ ಸಂಪನ್ಮೂಲ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಮೋನಿಕಾ ಅವರು ಮಂಗಳವಾರ ಬೆಳಿಗ್ಗೆ ಸ್ಕೂಟಿಯಲ್ಲಿ ಕೆಲಸಕ್ಕೆ ತೆರಳುತ್ತಿದ್ದರು. ಆ ಸಂದರ್ಭದಲ್ಲಿ ಅಪಘಾತ ಸಂಭವಿಸಿದೆ ಎಂದು ಸಂಚಾರ ವಿಭಾಗದ ಪೊಲೀಸರು ಹೇಳಿದರು.

ADVERTISEMENT

‘ಉಲ್ಲಾಳು ಉಪ ನಗರದ ಕೆರೆ ಬಳಿಯ ರಸ್ತೆಯಲ್ಲಿ ತೆರಳುವಾಗ ಅತಿವೇಗದಿಂದ ಬಂದ ಬಿಎಂಟಿಸಿ ಬಸ್‌, ಸ್ಕೂಟಿಗೆ ತಾಕಿದೆ. ಇದರಿಂದ ನಿಯಂತ್ರಣ ತಪ್ಪಿ ಮೋನಿಕಾ ಅವರು ರಸ್ತೆಗೆ ಬಿದ್ದಿದ್ದರು. ಅದೇ ಸಮಯಕ್ಕೆ ಹಿಂದಿನಿಂದ ವೇಗವಾಗಿ ಬರುತ್ತಿದ್ದ ಕಾರು ಮೋನಿಕಾ ಅವರಿಗೆ ಡಿಕ್ಕಿಯಾಗಿದೆ. ಅವರನ್ನು ಕಾರು ಎಳೆದೊಯ್ದ ಪರಿಣಾಮ ಆಕೆ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ’ ಎಂದು ಪೊಲೀಸರು ಹೇಳಿದರು.

‘ಮಾಹಿತಿ ತಿಳಿದ ತಕ್ಷಣವೇ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಲಾಯಿತು. ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

ವಾಹನ ಜಪ್ತಿ: ‘ಬಿಎಂಟಿಸಿ ಬಸ್‌ ಹಾಗೂ ಕಾರನ್ನು ಜಪ್ತಿ ಮಾಡಲಾಗಿದೆ. ಇಬ್ಬರೂ ಚಾಲಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ’ ಎಂದು ಪೊಲೀಸರು ತಿಳಿಸಿದರು.

ಕಾಮಗಾರಿ ನಡೆಯುತ್ತಿದ್ದ ಕಾರಣ ರಸ್ತೆಯ ಒಂದೇ ಬದಿಯಲ್ಲಿ ವಾಹನಗಳ ಓಡಾಟಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಬೆಳಿಗ್ಗೆ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಿತ್ತು. ಬಸ್‌ ನಿಧಾನಕ್ಕೆ ಚಲಿಸುತ್ತಿತ್ತು. ಬಸ್‌ಗೆ ಸ್ಕೂಟಿ ಮೊದಲು ಡಿಕ್ಕಿಯಾಗಿತ್ತು. ಅದೇ ವೇಳೆಯಲ್ಲಿ ವೇಗವಾಗಿ ಬಂದ ಕಾರು ಅವರನ್ನು ಎಳೆದೊಯ್ದ ಪರಿಣಾಮ ಅನಾಹುತ ಸಂಭವಿಸಿದೆ ಎಂದು ಬಸ್‌ ಚಾಲಕ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.

ಮೋನಿಕಾ ಸಂಬಂಧಿಕರು ನೀಡಿದ ದೂರು ಆಧರಿಸಿ ಜ್ಞಾನಭಾರತಿ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ಮುಂದುವರಿದಿದೆ.

ಮೋನಿಕಾ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.