ಬೆಂಗಳೂರು: ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ನಟಿ ಶರ್ಮಿಳಾ ಮಾಂಡ್ರೆ ಇದ್ದ ಕಾರು ಅಪಘಾತಕ್ಕೀಡಾದ ಪ್ರಕರಣ ಸಂಬಂಧ ಹೈಗ್ರೌಂಡ್ಸ್ ಠಾಣೆ ಪೊಲೀಸರು, 4ನೇ ಎಸಿಎಂಎಂ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ.
’ಕಾರು ಚಾಲಕ ಡಾನ್ ಥಾಮಸ್ ಎಂಬಾತನ ನಿರ್ಲಕ್ಷ್ಯ ಹಾಗೂ ಅತೀ ವೇಗದ ಚಾಲನೆಯಿಂದ ಅಪಘಾತ ಸಂಭವಿಸಿದೆ’ ಎಂದು 33 ಪುಟಗಳ ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ನಟಿ ಶರ್ಮಿಳಾ ಮಾಂಡ್ರೆ ಅವರನ್ನು ಸಾಕ್ಷಿಯನ್ನಾಗಿ ಪರಿಗಣಿಸಲಾಗಿದೆ.
‘ಅಪಘಾತದ ವೇಳೆ ನಟಿ ಶರ್ಮಿಳಾ ಮಾಂಡ್ರೆ ಕಾರಿನ ಹಿಂಬದಿ ಸೀಟಿನಲ್ಲಿದ್ದರು. ಹೀಗಾಗಿ, ಅವರಿಗೂ ಅಪಘಾತಕ್ಕೂ ಯಾವುದೇ ಸಂಬಂಧವಿಲ್ಲ. ಎಫ್‌ಐಆರ್‌ನಲ್ಲೂ ಅವರ ಹೆಸರು ಇರಲಿಲ್ಲ. ಅಪಘಾತದ ಬಗ್ಗೆ ಅವರ ಹೇಳಿಕೆಯನ್ನೂ ಪಡೆದು ದೋಷಾರೋಪ ಪಟ್ಟಿಯಲ್ಲಿ ಸೇರಿಸಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
ಲಾಕ್‌ಡೌನ್ ಸಂದರ್ಭದಲ್ಲೇ ಪೊಲೀಸ್ ಇಲಾಖೆ ಪಾಸ್ ಹೊಂದಿದ್ದ ಕಾರು ವಸಂತನಗರ ಕೆಳ ಸೇತುವೆಯಲ್ಲಿ ಕಂಬಕ್ಕೆ ಡಿಕ್ಕಿ ಹೊಡೆದಿತ್ತು. ಶರ್ಮಿಳಾ ಮಾಂಡ್ರೆ ಸೇರಿದಂತೆ ಹಲವರು ಗಾಯಗೊಂಡಿದ್ದರು.
ಇತ್ತೀಚೆಗೆ ಸುದ್ದಿ ಆಗಿರುವ ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್ ದಂಧೆ ಬಗ್ಗೆ ಹೇಳಿಕೆ ನೀಡಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್, ನಟಿ ಶರ್ಮಿಳಾ ಮಾಂಡ್ರೆ ಕಾರು ಅಪಘಾತವನ್ನು ಪ್ರಸ್ತಾಪಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.