ADVERTISEMENT

ಅಪಘಾತ ಪ್ರಕರಣ: ಆರೋಪಿ ಪತ್ತೆಗೆ 200 ಸಿಸಿಟಿವಿ ಕ್ಯಾಮೆರಾಗಳ ಪರಿಶೀಲನೆ

ಕಾರು ನಿಲ್ಲಿಸದೇ ಪರಾರಿಯಾಗಿದ್ದ ಚಾಲಕ ಸೆರೆ: ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸರ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2024, 0:36 IST
Last Updated 20 ನವೆಂಬರ್ 2024, 0:36 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಬೆಂಗಳೂರು: ತಿಗಳರಪಾಳ್ಯ ಮುಖ್ಯ ರಸ್ತೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ಕಾರು ನಿಲುಗಡೆ ಮಾಡದೇ ಪರಾರಿಯಾಗಿದ್ದ ಚಾಲಕ, ಹಾಸನ ಜಿಲ್ಲೆ ಚನ್ನರಾಯಪಟ್ಟಣದ ನಿವಾಸಿ ಕಾಜಾ ಮೊಹಿದ್ದೀನ್‌ ಎಂಬಾತನನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ನ.13ರಂದು ಮಧ್ಯರಾತ್ರಿ 2ರ ಸುಮಾರಿಗೆ ಕೆಂಪೇಗೌಡ ವೃತ್ತದಲ್ಲಿ ಸಂಭವಿಸಿದ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ಶಶಿಕುಮಾರ್(20) ಅವರು ಮೃತಪಟ್ಟಿದ್ದರು.

ADVERTISEMENT

ಬಾಗೇಪಲ್ಲಿಯ ಶಶಿಕುಮಾರ್ ಅವರು ಪೀಣ್ಯದ ಕಾರ್ಖಾನೆಯೊಂದರಲ್ಲಿ ಫ್ಯಾಬ್ರಿಕೇಷನ್ ಕೆಲಸ ಮಾಡುತ್ತಿದ್ದರು. ಅಂದು ರಾತ್ರಿ ಪಾಳಿ ಕೆಲಸ ಮುಗಿಸಿದ್ದ ಶಶಿಕುಮಾರ್ ಮಧ್ಯರಾತ್ರಿ ಸ್ಕೂಟರ್‌ನಲ್ಲಿ ವೇಗವಾಗಿ ಬರುವಾಗ ಎದುರಿನಿಂದ ಬಂದ ಕಾರು ನೋಡಿ ಗಾಬರಿಗೊಂಡು ಆಯತಪ್ಪಿ ಬಿದ್ದಿದ್ದರು. ಆಗ
ಶಶಿಕುಮಾರ್ ಮೇಲೆ ಕಾರು ಹರಿಸಿದ್ದ ಚಾಲಕ ಮೊಹಿದ್ದೀನ್ ಸ್ಥಳದಿಂದ ಪರಾರಿ ಆಗಿದ್ದ. ಅಪಘಾತದ
ದೃಶ್ಯ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.

ಚನ್ನರಾಯಪಟ್ಟಣದಲ್ಲಿ ವಶ: ಅಪಘಾತದ ಬಳಿಕ ಕಾರು ಚಾಲಕ ಚನ್ನರಾಯಪಟ್ಟಣಕ್ಕೆ ತೆರಳಿದ್ದ. ಮಾಹಿತಿ ಕಲೆಹಾಕಿದ ಸಂಚಾರ ವಿಭಾಗದ ಪೊಲೀಸರು, ಚನ್ನರಾಯಪಟ್ಟಣಕ್ಕೆ ತೆರಳಿ ಅಲ್ಲಿ ವಶಕ್ಕೆ ಪಡೆದುಕೊಂಡು ಬಂಧಿಸಿದರು.

‘ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದಾಗ ಕಾರಿನ‌ ನೋಂದಣಿ ಸಂಖ್ಯೆ ಪತ್ತೆ ಆಗಿರಲಿಲ್ಲ. ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಾವಳಿಯಲ್ಲೂ ಅದು ಸೆರೆ ಆಗಿರಲಿಲ್ಲ. ಕಾರಿನ ಹಿಂಬದಿಯಲ್ಲಿ ಸ್ಟಿಕರ್‌ವೊಂದನ್ನು ಅಂಟಿಸಲಾಗಿತ್ತು. ಕಾರಿನ ಒಂದು ಬಾಗಿಲಿಗೆ ಮಾತ್ರ ಸೇಫ್ಟಿ ಗಾರ್ಡ್ ಇರುವುದು ಪತ್ತೆಯಾಗಿತ್ತು. ನಂತರ, ಕಾರಿನ ಬಲಭಾಗದ ಮುಂದಿನ ಚಕ್ರಕ್ಕೆ ಮಾತ್ರ ವ್ಹೀಲ್ ಕ್ಯಾಪ್ ಇತ್ತು. ಹಿಂಬದಿ ಚಕ್ರಕ್ಕೆ ವ್ಹೀಲ್ ಕ್ಯಾಪ್ ಇರಲಿಲ್ಲ. ಕಾರಿನ ಗ್ಲಾಸಿನ ಮೇಲೆ ಸನ್‌ಗಾರ್ಡ್ ಇತ್ತು. ಇದು ಕೆಲವು ಸಿ.ಸಿ.ಟಿ.ವಿ ದೃಶ್ಯಾವಳಿಗಳಲ್ಲಿ ಸೆರೆಯಾಗಿತ್ತು. ಈ ಸುಳಿವುಗಳನ್ನು ಆಧರಿಸಿ ಕಾರನ್ನು ಪತ್ತೆ ಹಚ್ಚಲಾಯಿತು’ ಎಂದು ಸಂಚಾರ ವಿಭಾಗದ ಪೊಲೀಸರು ಹೇಳಿದರು.

ಘಟನೆ ನಡೆದಿದ್ದ ಸ್ಥಳದಿಂದ ಪಾರ್ಲೆಜೀ‌ ಟೋಲ್​ವರೆಗೆ 200ಕ್ಕೂ ಹೆಚ್ಚು ಸಿ.ಸಿ.ಟಿ.ವಿ ಕ್ಯಾಮೆರಾಗಳಲ್ಲಿ
ಸೆರೆಯಾಗಿದ್ದ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಲಾಯಿತು. ಮಂಜುನಾಥ್​ ಅವರಿಗೆ ಸೇರಿದ ಕಾರನ್ನು ಮೊಹಿದ್ದೀನ್​ ಓಡಿಸುತ್ತಿದ್ದ ಎಂದು ಪೊಲೀಸರು ಹೇಳಿದರು.

ಮದ್ಯಪಾನ ಮಾಡಿ ವಾಹನ ಚಾಲನೆ: 551 ಪ್ರಕರಣ ದಾಖಲು

ಮದ್ಯ ಸೇವಿಸಿ ವಾಹನ ಚಲಾಯಿಸುತ್ತಿದ್ದವರ ವಿರುದ್ದ ಕಾರ್ಯಾಚರಣೆ ಮುಂದುವರೆಸಿರುವ ನಗರ ಸಂಚಾರ ವಿಭಾಗದ ಪೊಲೀಸರು ನಿಯಮ ಉಲ್ಲಂಘಿಸಿದ 551 ಮಂದಿ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ನ.11ರಿಂದ 17ರ ವರೆಗೆ ವಾಹನ ಚಾಲಕರು ಹಾಗೂ ಬೈಕ್‌ ಸವಾರರ ವಿರುದ್ಧ 50 ಸಂಚಾರ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಒಟ್ಟು 43751 ವಿವಿಧ ಮಾದರಿಯ ವಾಹನಗಳನ್ನು ತಪಾಸಣೆ ನಡೆಸಲಾಯಿತು ಎಂದು ಸಂಚಾರ ವಿಭಾಗದ ಪೊಲೀಸರು ಹೇಳಿದರು. ಅತಿವೇಗದಿಂದ ವಾಹನ ಚಾಲನೆ ಮಾಡುತ್ತಿದ್ದ 176 ಮಂದಿ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು ₹1.76 ಲಕ್ಷ ದಂಡ ಸಂಗ್ರಹಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.